ಯಲಬುರ್ಗಾ: ಜಾನುವಾರುಗಳಿಗೆ ಚರ್ಮಗಂಟು ರೋಗ ತಡೆಯಲು ಮುಂಜಾಗ್ರತಾ ಕ್ರಮವಾಗಿ ಶನಿವಾರ ತಾಲ್ಲೂಕಿನ ಜಾನುವಾರುಗಳಿಗೆ ಗೋಟ್ ಪಾಕ್ಸ್ ಕ್ರಾಸ್ ಇಮ್ಯುನಿಟಿ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ತಾಲ್ಲೂಕಿನಾದ್ಯಂತ ಎಮ್ಮೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತಿದೆ. ಸುಮಾರು 28 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವ ಜಾನುವಾರುಗಳಿಗೆ ಲಸಿಕೆ ಹಾಕಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಜಿಲ್ಲಾ ಕೇಂದ್ರದಿಂದ 25ಸಾವಿರ ಡೋಸ್‍ಗಳು ತಾಲ್ಲೂಕಿಗೆ ಪೂರೈಕೆಯಾಗಿವೆ. ಉಚಿತವಾಗಿ ಹಾಕುವ ಈ ಅಭಿಯಾನದ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಪಶು ವೈದ್ಯಾಧಿಕಾರಿ ಪ್ರಕಾಶ ಚೂರಿ ತಿಳಿಸಿದ್ದಾರೆ.
ಮನೆ–ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಾಗುತ್ತಿದೆ. ಇದಕ್ಕೂ ಮುನ್ನ ಅಭಿಯಾನದ ಬಗ್ಗೆ ಧ್ವನಿವರ್ದಕದ ಮೂಲಕ ಮಾಹಿತಿ ನೀಡಲಾಗುತ್ತಿದೆ. ಪಶು ಸಖಿಯರು, ಮೈತ್ರಿ ಕಾರ್ಯಕರ್ತರು ಹಾಗೂ ಹೊರಗುತ್ತಿಗೆ ಕಾರ್ಮಿಕರು ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಇದೇ ತಿಂಗಳಲ್ಲಿ ಅಭಿಯಾನ ಪೂರ್ಣಗೊಳಿಸಲಾಗುವುದು. ಈಗಾಗಲೇ 20 ಸಾವಿರಕ್ಕು ಅಧಿಕ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ ಎಂದು ವಿವರಿಸಿದರು.
ದೇವರಾಜ ಹೊಸೂರ, ಹುಸೇನ ಭಾಷಾ, ಪ್ರಮೋದ, ಕಪೀಲ, ಪಶುಸಖಿ ಯಮನಮ್ಮ, ಚಂದ್ರು, ಶಿವ ಶರಣಪ್ಪ, ಶಿವು ಕೊಳಿಹಾಳ, ಎಂ.ವೈ. ಕಟ್ಟಿಮನಿ, ಬಸಯ್ಯ, ಮಂಜು ಬಸವರಾಜ ಗೋಡಿ, ಹನಮಂತಪ್ಪ ಹರಿಜನ ಇತರರು ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.