ಕೊಪ್ಪಳ: ‘ಅದು 1978ರ ಆಸುಪಾಸಿನ ಸಮಯ. ಬಹುತೇಕ ಪತ್ರಿಕೆಗಳು ಬೆಂಗಳೂರಿನಲ್ಲಿ ಮುದ್ರಣಗೊಂಡು ರಾತ್ರಿ ವೇಳೆಗೆ ನಮ್ಮೂರು ತಲುಪುತ್ತಿದ್ದವು. ಇದರಿಂದಾಗಿ ಅಂದಿನ ಪತ್ರಿಕೆಯನ್ನು ಕೆಲ ಬಾರಿ ಅಂದು ರಾತ್ರಿ, ತಡವಾದರೆ ಮರುದಿನ ಬೆಳಿಗ್ಗೆ ಓದುಗರ ಮನೆಗಳಿಗೆ ಮುಟ್ಟಿಸಲಾಗುತ್ತಿತ್ತು. ಆಗ ಮನೆಮನೆಗೆ ನಡೆದುಕೊಂಡು ಹೋಗಿ ಪತ್ರಿಕೆ ಹಂಚಿ ಬಂದರೆ ಅದೇನೊ ಧನ್ಯತಾ ಭಾವ ನಮ್ಮನ್ನು ಆವರಿಸಿಕೊಳ್ಳುತ್ತಿತ್ತು. ನಾಲ್ಕೂವರೆ ದಶಕಗಳ ಹಿಂದೆ ಹೀಗೆ ಆರಂಭವಾದ ಅಕ್ಷರ ಲೋಕದ ಜೊತೆಗಿನ ಬಾಂಧವ್ಯ ಇಂದಿಗೂ ಮುಂದುವರಿದಿದೆ...’
ಇದು ಜಿಲ್ಲೆಯ ಕುಕನೂರು ತಾಲ್ಲೂಕಿನ ಭಾನಾಪುರದ ವೀರಣ್ಣ ಕೆ. ಪತ್ತಾರ ಹಾಗೂ ಕೊಪ್ಪಳದ ವಿರೂಪಾಕ್ಷಪ್ಪ ಮುರಳಿ ಅವರ ನೆನಪಿನ ಸುರಳಿಗಳು. 63 ವರ್ಷದ ವೀರಣ್ಣ ಹಾಗೂ 60 ವರ್ಷದ ವಿರೂಪಾಕ್ಷಪ್ಪ ಅವರು ಈಗಲೂ ಅದೇ ಹುಮ್ಮಸ್ಸಿನಿಂದ ಪತ್ರಿಕೆ ವಿತರಣೆ ಜವಾಬ್ದಾರಿ ನಿರ್ವಹಿಸುತ್ತಾರೆ.
ಇದೊಂದು ಉದಾಹರಣೆಯಷ್ಟೇ. ಬಹುತೇಕರು ಬೆಳಗಿನ ಜಾವದ ಸಕ್ಕರೆಯಂಥ ಸಿಹಿನಿದ್ದೆಯ ಸಮಯದಲ್ಲಿ ಆರಾಮವಾಗಿ ಮಲಗಿದ್ದರೆ, ಪತ್ರಿಕೆ ವಿತರಕರಿಗೆ ಅದು ದುಡಿಮೆಯ ಅಮೃತ ಕಾಲ. ನಾಲ್ಕು ಗಂಟೆಗೆಲ್ಲ ಎದ್ದು ಮುದ್ರಣಾಲಯಗಳಿಂದ ಬರುವ ಪತ್ರಿಕೆಯ ಬಂಡಲ್‌ಗಳನ್ನು ಮಟ್ಟಸವಾಗಿ ಜೋಡಿಸಿಕೊಂಡು ಮನೆಮನೆಗೆ ಹೋಗಿ ಹಂಚಿಕೆ ಮಾಡುತ್ತಾರೆ. ಗಾಳಿ, ಮಳೆ, ಚಳಿ ಇದ್ಯಾವುದನ್ನೂ ಲೆಕ್ಕಸದೇ ಅವಿರತವಾಗಿ ಪತ್ರಿಕೆಗಳು ಮತ್ತು ಓದುಗರ ನಡುವೆ ಸೇತುವೆಯಾಗಿ ಪತ್ರಿಕಾ ವಿತರಕರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ‘ಅಕ್ಷರ ಪ್ರೀತಿ ಹಂಚುವ ಕಾಯಕಯೋಗಿಗಳು’ ಎಂತಲೂ ಕರೆಯುತ್ತಾರೆ.
ಸಂಕಷ್ಟದಲ್ಲಿಯೂ ಕೆಲಸ: ಕೋವಿಡ್ ಸೋಂಕು ವ್ಯಾಪಕವಾಗಿದ್ದ ಸಮಯದಲ್ಲಿ ಜನ ಮನೆಬಿಟ್ಟು ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದರು. ಲಾಕ್‌ಡೌನ್ ಕಷ್ಟದ ಸಮಯದಲ್ಲಿ ಎಲ್ಲರೂ ಸುರಕ್ಷತೆಯ ಮೊರೆ ಹೋಗಿದ್ದರೆ ಪತ್ರಿಕಾ ವಿತರಕರು ಜೀವದ ಹಂಗು ತೊರೆದು ಕೆಲಸ ಮಾಡಿ ಮನೆಮನೆಗಳಿಗೆ ಹೋಗಿ ಪತ್ರಿಕೆಗಳನ್ನು ತಲುಪಿಸಿದ್ದಾರೆ. ವೈಯಕ್ತಿಕವಾಗಿ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದಾಗಲೂ ಪತ್ರಿಕೆ ಹಂಚುವ ಕಾಯಕ ಮಾತ್ರ ಅವಿರತ.
ಪತ್ರಿಕೆಗಳನ್ನು ಹಂಚುವ ಸಮಯದಲ್ಲಿ ದುರ್ಗಮ ಹಾದಿ, ಪ್ರಾಣಿಗಳ ದಾಳಿಯ ಭೀತಿ, ಅನಾರೋಗ್ಯ, ಮಳೆ, ಪತ್ರಿಕೆ ಹಾಕಲು ಹುಡುಗರೇ ಸಿಗುತ್ತಿಲ್ಲ ಎನ್ನುವ ಸಮಸ್ಯೆಗಳ ನಡುವೆಯೂ ಪತ್ರಿಕಾ ವಿತರಕರು ತಮ್ಮ ವೃತ್ತಿಬದ್ಧತೆ ಮೆರೆದಿದ್ದಾರೆ. ಈ ಕಾಯಕವನ್ನು ಅನೇಕರು ಹಲವು ದಶಕಗಳಿಂದ ಸಮಾಜ ಸೇವೆ ಎನ್ನುವ ಮನೋಭಾವನೆಯಿಂದ ಮಾಡುತ್ತಿದ್ದಾರೆ.
ಬೆಳಗಿನ ಜಾವದಲ್ಲಿ ಎದ್ದು ಮನೆಮನೆಗೆ ಪತ್ರಿಕೆ ತಲುಪಿಸಿದ ಕೊಪ್ಪಳ ಜಿಲ್ಲೆಯ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳಲ್ಲಿದ್ದಾರೆ. ಕೆಲವರು ಉಪನ್ಯಾಸಕರು, ಪೊಲೀಸರು, ಪ್ರಾಧ್ಯಾಪಕರು, ಎಂಜಿನಿಯರ್‌ಗಳು ಹಾಗೂ ವೈದ್ಯರು ಆದ ಉದಾಹರಣೆಗಳು ಇವೆ. ಬೆಳಗಿನ ಜಾವ ಏಳುವ ಅಭ್ಯಾಸವನ್ನೂ ಈ ವೃತ್ತಿ ಕಲಿಸುತ್ತದೆ. ಇದು ಬದುಕಿಗೆ ಶಿಸ್ತಿನ ಚೌಕಟ್ಟು ತಂದುಕೊಡುತ್ತದೆ.
ಆದರೆ, ಈ ವೃತ್ತಿ ಮಾಡುವವರಿಗೆ ಭದ್ರತೆ ಎಂಬುದೇ ಇಲ್ಲದಂತಾಗಿದೆ. ಕಾರ್ಮಿಕರ ಸಂಘಟನೆಗಳ ಯಾವ ‘ಗುಂಪಿ’ನಲ್ಲಿಯೂ ಸ್ಥಾನವಿಲ್ಲದಂತಾಗಿದೆ. ಹೀಗಾಗಿ ಅವರು ಅಭದ್ರತೆಯಲ್ಲಿ ಕೆಲಸ ಮಾಡಬೇಕಾಗಿದೆ. ರಾಜ್ಯ ಸರ್ಕಾರ ಜನರ ಬದುಕು ಹಸನಾಗಿಸಲು ಅನೇಕ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಅದೇ ರೀತಿ ಪತ್ರಿಕಾ ವಿತರಕರ ನೆಮ್ಮದಿಯ ಬದುಕಿಗೂ ಸರ್ಕಾರ ‘ಗ್ಯಾರಂಟಿ’ ಕೊಡಬೇಕಾಗಿದೆ ಎಂದು ಜಿಲ್ಲೆಯ ಪತ್ರಿಕಾ ವಿತರಕರು ಹೇಳುತ್ತಾರೆ.
ಮೂರು ದಶಕಗಳಿಂದ ಪತ್ರಿಕೆಗಳ ಹಂಚಿಕೆ ಕೆಲಸದಲ್ಲಿ ತೊಡಗಿದ್ದೇನೆ. ಮೊದಲು ನಡೆದುಕೊಂಡು ಮನೆಮನೆಗೆ ಹೋಗಿ ಪತ್ರಿಕೆ ಹಾಕುತ್ತಿದ್ದೆ. ಕ್ರಮೇಣ ಸೈಕಲ್ ಹಾಗೂ ಈಗ ದ್ವಿಚಕ್ರ ವಾಹನದ ಮೇಲೆ ಪತ್ರಿಕೆ ಹಂಚುವ ಕಾಯಕ ನಡೆಯುತ್ತಿದೆ. ಈ ಕೆಲಸ ನನ್ನ ಬದುಕಿಗೆ ಎಲ್ಲವನ್ನೂ ಕೊಟ್ಟಿದೆ.ಪಂಪಾಪತಿ ಕುಂಬಾರ ಗಂಗಾವತಿ
ಎರಡು ದಶಕಗಳಿಂದ ಪತ್ರಿಕಾ ವಿತರಕ ಕೆಲಸದಲ್ಲಿ ತೊಡಗಿದ್ದೇನೆ. ಇದರಿಂದಲೇ ಬದುಕು ಕಟ್ಟಿಕೊಂಡಿದ್ದೇನೆ. ಈ ಕೆಲಸ ಸಾಕಷ್ಟು ಖುಷಿ ನೀಡಿದೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು.ಮಹೇಶ ಚಕ್ರಸಾಲಿ ಕೊಪ್ಪಳ
ಸಮಾಜದ ಬದಲಾವಣೆಯಲ್ಲಿ ಪತ್ರಿಕೆಗಳು ಹೇಗೆ ಮಹತ್ವದ ಪಾತ್ರ ವಹಿಸುತ್ತವೆಯೋ ಅದೇ ರೀತಿ ವಿತರಕರು ಪತ್ರಿಕೆಗಳನ್ನು ಓದುಗರ ಮನೆಗಳಿಗೆ ತಲುಪಿಸುವ ಮಹತ್ವದ ಕೆಲಸ ಮಾಡುತ್ತಾರೆ. ಸರ್ಕಾರ ನಮಗೆ ಗುರುತಿನ ಚೀಟಿ ಕೊಡಬೇಕು.ಮಂಜುನಾಥ ಎಸ್. ಟಪಾಲ್ ಕೊಪ್ಪಳ
ಚಳಿ ಮಳೆ ಗಾಳಿ ಏನೇ ಇದ್ದರೂ ನಿತ್ಯ ಬೆಳಗಿನ ಜಾವ ಓದುಗರ ಮನೆಗೆ ಪತ್ರಿಕೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಲಾಭದಾಯಕ ಎನ್ನುವುದಕ್ಕಿಂತ ಹೆಚ್ಚಾಗಿ ಆತ್ಮತೃಪ್ತಿ ಸಲುವಾಗಿ ಪತ್ರಿಕಾ ವಿತರಕನ ಕೆಲಸ ಮಾಡುವೆ. ಸರ್ಕಾರ ನಮಗೂ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು.ಶರಣಪ್ಪ ಹಡಪದ ಕಾರಟಗಿ
ನನಗೀಗ 63 ವರ್ಷ ವಯಸ್ಸು. ನಾಲ್ಕೂವರೆ ದಶಕಗಳ ಹಿಂದೆ ಪತ್ರಿಕೆ ಹಂಚುವ ಕೆಲಸ ಆರಂಭಿಸಿದ್ದೆ. ಆಗ ಬೆಂಗಳೂರಿನಲ್ಲಿ ಮುದ್ರಣಗೊಂಡು ಸಂಜೆ ವೇಳೆಗೆ ಪತ್ರಿಕೆ ಬರುತ್ತಿದ್ದವು. ಅನೇಕ ಬಾರಿ ಇಂದಿನ ಪತ್ರಿಕೆಯನ್ನು ಮರುದಿನ ಹಂಚಿದ ಉದಾಹರಣೆಗಳೂ ಇವೆ. ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದೆ. ಜೊತೆಗೆ ಪತ್ರಿಕೆ ಹಂಚುವ ಕೆಲಸವನ್ನೂ ಮಾಡುತ್ತಿದ್ದೆ. ಈ ಕಾಯಕ ಆತ್ಮತೃಪ್ತಿ ನೀಡಿದೆ.ವೀರಣ್ಣ ಕೆ. ಪತ್ತಾರ ಭಾನಾಪುರ
ಪತ್ರಿಕೆ ಹಂಚುವ ನೆಪದಲ್ಲಿ ಬೆಳಗಿನ ಜಾವ ಬೇಗನೆ ಎದ್ದೇಳುವುದು ಆರೋಗ್ಯಕ್ಕೂ ಉತ್ತಮ. ಬೆಳಿಗ್ಗೆಯೇ ಕೆಲಸ ಮಾಡುವುದರಿಂದ ದಿನಪೂರ್ತಿ ಉಲ್ಲಸಿತರಾಗಿರಲು ಸಾಧ್ಯವಾಗುತ್ತದೆ. ಪತ್ರಿಕೆ ವಿತರಣೆಯ ಕೆಲಸ ಖುಷಿ ನೀಡಿದೆ.ಶರಣಬಸವರಾಜ ಬಿ. ಗೊಂಡಬಾಳ ಅಳವಂಡಿ
11 ವರ್ಷಗಳಿಂದ ಪತ್ರಿಕಾ ವಿತರಕನಾಗಿ ಕೆಲಸ ಮಾಡುತ್ತಿದ್ದೇನೆ. ಇದರಿಂದ ದುಡಿಮೆ ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿದೆ. ದಿನಪೂರ್ತಿ ಸಕ್ರಿಯವಾಗಿ ಕ್ರಿಯಾತ್ಮಕವಾಗಿ ಕೆಲಸ ಮಾಡಲು ಬೆಳಗಿನ ಜಾವ ಬೇಗನೆ ಏಳುವುದು ಅನುಕೂಲವಾಗುತ್ತಿದೆ.ಮಹಾದೇವಪ್ಪ ಎಸ್. ಹೂಗಾರ ಯಲಬುರ್ಗಾ
ಮೂರು ವರ್ಷಗಳಿಂದ ಪತ್ರಿಕಾ ವಿತರಕನಾಗಿ ಕೆಲಸ ಮಾಡುತ್ತಿದ್ದೇನೆ. ಈ ಅವಧಿಯಲ್ಲಿ ನಾನು ಮಾಡಿದ ಕೆಲಸ ಖುಷಿ ನೀಡಿದೆ. ಪತ್ರಿಕಾ ವಿತರಕ ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ.ಚಾಂದ್ ಪಾಷ ನಂದಾಪುರ ಕನಕಗಿರಿ
ನನಗೀಗ 63 ವರ್ಷ ವಯಸ್ಸು. ಮೊದಲು ಪಾನ್‌ಶಾಪ್‌ನಲ್ಲಿ ಈಗ ಕಿರಾಣಿ ಅಂಗಡಿಯ ಜೊತೆಯಲ್ಲಿ ಪತ್ರಿಕೆಗಳನ್ನು ವಿತರಿಸುವ ಕಾರ್ಯವನ್ನೂ ಮಾಡುತ್ತಿದ್ದೇನೆ. ಈ ಕೆಲಸ ಮನಸ್ಸಿಗೆ ಖುಷಿ ನೀಡಿದೆ. ಪತ್ರಿಕಾ ವಿತರಕರ ಸುರಕ್ಷತೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು.ಶಂಕರಗೌಡ ದೋಟಿಹಾಳ ಹಿರೇಮನ್ನಾಪುರ
ಮೂರು ದಶಕಗಳಾಗಿವೆ. ಕೋವಿಡ್ ಬಂದ ಬಳಿಕ ಪತ್ರಿಕಾ ವಿತರಕರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಏನೇ ಕಷ್ಟ ಬಂದರೂ ಬದ್ಧತೆಯಿಂದ ನಮ್ಮ ಕೆಲಸ ನಾವು ಮಾಡುತ್ತೇವೆ.ಮಂಜುನಾಥ ಕಿರಗೇರಿ ಕಿನ್ನಾಳ
Quote - ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಬೆಳಿಗ್ಗೆ ಬೇಗನೆ ಏಳುವುದು ಉತ್ತಮ. ಇದಕ್ಕೆ ಪತ್ರಿಕಾ ವಿತರಕರ ಕೆಲಸ ಅನುಕೂಲವಾಗಿದೆ. ಸರ್ಕಾರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ನಮ್ಮ ಬದುಕಿಗೆ ಪೂರಕವಾಗುವ ಯೋಜನೆಗಳನ್ನು ಘೋಷಿಸಬೇಕು. ಬಸವರಾಜ ಎನ್. ನೋಟಗಾರ ಗಿಣಗೇರಿ
ಮನೆಮನೆಗೆ ಹೋಗಿ ಪತ್ರಿಕೆಗಳನ್ನು ಹಂಚುವುದು ನನಗೆ ನಿತ್ಯ ಖುಷಿ ನೀಡುತ್ತದೆ. ಓದುಗರು ಹಾಗೂ ಪತ್ರಿಕಾ ಸಂಸ್ಥೆಯ ಸೇತುವೆಯಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಶಕ್ತಿ ಇರುವ ತನಕ ಇದೇ ಕೆಲಸದಲ್ಲಿ ಮುಂದುವರಿಯುವ ಹೆಬ್ಬಯಕೆಯಿದೆ.ನಿಂಗಜ್ಜ ಎಂ. ಕುಂಬಾರ ಬುದಗುಂಪಾ
ಪತ್ರಿಕೆ ಹಂಚುವ ಹುಡುಗರನ್ನು ಹಿಡಿದಿಡುವುದೇ ದೊಡ್ಡ ಸವಾಲು. ಎಲ್ಲ ಕ್ಷೇತ್ರಗಳಲ್ಲಿರುವಂತೆ ನಮ್ಮಲ್ಲಿಯೂ ಕೆಲ ಸಮಸ್ಯೆಗಳು ಇವೆ. ಅವುಗಳನ್ನು ನಿರ್ವಹಿಸಿಕೊಂಡು ಮುನ್ನಡೆದರೆ ಪತ್ರಿಕಾ ವಿತರಕರೂ ಆರ್ಥಿಕವಾದ ಸಬಲರಾಗಲು ಸಾಧ್ಯವಾಗುತ್ತದೆ.ವಿರೂಪಾಕ್ಷಪ್ಪ ಮುರಳಿ ಕೊಪ್ಪಳ
