ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಕನೂರು | ಬೆಳೆಗಳಿಗೆ ಕಂಟಕವಾದ ಪೈಪ್‌ಲೈನ್ ಕಾಮಗಾರಿ

ಬರಗಾಲದಿಂದ ನಷ್ಟದಲ್ಲಿರುವ ರೈತರಿಗೆ ಮತ್ತೊಂದು ಸಂಕಟ
ಮಂಜುನಾಥ ಅಂಗಡಿ
Published 24 ಡಿಸೆಂಬರ್ 2023, 6:02 IST
Last Updated 24 ಡಿಸೆಂಬರ್ 2023, 6:02 IST
ಅಕ್ಷರ ಗಾತ್ರ

ಕುಕನೂರು: ಬರಗಾಲದಿಂದಾಗಿ ನಷ್ಟದಲ್ಲಿರುವ ರೈತರಿಗೆ ಕೆರೆ ತುಂಬಿಸುವ ಪೈಪ್‌ಲೈನ್‌ ಕಾಮಗಾರಿಯಿಂದಾಗಿ ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ.

ತುಂಗಭದ್ರಾ ಜಲಾಶಯದಿಂದ ಕೊಪ್ಪಳ–ಯಲಬುರ್ಗಾ ಹಾಗೂ ಕುಕನೂರು ತಾಲ್ಲೂಕಿನ 13 ಕೆರೆಗಳಿಗೆ ₹ 290 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಪೈಪ್‌ಲೈನ್‌ ಕಾಮಗಾರಿಗೆ ಚಾಲನೆ ದೊರೆತಿದೆ. ಆದರೆ ಕಾಮಗಾರಿಯಿಂದಾಗಿ ಬೆಳೆಗಳಿಗೆ ಹಾನಿಯಾಗುತ್ತಿದ್ದು, ರೈತರ ಗೋಳು ಕೇಳುವವರು ಇಲ್ಲದಂತಾಗಿದೆ.

ರೈತರು ಜಮೀನುಗಳಲ್ಲಿ ಬೆಳೆದ ಅಲ್ಪಸ್ವಲ್ಪ ಬೆಳೆಗಳನ್ನು ಕಾಪಾಡಿಕೊಂಡು ಕಟಾವು ಮಾಡಿ ಜೀವನ ನಡೆಸುತ್ತಿದ್ದಾರೆ. ಆದರೆ ಕೆರೆ ತುಂಬಿಸುವ ಯೋಜನೆ ನೆಪದಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ರೈತರು ಬೆಳೆದಿರುವ ಬೆಳೆಗಳಿಗೆ ಹಾನಿಯಾಗುತ್ತಿದೆ. ಬಾನಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳ ಬದಿಯಲ್ಲಿ ಪೈಪ್‌ಲೈನ್ ಕಾಮಗಾರಿ ಆರಂಭಿಸಲಾಗಿದೆ. ಪೈಪ್‌ಲೈನ್‌ ಅಳವಡಿಸುವಾಗ ಸುಮಾರು 5-10 ಮೀಟರ್ ಹಾಗೂ ಕೆಲವೊಂದು ಕಡೆ 15 ಮೀಟರ್‌ವರೆಗೆ ಜಮೀನುಗಳಲ್ಲಿ ಗುಂಡಿ ಅಗೆಯಲಾಗುತ್ತಿದೆ. ಇದರಿಂದ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳು ಗುಂಡಿಯ ಮಣ್ಣಿನಲ್ಲಿ ಮುಚ್ಚಿ ಹೋಗುತ್ತಿದ್ದು, ಕೈಗೆ ಬಾರದಂತಾಗಿವೆ.

ಹಿಂಗಾರು ಹಂಗಾಮಿನಲ್ಲಿ ರೈತರು, ಕಡಲೆ, ಜೋಳ, ಮೆಕ್ಕೆಜೋಳ, ಸೂರ್ಯಕಾಂತಿ ಸೇರಿದಂತೆ ಹಲವು ವಿಧದ ಬೆಳೆಗಳನ್ನು ಬೆಳೆದಿದ್ದಾರೆ. ಸರಿಯಾದ ಸಮಯಕ್ಕೆ ಮಳೆಯಾಗಿಲ್ಲ. ಮಳೆಯಾದರೂ ಕೂಡ ರೈತರು ಬೆಳೆದ ಬೆಳೆಗಳಿಗೆ ಮೌಲ್ಯಯುತ ಬೆಲೆ ಸಿಗುತ್ತಿಲ್ಲ. ಹೀಗಾಗಿ ಈಗಾಗಲೇ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆರೆ ತುಂಬಿಸುವ ಯೋಜನೆ ಕಾಮಗಾರಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಯಾರು ಪರಿಹಾರ ನೀಡುತ್ತಾರೆ? ಗುಂಡಿ ತೆಗೆಯುವ ವೇಳೆ ಕೆಲವೊಂದಿಷ್ಟು ರೈತರು ಗುತ್ತಿಗೆದಾರರೊಂದಿಗೆ ವಾಗ್ವಾದ ಮಾಡಿ, ತಕರಾರು ತೆಗೆದಿದ್ದಾರೆ. ತಕರಾರು ತೆಗೆದ ಕೆಲವು ರೈತರಿಗೆ ಮಾತ್ರ ಗುತ್ತಿಗೆದಾರರು ಪರಿಹಾರವಂತೆ ಹೇಳಿ ಕೆಲವೊಂದಿಷ್ಟು ಹಣ ನೀಡಿ ಕೈ ತೊಳೆದುಕೊಂಡಿದ್ದಾರೆ.

ರಸ್ತೆ ಬದಿ ಕಾಮಗಾರಿ ಆರಂಭಿಸಿದರೆ, ರೈತರಿಗೆ ಅನ್ಯಾಯವಾಗದಂತೆ ಜಮೀನುಗಳಲ್ಲಿ ಬೆಳೆದ ಬೆಳೆಗಳಿಗೆ ಹಾನಿಯಾಗದಂತೆ ಕಾಮಗಾರಿಯನ್ನು ಮಾಡಬೇಕು ಎಂಬುದು ಸರ್ಕಾರದ ನಿಯಮ. ಆದರೆ ಆ ನಿಯಮಗಳು ಪಾಲನೆ ಆಗುತ್ತಿಲ್ಲ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ರೈತರ ನೆರವಿಗೆ ಧಾವಿಸಿ, ಅಗತ್ಯವಾಗಿರುವಂತಹ ಪರಿಹಾರ ಒದಗಿಸಿ ಕೊಡಬೇಕು ಎಂಬುದು ರೈತರ ಒತ್ತಾಯವಾಗಿದೆ.

ಕೆರೆ ತುಂಬಿಸುವ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆಯಿಂದ ₹1 ಕೋಟಿಗೂ ಅಧಿಕ ತೆರಿಗೆ ಹಣ ತುಂಬಲಾಗಿದೆ. ಜಮೀನುಗಳಲ್ಲಿ ಹಾನಿಯಾದ ಬೆಳೆಗಳಿಗೆ ಇಲಾಖೆಯಿಂದ ಪರಿಹಾರ ನೀಡಲು ಬರುವುದಿಲ್ಲ
ಮುರಳೀಧರ ಪಾಟೀಲ, ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ ನೀರಾವರಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT