ಕೊಪ್ಪಳ: ‘ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ಮಕ್ಕಳ ಓದಿಗೆ ಸಾಕಷ್ಟು ಸಹಕಾರಿಯಾಗಿದ್ದು ಗ್ರಂಥಾಲಯದಲ್ಲಿ ಮಕ್ಕಳಿಗೆ ವಿನೂತನ ಚಟುವಟಿಕೆ ಪರಿಣಾಮಕಾರಿಯಾಗಿ ಜರುಗಿಸಿ ಮಾದರಿ ಗ್ರಂಥಾಲಯಗಳನ್ನಾಗಿ ರೂಪಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ ಹೇಳಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಮೂರು ದಿನಗಳ ಸಾಮರ್ಥ್ಯ ಬಲವರ್ಧನೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಪ್ರತಿವಾರ ವಿನೂತನ ಕಾರ್ಯಕ್ರಮಗಳನ್ನು ನಿಗದಿಪಡಿಸಿದ ವೇಳಾಪಟ್ಟಿಯಂತೆ ಮಾಡಬೇಕು. ಗ್ರಂಥಾಲಯಗಳಿಗೆ ಅವಶ್ಯವಿರುವ ಸೌಕರ್ಯಗಳನ್ನು ಒದಗಿಸುವಂತೆ ಈಗಾಗಲೇ ಎಲ್ಲಾ ಪಿಡಿಒಗಳಿಗೆ ನಿರ್ದೇಶನ ನೀಡಲಾಗಿದೆ. ಗ್ರಂಥಪಾಲಕರು ಪ್ರತಿ ದಿನ ಕಡ್ಡಾಯವಾಗಿ ಇ-ಹಾಜರಾತಿ ಹಾಕಬೇಕು’ ಎಂದು ಸೂಚಿಸಿದರು.
‘ಪ್ರತಿ ಶಾಲೆಗೆ ಮಕ್ಕಳ ಓದಿಗೆ ಸಮಯ ನಿಗದಿಪಡಿಸಬೇಕು. ಇದರಿಂದ ಎಲ್ಲಾ ಮಕ್ಕಳಿಗೆ ಓದಿಗೆ ಅನುಕೂಲವಾಗುತ್ತದೆ. ಕಾರ್ಯಕ್ರಮ ಜರುಗಿಸಿದ ಎಲ್ಲಾ ಚಟುವಟಿಕೆಗಳ ಫೋಟೊ ಮತ್ತು ವಿಡಿಯೊ ದಾಖಲಾತಿ ಕಳುಹಿಸಬೇಕು. ಗ್ರಂಥಾಲಯದಲ್ಲಿ ಮಕ್ಕಳ ನೋಂದಣಿ ಶೀಘ್ರಗತಿಯಲ್ಲಿ ಮುಕ್ತಾಯಗೊಳಿಸಬೇಕು. ಗ್ರಂಥಾಲಯಗಳು ಓದಿನ ಕಡೆಗೆ ಮಕ್ಕಳ ಗಮನಹರಿಸಲು ಸ್ವಚ್ಛತೆ ಕಾಪಾಡಬೇಕು’ ಎಂದರು.
ಜಿ.ಪಂ. ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ಪಂಚಾಯತ್ ರಾಜ್ ಸಹಾಯಕ ನಿರ್ದೆಶಕ ಮಹೇಶ್ ಎಚ್. ಸಹಾಯಕ ಲೆಕ್ಕಾಧಿಕಾರಿ ರವಿಕುಮಾರ, ನರೇಗಾ ಸಹಾಯಕ ನಿರ್ದೇಶಕಿ ಸೌಮ್ಯ ಕೆ, ಎಸ್‌ಬಿಎಂ ನೋಡಲ್ ಅಧಿಕಾರಿ ಜ್ಯೋತಿ ರಡ್ಡೇರ, ಜಿಲ್ಲಾ ಗ್ರಂಥಾಲಯ ಅಧಿಕಾರಿ ನಾಗರಾಜ ಡೊಳ್ಳಿನ, ಎಸ್ ಐಆರ್ ಡಿ ಸಂಪನ್ಮೂಲ ತರಬೇತಿ ಸಂಪನ್ಮೂಲ ವ್ಯಕ್ತಿ ಎಚ್, ಎಸ್, ಹೊನ್ನುಂಚಿ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, 32 ಗ್ರಾಮ ಪಂಚಾಯತಿಗಳ ಗ್ರಂಥಪಾಲಕರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.