ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಕೋವಿಡ್-19 ಆತಂಕ: ಚಿಕನ್, ಮಟನ್, ಮೊಟ್ಟೆ ವ್ಯಾಪಾರಿಗಳಿಗೆ ಬರೆ

Last Updated 11 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಕೊಪ್ಪಳ: ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್‌-19 ವೈರಸ್ ಜಿಲ್ಲೆಯಲ್ಲಿಯೂ ಆತಂಕ ಮೂಡಿಸಿದ್ದು, ಮುಂಜಾಗ್ರತೆ ಕ್ರಮವಾಗಿ ಮಾಸ್ಕ್‌ ಧರಿಸಿಕೊಂಡು ಓಡಾಡುತ್ತಿರುವುದು ಕಂಡು ಬರುತ್ತದೆ.

ಜಿಲ್ಲೆಯಲ್ಲಿ ರೋಗದ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ ಮತ್ತು ಪ್ರಕರಣ ದಾಖಲಾಗಿಲ್ಲ. ವೈರಸ್ ಹರಡದಂತೆ ಜಿಲ್ಲಾ ಆಡಳಿತ ಆರೋಗ್ಯ ಇಲಾಖೆಗೆ ಕಟ್ಟುನಿಟ್ಟಿ ಸೂಚನೆ ನೀಡಲಾಗಿದೆ. ಅನಗತ್ಯ ಹುಟ್ಟಿಸಲು ಯತ್ನಿಸುತ್ತಿದ್ದ ಕುಕನೂರ ತಾಲ್ಲೂಕಿನ ವ್ಯಕ್ತಿಯೊಬ್ಬರಿಗೆ ಪೊಲೀಸ್‌ ಹಿಡಿದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಮುನಿರಾಬಾದ್‌ ಸಮೀಪದ ಹೊಸಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ದುಬೈಗೆ ಹೋಗಿ ಬಂದ ನಂತರ ಜ್ವರ ಕಾಣಿಸಿಕೊಂಡು ಆತಂಕ ಮೂಡಿಸಿತ್ತು.

ಸ್ಥಳಕ್ಕೆ ಡಿಎಚ್‌ಒ ನೇತೃತ್ವದಲ್ಲಿಯೇ ತಜ್ಞ ವೈದ್ಯರು ತೆರಳಿ ಪರೀಕ್ಷೆ ನಡೆಸಿ ರೋಗದ ಲಕ್ಷಣ ಇಲ್ಲದಿರುವುದನ್ನು ಖಚಿತಪಡಿಸಿದ ನಂತರ ಯಾವುದೇ ಪ್ರಕರಣ ಇನ್ನೂ ವರದಿಯಾಗಿಲ್ಲ.

ಕಡಿಮೆಯಾಗದ ಆತಂಕ: ಜಿಲ್ಲೆಯಲ್ಲಿ 250ಕ್ಕೂ ಹೆಚ್ಚು ಕೋಳಿ ಫಾರಂಗಳು ಇದ್ದು, ಮಾಲೀಕರಲ್ಲಿ ತೀವ್ರ ಆತಂಕ ಕಾಡುತ್ತಿದೆ. ಚಿಕನ್ ಮಾಂಸ ಮತ್ತು ಮೊಟ್ಟೆಗಳ ದರದಲ್ಲಿ ಭಾರಿ ವ್ಯತ್ಯಾಸವಾಗುತ್ತಿರುವುದರಿಂದ ನಷ್ಟಕ್ಕೆ ಒಳಗಾಗುವ ಭೀತಿ ಅವರನ್ನು ಕಾಡುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಕೋಳಿಗಳನ್ನು ಮಣ್ಣು ಮಾಡುತ್ತಿರುವ ಘಟನೆಯನ್ನು ಕಂಡು ಲಕ್ಷಾಂತರ ಬಂಡವಾಳ ಹಾಕಿ ವ್ಯಾಪಾರ ಮಾಡುತ್ತಿರುವ ಅವರಲ್ಲಿ ಭಯ ಹೆಚ್ಚುತ್ತಲೇ ಇದೆ.

ಫಾರಂಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ರೋಗದ ಲಕ್ಷಣ ಕಂಡು ಬಂದ ಕೋಳಿಗಳನ್ನು ಪತ್ತೆ ಹಚ್ಚಿ ಹೂಳಲಾಗುತ್ತಿದೆ. ಈ ಕುರಿತು ಪಶು ಸಂಗೋಪನಾ ಇಲಾಖೆ ಸಂಬಂಧಿಸಿದ ಮಾಲೀಕರಿಗೆ ಸೂಚನೆಯನ್ನು ನೀಡಿದ್ದು, ಯಾವುದೇ ಅವಘಢಕ್ಕೆ ಆಸ್ಪದ ನೀಡದಂತೆ ಸೂಚಿಸಿದ್ದಾರೆ. ಚಿಕನ್‌ ಮತ್ತು ಮಟನ್‌ ಮಾರಾಟ ಅಂಗಡಿಗಳಲ್ಲಿ ಜನರ ವಹಿವಾಟು ಕಡಿಮೆಯಾಗುತ್ತಿದ್ದು, ಬಿಸಿಲಿನ ಹಿನ್ನೆಲೆಯಲ್ಲಿ ಗಿರಾಕಿಗಳು ಕಡಿಮೆ ಎಂದು ಹೇಳಲಾಗುತ್ತದೆ.

ಮುಂಜಾಗ್ರತೆ:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂಜಾಗ್ರತೆ ಕ್ರಮವಾಗಿ ವಿದೇಶದಿಂದ ಬರುವ ಜಿಲ್ಲೆಯ ಮೂಲದವರನ್ನು ಪತ್ತೆ ಹಚ್ಚಿ ಆರೋಗ್ಯ ತಪಾಸಣೆ ನಡೆಸಿ ದೃಢೀಕರಿಸಿದ ನಂತರವೇ ಮನೆಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆ. ಕೋವಿಡ್‌-19 ವೈರಸ್‌ ಪತ್ತೆಯಾದರೆ ರೋಗಿಗಳನ್ನು ದಾಖಲಿಸಲು ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ 15 ಕೇಂದ್ರಗಳನ್ನು ತೆರೆಯಲಾಗಿದೆ.

ಮುಂಜಾಗ್ರತೆ ಕ್ರಮವಾಗಿ 15 ಹಾಸಿಗೆ ಸಾಮರ್ಥ್ಯದ ವಾರ್ಡ್‌ ಅನ್ನು ಜಿಲ್ಲಾ ಆಸ್ಪತ್ರೆಯಲ್ಲಿಗಂಗಾವತಿಯಲ್ಲಿ 2, ಯಲಬುರ್ಗಾ 2, ಕುಷ್ಟಗಿಯಲ್ಲಿ 1ಹಾಸಿಗೆ ಸಾಮರ್ಥ್ಯದ ವಾರ್ಡ್‌ಗಳನ್ನು ಸಜ್ಜುಗೊಳಿಸಲಾಗಿದೆ. ಚಿಕಿತ್ಸೆಗೆ ಅಗತ್ಯವಾದ ಮಾಸ್ಕ್‌, ಪ್ರಯೋಗಾಲಯ, ಪರಿಕರಗಳನ್ನು ಸುವ್ಯವಸ್ಥಿತವಾಗಿಡಲಾಗಿದೆ.

ಈ ಕುರಿತು ಡಿಎಚ್‌ಒ ಡಾ.ಟಿ.ಲಿಂಗರಾಜ ಪತ್ರಿಕೆಯೊಂದಿಗೆ ಮಾತನಾಡಿ, 'ವೈರಸ್‌ ಬಗ್ಗೆ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು, ಎಲ್ಲ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ. ಔಷಧಿ ಸೇರಿದಂತೆ ಯಾವುದೇ ವೈದ್ಯಕೀಯ ಸೌಲಭ್ಯದ ಕೊರತೆಯಿಲ್ಲ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT