ಶನಿವಾರ, ಜನವರಿ 29, 2022
23 °C
ನಿಲೋಗಲ್‍ಕೆರೆ ಅಭಿವೃದ್ಧಿಗೆ ಗವಿ ಶ್ರೀಗಳಿಂದ ಚಾಲನೆ

‘ಕೆರೆ ಜೀವವೈವಿಧ್ಯದ ತಾಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಬುರ್ಗಾ: ‘ಗ್ರಾಮೀಣ ಬದುಕಿನ ಜೀವಾಳವಾಗಿರುವ ಕೆರೆಗಳ ಮಹತ್ವ ಅರಿತು ಅವುಗಳ ಅಭಿವೃದ್ಧಿಗೆ ಬದ್ಧತೆ ತೋರುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿ ಶ್ಲಾಘನೀಯವಾದುದು’ ಎಂದು ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ತರಲಕಟ್ಟಿ ಗ್ರಾಮದ ಹೊರವಲಯದಲ್ಲಿ ಶನಿವಾರ ನಡೆದ ನಿಲೋಗಲ್ಲಕೆರೆಯ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು,‘ಕೆರೆಗಳ ಅಭಿವೃದ್ಧಿ ಬಗ್ಗೆ ಉದಾಸೀನ ಮಾಡಿದ ಕಾರಣ ವಾತಾವರಣದಲ್ಲಿ ಬದಲಾವಣೆ ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಪ್ರಕೃತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದೇ ಬೇಜವಾ ಬ್ದಾರಿತನದಿಂದ ನಡೆದುಕೊಂಡಿದ್ದರಿಂದಲೇ ನಾವೆಲ್ಲರೂ ಬಡವರಾಗಿ ಜೀವನ ನಡೆಸುವ ಸ್ಥಿತಿಗೆ ಬಂದಿದ್ದೇವೆ’ ಎಂದರು.

ಕೆರೆಗಳು ಕೇವಲ ನೀರು ಸಂಗ್ರಹ ಮೈದಾನವಲ್ಲ. ಅದು ಜೀವ ವೈವಿಧ್ಯದ ತಾಣ. ಅಸಂಖ್ಯಾತ ಜೀವ ಸಂಕುಲಗಳ ಸಂತನಾಭಿವೃದ್ಧಿಗೆ ನೆಲೆ ಕಲ್ಪಿಸಿಕೊಟ್ಟಂತಾಗುತ್ತದೆ. ಕೆರೆ ಪರಿಸರದಲ್ಲಿ ವನ ವೈಭವಕ್ಕೆ ಕಾರಣವಾಗುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕಾಗಿದೆ. ಹಾಗೆಯೇ ಕೆರೆಗಳ ಸಂರಕ್ಷಣೆಗೆ ಪ್ರತಿಯೊಬ್ಬರ ಕೊಡುಗೆ ಮುಖ್ಯ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಮಾತನಾಡಿ,‘ನಿಲೋಗಲ್ ಕೆರೆ ಅಭಿವೃದ್ಧಿಗೆ ₹193.68 ಲಕ್ಷ ಅನುದಾನ ಬಿಡುಗಡೆಯಾಗಿದೆ. ಉತ್ತಮ ಗುಣಮಟ್ಟದ ಕಾಮಗಾರಿ ಕೈಗೊಳ್ಳುವುದರಿಂದ ಕೆರೆ ಸುಂದರವಾಗಿ ಕಾಣಲಿದೆ. ತಾಲ್ಲೂಕಿನ ಕೆರೆಗಳ ಅಭಿವೃದ್ಧಿಗೆ ಸುಮಾರು ವರ್ಷಗಳಿಂದಲೂ ಕಾಳಜಿ ತೋರಿದ್ದರಿಂದಾಗಿ ಸಾಕಷ್ಟು ಕೆರೆಗಳಲ್ಲಿ ನೀರು ಸಂಗ್ರಹವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ನೀಗಿಸುವಲ್ಲಿ ಯಶಸ್ವಿಯಾಗುತ್ತಿವೆ. ಹಾಗೆಯೇ ಮುಂದಿನ ದಿನಗಳಲ್ಲಿ ಪ್ರತಿಯೊಂದು ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಮುತುವರ್ಜಿ ತೊರಲಾಗುವುದು’ ಎಂದು ಹೇಳಿದರು.

ಅಧಿಕಾರಕ್ಕಾಗಿ ಕಾಂಗ್ರೆಸ್ ನಡಿಗೆ ಕೃಷ್ಣ ಕಡೆಗೆ ಎಂದು ಪಾದಯಾತ್ರೆ ಮಾಡಿದ ಹಿಂದಿನ ಕಾಂಗ್ರೆಸ್ ಗೆದ್ದ ನಂತರ ಮೋಸ ಮಾಡಿದ್ದು ಜನರು ಮರೆತಿಲ್ಲ. ಆದರೆ ನುಡಿದಂತೆ ನಡೆಯುವಲ್ಲಿ ನಿರಂತರ ಪ್ರಯತ್ನದಲ್ಲಿರುವ ಬಿಜೆಪಿ ಸರ್ಕಾರ ಶೀಘ್ರದಲ್ಲಿಯೇ ನೀರಾವರಿ ಯೋಜನೆಗಳನ್ನು ಜಾರಿಗೆ ತರಲಿದೆ ಎಂದು ಭರವಸೆ ಕೊಟ್ಟರು.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ಅಧಿಕಾರಿ ಎಂ.ಎನ್.ಕಿಶೋರ ಕುಮಾರ ಪ್ರಾಸ್ತವಿಕವಾಗಿ ಮಾತನಾಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಟಿ.ಲಿಂಗರಾಜ, ತಹಶೀಲ್ದಾರ್ ಶ್ರೀಶೈಲ ತಳವಾರ, ತಾ.ಪಂ. ಇಒ ಸೋಮಶೇಖರ ಬಿರಾದಾರ, ಡಾ.ಎಂ.ಮಹೇಶ, ಗ್ರಾ.ಪಂ. ಅಧ್ಯಕ್ಷೆ ಶಾಂತಾ ಹಾವೇರಿ, ಮುಖಂಡರಾದ ಬಸವಲಿಂಗಪ್ಪ ಭೂತೆ, ಸಿ.ಎಚ್.ಪೋಲೀಸ್ ಪಾಟೀಲ, ವೀರಣ್ಣ ಹುಬ್ಬಳ್ಳಿ, ಕಳಕಪ್ಪ ಕಂಬಳಿ, ವಿಶ್ವನಾಥ ಮರಿಬಸಪ್ಪನವರ್, ಶರಣಪ್ಪ ಈಳಗೇರ ಹಾಗೂ ರತನ ದೇಸಾಯಿ ಅವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.