ಕುಷ್ಟಗಿ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಕಚೇರಿ ಸಂಕೀರ್ಣವಾಗಿರುವ ಇಲ್ಲಿಯ ಮಿನಿ ವಿಧಾನಸೌಧ ಕಟ್ಟಡ ನಿರ್ಲಕ್ಷ್ಯಕ್ಕೊಳಗಾಗಿದ್ದು ಮಳೆಗಾಲದಲ್ಲಿ ನೀರು ತೊಟ್ಟಿಕ್ಕುತ್ತಿರುವುದು ಕಂಡುಬಂದಿದೆ.
ತಹಶೀಲ್ದಾರ್, ಉಪ ನೋಂದಣಿ, ಉಪ ಖಜಾನೆ ಸೇರಿದಂತೆ ಇನ್ನೂ ಅನೇಕ ಇಲಾಖೆಗಳ ಕಚೇರಿಗಳು, ಆಧಾರ್ ನೋಂದಣಿ ಕೇಂದ್ರ, ನೆಮ್ಮದಿ ಕೇಂದ್ರ ಹೀಗೆ ಪ್ರಮುಖ ಕಚೇರಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ಕಟ್ಟಡ ನಿರ್ವಹಣೆ ಕೊರತೆಯಿಂದ ಕಟ್ಟಡ ದುಸ್ಥಿತಿಗೆ ಇಡಾಗಿದೆ.
‘ಮಳೆಗಾಲ ಬಂದರೆ ಕೆಲ ಕೊಠಡಿಗಳು, ಕಾರಿಡಾರ್ ಮತ್ತಿತರೆ ಸ್ಥಳಗಳಲ್ಲಿ ನೀರು ತೊಟ್ಟಿಕ್ಕುವುದು ಇಲ್ಲಿಯ ಪ್ರಮುಖ ಸಮಸ್ಯೆಯಾಗಿದೆ. ಒಳಗಿನ ಪ್ರಾಂಗಣದ ಅಲ್ಲಲ್ಲಿ ನೀರು ಸಂಗ್ರವಾಗಿದ್ದು ಜನರು, ಸಿಬ್ಬಂದಿ ಅದರಲ್ಲೇ ನಡೆದಾಡುವಂತಾಗಿದೆ. ಮಳೆ ನಿಂತರೂ ಕೆಲಕಡೆ ನೀರು ತೊಟ್ಟಿಕ್ಕುತ್ತಲೇ ಇರುತ್ತದೆ. ಇದರಿಂದ ಕೆಲಸಕ್ಕೆ ತೊಂದರೆ ಎದುರಿಸುವಂತಾಗಿದೆ’ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಕೆಲ ಸಿಬ್ಬಂದಿ ಹೇಳಿದರು.
ನಿರ್ವಹಣೆ ಕೊರತೆ: ಮಳೆ ನೀರು ತೊಟ್ಟಿಕ್ಕುವುದಕ್ಕೆ ಚಾವಣಿ ಮೇಲಿನ ದುಸ್ಥಿತಿಯೇ ಕಾರಣ ಎಂಬುದು ಗೊತ್ತಾಯಿತು. ಇಡೀ ಕಟ್ಟಡದ ಚಾವಣಿಯ ಮೇಲೆಲ್ಲ ತರಹೇವಾರಿ ತ್ಯಾಜ್ಯ, ಮರಗಳಿಂದ ಉದುರಿದ ಎಲೆಗಳ ರಾಶಿಯೇ ಇದ್ದು ಬಹಳ ದಿನಗಳಿಂದಲೂ ಸ್ವಚ್ಛಗೊಳಿಸದೆ ಹಾಗೆ ಬಿಡಲಾಗಿದೆ. ಅದೇ ರೀತಿ ಪೈಪ್‌ಗಳು, ಕೇಬಲ್ ಇತರೆ ವಸ್ತುಗಳು ಅಡ್ಡಾದಿಡ್ಡಿಯಾಗಿ ಬಿದ್ದಿರುವುದರಿಂದ ಮಳೆ ನೀರು ಹರಿದುಹೋಗದೆ ಅಲ್ಲಿಯೇ ನಿಲ್ಲುತ್ತದೆ. ತ್ಯಾಜ್ಯವೆಲ್ಲ ಕೊಳೆತು ತಿಪ್ಪೆಯಂತಾಗಿದ್ದು ದುರ್ನಾತ ಬೀರುತ್ತಿದೆ ಎಂದು ಸಾರ್ವಜನಿಕರು ದೂರಿದರು.
