ಕೊಪ್ಪಳ: ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳ ಜನರಿಗೆ ಅನ್ನದಾತವಾಗಿರುವ ತುಂಗಭದ್ರಾ ಜಲಾಶಯದಲ್ಲಿ ತಿಂಗಳ ಹಿಂದೆ ಮನೆ ಮಾಡಿದ್ದ ವಿಷಾದದ ಛಾಯೆ ಕರಗಿ ಈಗ ನೀರಿನಿಂದ ನಳನಳಿಸುತ್ತಿದ್ದು ಬಾಗಿನ ಅರ್ಪಣೆ ಸಂಭ್ರಮ ಮನೆ ಮಾಡಿದೆ.
ತಿಂಗಳ ಹಿಂದೆ 19ನೇ ಕ್ರಸ್ಟ್‌ಗೇಟ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿ ಮತ್ತೆ ಭರ್ತಿಯಾಗಿದ್ದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ನಾಲ್ಕೂ ಜಿಲ್ಲೆಗಳ ಜನರಲ್ಲಿ ಈಗ ಖುಷಿ ಕಳೆಕಟ್ಟಿದೆ. ಒಟ್ಟು 105.78 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದ ಗೇಟ್ ಅಳವಡಿಕೆ ಕಾರ್ಯ ಪೂರ್ಣಗೊಂಡಾಗ 71 ಟಿ.ಎಂ.ಸಿ. ಅಡಿ ನೀರು ಉಳಿದಿತ್ತು. ಶನಿವಾರದ ಬೆಳಿಗ್ಗೆಯ ಅಂತ್ಯಕ್ಕೆ 101.773 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಈ ಅವಘಡ ಸಂಭವಿಸುವ ಎರಡ್ಮೂರು ದಿನಗಳ ಮೊದಲೇ ನಡೆಯಬೇಕಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮ ಮುಂದೂಡಲಾಗಿತ್ತು. ಆಗ ಗೇಟ್ ಒಡೆದಿದ್ದರಿಂದ ಮತ್ತೆ ಮುಂದೂಡಿದ್ದ ಬಾಗಿನ ಸಮರ್ಪಣೆಗೆ ಈಗ ‘ಮುಹೂರ್ತ’ ಕೂಡಿ ಬಂದಿದೆ.
ಕ್ರಸ್ಟ್ ಗೇಟ್ ಮರು ಅಳವಡಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಅನೇಕ ಟೀಕೆ ಟಿಪ್ಪಣೆಗಳು ಕೇಳಿಬಂದಿದ್ದವು. ಇವೆಲ್ಲವುಗಳ ನಡುವೆಯೂ ಕ್ರಸ್ಟ್‌ಗೇಟ್ ತಜ್ಞ ಕನ್ನಯ್ಯನಾಯ್ಡು ಹಾಗೂ ಅವರ ತಂಡದವರು ಗೇಟ್ ಅಳವಡಿಸುವಲ್ಲಿ ಯಶಸ್ವಿಯಾಗಿದ್ದು ಎಲ್ಲರ ಖುಷಿಗೆ ಕಾರಣವಾಗಿದೆ. ಇದೇ ವೇದಿಕೆಯಲ್ಲಿ ಗೇಟ್ ಸುರಕ್ಷಿತವಾಗಿ ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಿಬ್ಬಂದಿ, ತಂತ್ರಜ್ಞರು ಹಾಗೂ ಪ್ರತಿನಿಧಿಗಳ ಸನ್ಮಾನ ಜರುಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಮುನಿರಾಬಾದ್ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ ಸೇರಿದಂತೆ ಫಲಾನುಭವಿ ಜಿಲ್ಲೆಗಳ ಸಚಿವರು, ಶಾಸಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಶಂಕುಸ್ಥಾಪನೆ: ಬಾಗಿನ ಅರ್ಪಣೆ ಬಳಿಕ ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಇದೇ ವೇಳೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಚಾಲನೆ ನೀಡುವರು. ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ ಕೊಪ್ಪಳ ನಗರ ಮತ್ತು ಭಾಗ್ಯನಗರ ಪಟ್ಟಣಗಳಿಗೆ ಸಂಯುಕ್ತ ಕುಡಿಯುವ ನೀರು ಸರಬರಾಜು ಕಲ್ಪಿಸುವ ಯೋಜನೆಯ ಶಂಕುಸ್ಥಾಪನೆ ನಡೆಯಲಿದೆ.