ಪತ್ರಿಕಾ ವಿತರಕನಾಗಿ 18 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನಿತ್ಯ ಏನೇ ಸಮಸ್ಯೆ ಹಾಗೂ ಸವಾಲುಗಳು ಎದುರಾದರೂ ಪತ್ರಿಕೆಗಳನ್ನು ಹಾಕಿದರಷ್ಟೇ ಸಮಾಧಾನವಾಗುತ್ತದೆ. ಈ ಕೆಲಸ ಖುಷಿ ನೀಡಿದೆ.ಪಂಪಣ್ಣ ಸಂಗನಾಳ ಕುಷ್ಟಗಿ
ಪತ್ರಿಕಾ ವಿತರಕರ ಬೇಡಿಕೆಗಳು * ನಮ್ಮನ್ನು ಕಾರ್ಮಿಕರು ಎಂದು ಸರ್ಕಾರ ಪರಿಗಣಿಸಬೇಕು. * ವಿತರಕರಿಗೆ ಹಾಗೂ ಕುಟುಂಬದವರಿಗೆ ಸರ್ಕಾರ ಆರೋಗ್ಯ ವಿಮೆ ಒದಗಿಸಬೇಕು. * ವಿತರಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೌಲಭ್ಯ ನೀಡಬೇಕು. * ಪತ್ರಿಕಾ ವಿತರಣೆಯ ಗುರುತಿನ ಚೀಟಿ ನೀಡಬೇಕು. * ಪತ್ರಿಕೆಗಳನ್ನು ಮಟ್ಟಸವಾಗಿ ಜೋಡಿಸಿಕೊಳ್ಳಲು ಸ್ಥಳೀಯ ಆಡಳಿತ ಒಂದೆಡೆ ಸ್ಥಳದ ಅವಕಾಶ ಒದಗಿಸಿಕೊಡಬೇಕು. * ಪತ್ರಿಕೆ ಹಂಚುವವರಲ್ಲಿ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು. ಅಂಥವರ ಬದುಕಿಗೆ ಸರ್ಕಾರ ವಿದ್ಯಾಭ್ಯಾಸಕ್ಕೆ ನೆರವಾಗಬೇಕು. * ಗುಂಪು ವಿಮೆ ಸೌಲಭ್ಯ ಕೊಡಬೇಕು. * 60 ವರ್ಷ ದಾಟಿದ ಪತ್ರಿಕಾ ವಿತರಕರಿಗೆ ಪಿಂಚಣಿ ಸೌಲಭ್ಯ ಒದಗಿಸಬೇಕು. * ಸರ್ಕಾರದ ನಾಲ್ಕನೇ ಅಂಗದ ಭಾಗವಾದ ಪತ್ರಿಕಾ ವಿತರಕರಿಗೆ ಬ್ಯಾಂಕ್‌ಗಳಲ್ಲಿ ಸಾಲ ಒದಗಿಸಬೇಕು. * ಅಂಗವಿಕಲ ಪತ್ರಿಕಾ ವಿತರಕರಿಗೆ ತ್ರಿಚಕ್ರ ವಾಹನ ಸೌಲಭ್ಯ ಒದಗಿಸಬೇಕು. * ಬೀದಿಬದಿ ವ್ಯಾಪಾರಿಗಳಿಗೆ ನೀಡುವಂತೆ ವಿತರಕರಿಗೂ ಸಾಲ ಒದಗಿಸಿಕೊಡಬೇಕು * ಸರ್ಕಾರ ನಮ್ಮ ಕೆಲಸವನ್ನು ಅಸಂಘಟಿತ ವಲಯದಲ್ಲಿ ಗುರುತಿಸಿ ಸೌಲಭ್ಯ ಕೊಡಬೇಕು. * ನಿವೇಶನ ಹಾಗೂ ಮನೆ ನೀಡಬೇಕು. * ಸರ್ಕಾರಿ ಬಸ್‌ಗಳಲ್ಲಿ ಉಚಿತ ಬಸ್ ಪಾಸ್ ಸೌಲಭ್ಯ ನೀಡಬೇಕು. * ಪತ್ರಿಕೆ ಹಂಚುವ ಸಮಯದಲ್ಲಿ ಬೀದಿನಾಯಿಗಳ ದಾಳಿ ಎದುರಿಸಬೇಕಾಗುತ್ತದೆ. ಇಂಥ ಅಪಾಯಕಾರಿ ಸಂದರ್ಭಕ್ಕೆ ತುತ್ತಾದರೆ ಸರ್ಕಾರ ಉಚಿತವಾಗಿ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.