ಮೂತ್ರ ವಿಸರ್ಜನೆ: ಚಾವಣಿ ಮೇಲೆ ಅಲ್ಲಲ್ಲಿ ಜನರು ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬಂದಿದೆ. ದುರ್ನಾತಕ್ಕೆ ಇದೂ ಕಾರಣವಾಗಿದೆ. ಈ ಕುರಿತು ವಿವರಿಸಿದ ಸಿಬ್ಬಂದಿ ಒಬ್ಬರು, ‘ಕೆಲಸಕ್ಕೆ ಬರುವ ಸಾರ್ವಜನಿಕರು ಮೇಲೆ ಹೋಗಿ ಮೂತ್ರ ವಿಸರ್ಜಿಸುತ್ತಿದ್ದು ಅದು ಯಾರ ಗಮನಕ್ಕೂ ಬರುವುದಿಲ್ಲ. ಕೆಳಗೆ ಮೂತ್ರಾಲಯ ಇದ್ದರೂ ಚಾವಣಿ ಮೇಲೆ ವಿಸರ್ಜಿಸುತ್ತಿರುವುದು ಕಂಡುಬಂದಿದೆ. ಈ ಸೌಧದಲ್ಲಿ ಕೆಲಸ ಹೇಗೆ ಮಾಡಬೇಕೆಂಬುದೇ ತಿಳಿಯುತ್ತಿಲ್ಲ’ ಎಂದು ಬೇಸರ ಹೊರಹಾಕಿದರು.
ನಿರ್ವಹಣೆಗೆ ಅಧಿಕಾರಿಗಳ ನಿರ್ಲಕ್ಷ್ಯ: 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಮಿನಿ ವಿಧಾನಸೌಧ ನಿರ್ಮಾಣವಾಗಿತ್ತು. ಕಳಪೆ ಕಾಮಗಾರಿಯಿಂದಾಗಿ ದಶಕದ ಅವಧಿಯಲ್ಲಿಯೇ ಕೊಠಡಿಗಳಲ್ಲಿ ಬಿರುಕು ಕಾಣಿಸಿಕೊಂಡಿವೆ, ಚಾವಣಿ ಮೇಲಿನ ಸಿಮೆಂಟ್ ಕಿತ್ತುಹೋಗಿದ್ದು ಹುಲ್ಲು ಬೆಳೆದಿದೆ. ಕಿಟಕಿಗಳೆಲ್ಲ ಕಿತ್ತುಹೋಗಿವೆ. ಕಟ್ಟಡದ ಸುತ್ತಲಿನ ಪ್ರದೇಶವಂತೂ ಮಲೀನವಾಗಿದೆ.
ನಿರ್ವಹಣೆ ಹೊಣೆ ಹೊತ್ತಿರುವ ಕಂದಾಯ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಕಟ್ಟಡ ಸೋರುತ್ತಿರುವುದು ಗಮನಕ್ಕೆ ಬಂದರೂ ಮೌನಕ್ಕೆ ಶರಣಾಗಿರುವುದು ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಪರಮಾವಧಿಯಾಗಿದೆ ಎಂದು ವಕೀಲ ಶಿವಕುಮಾರ ದೊಡ್ಡಮನಿ, ಸಾರ್ವಜನಿಕರಾದ ವೀರೇಶ ಕಲ್ಗುಡಿ, ಬಸವರಾಜ ಬಿಜಕಲ್ ಇತರರು ಆರೋಪಿಸಿದರು.
ಚಾವಣಿ ಮೇಲೆ ಜನರು ಮೂತ್ರ ವಿಸರ್ಜಿಸುತ್ತಾರೆ. ಮಳೆ ನೀರು ಅಲ್ಲಿಯೇ ಸಂಗ್ರವಹಾಗಿ ತೊಟ್ಟಿಕ್ಕುತ್ತಿದೆ. ಅದರ ಕೆಳಗೆ ನಾವು ಕೆಲಸ ಮಾಡಬೇಕು. ನಮ್ಮ ಗೋಳು ಕೇಳುವವರೇ ಇಲ್ಲಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ
ಕಟ್ಟಡದ ದುಸ್ಥಿತಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ತಿಪ್ಪೆಯಂತಾಗಿರುವ ಚಾವಣಿ ಸ್ವಚ್ಛತೆಗೆ ಯಾವ ತಹಶೀಲ್ದಾರ್‌ಗಳೂ ಗಮನಹರಿಸಿಲ್ಲ. ಹೀಗೇ ಬಿಟ್ಟರೆ ಇನ್ನೂ ಕೆಲ ವರ್ಷಗಳಲ್ಲಿ ಸೌಧ ಸಂಪೂರ್ಣ ಹಾಳಾಗುತ್ತದೆಪಿ.ರಮೇಶ ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.