ತುಂಗಭದ್ರಾ ಜಲಾಶಯದ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎಲ್ಲರೂ ಸಂಭ್ರಮದಿಂದ ಭಾಗವಹಿಸಬೇಕು.ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವ
ಇಂದಿನ ಕಾರ್ಯಕ್ರಮಗಳ ವಿವರ
* ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಬೆಳಿಗ್ಗೆ 10.50ಕ್ಕೆ ಗಿಣಿಗೇರಿ ಎಂಎಸ್‌ಪಿಎಲ್ ಏರ್‌ಸ್ಟ್ರಿಪ್ಟ್‌ಗೆ ಆಗಮನ. ಬಳಿಕ ರಸ್ತೆ ಮಾರ್ಗದ ಮೂಲಕ ತೆರಳಿ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ.
* ಬೆಳಿಗ್ಗೆ 11.55ಕ್ಕೆ ಜಲಾಶಯದ ಗೇಟ್ ದುರಸ್ತಿ ಕಾರ್ಯದಲ್ಲಿ ಭಾಗಿಯಾದ ಅಧಿಕಾರಿ ಸಿಬ್ಬಂದಿ ಕಾರ್ಮಿಕರಿಗೆ ಅಭಿನಂದನಾ ಕಾರ್ಯಕ್ರಮ. ಕೊಪ್ಪಳ ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕವಾದ ಪೌರ ಕಾರ್ಮಿಕರಿಗೆ ಸಾಂಕೇತಿಕವಾಗಿ ನೇಮಕಾತಿ ಆದೇಶ ಪತ್ರ ವಿತರಣೆ
. * ಮಧ್ಯಾಹ್ನ 1.30ಕ್ಕೆ ಮುನಿರಾಬಾದ್ ಕಾರ್ಯಕ್ರಮದ ಬಳಿಕ ಟಿ.ಬಿ. ಡ್ಯಾಂನಲ್ಲಿರುವ ವೈಕುಂಠ ಅತಿಥಿ ಗೃಹ. * ಮಧ್ಯಾಹ್ನ 3.50ಕ್ಕೆ ಗಿಣಿಗೇರಿ ಏರ್‌ಸ್ಟ್ರಿಪ್ಟ್ ಮೂಲಕ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ.
ಎಲ್ಲೆಡೆಯೂ ಪೊಲೀಸ್ ಕಣ್ಗಾವಲು ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಸಚಿವರು ಹಾಗೂ ಶಾಸಕರು ಸೇರಿ ಅನೇಕ ಪ್ರಮುಖರು ಜಿಲ್ಲೆಗೆ ಬರಲಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ‘ಹೆಚ್ಚುವರಿ ಎಸ್.ಪಿ. 10 ಜನ ಡಿವೈಎಸ್‌ಪಿ 28 ಜನ ಸಿಪಿಐ 68 ಜನ ಪಿಎಸ್‌ಐ 600 ಜನ ಕಾನ್‌ಸ್ಟೆಬಲ್ ನಾಲ್ಕು ಕೆಎಸ್‌ಆರ್‌ಪಿ ಎಂಟು ಡಿಎಆರ್ ಸೇರಿದಂತೆ ಎಲ್ಲ ಅಗತ್ಯ ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಜಿಲ್ಲೆಯಿಂದಷ್ಟೇ ಅಲ್ಲದೆ ವಿಜಯನಗರ ಬಳ್ಳಾರಿ ರಾಯಚೂರು ಜಿಲ್ಲೆಗಳಿಂದಲೂ ಪೊಲೀಸರನ್ನು ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್.ಎಲ್.ಅರಸಿದ್ಧಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.