ಬುಧವಾರ, ಮೇ 12, 2021
20 °C
ಬೆಳಿಗ್ಗೆಯಿಂದ ಜನಜಂಗುಳಿ: ಗ್ರಾಮೀಣ ಭಾಗದಲ್ಲಿ ಕಾಣದ ಅಂತರ

ಜನರ ನಿಯಂತ್ರಣಕ್ಕೆ ಹರಸಾಹಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಕೊರೊನಾ ವೇಗವಾಗಿ ಹರಡುತ್ತಿದ್ದು ಸರ್ಕಾರ 14 ದಿನಗಳ ಲಾಕ್‌ಡೌನ್‌ ಮಾಡಲಾಗಿದ್ದು, ಮಾರ್ಗಸೂಚಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಜಿಲ್ಲೆಯ ನಗರ, ಪಟ್ಟಣಗಳ ಭಾಗದಲ್ಲಿ ಕೊರೊನಾ ಆತಂಕ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಇನ್ನೂ ಗ್ರಾಮೀಣ ಭಾಗಗಳಿಗೆ ಅಷ್ಟೊಂದು ಪರಿಣಾಮ ಬೀರಿಲ್ಲ. ಮುಂಜಾಗ್ರತೆ ಕ್ರಮವಾಗಿ ಸ್ಥಳೀಯ ಪಂಚಾಯಿತಿಗಳು ಗ್ರಾಮಪಡೆಗಳನ್ನು ರಚನೆ ಮಾಡಿದ್ದು, ಕೋವಿಡ್ ಜಾಗೃತಿ, ಲಸಿಕಾ ಅಭಿಯಾನ, ಚಿಕಿತ್ಸೆ ಕುರಿತು ವಿವಿಧ ಮಾಹಿತಿಯನ್ನು ನೀಡುವಲ್ಲಿ ಸನ್ನದ್ಧವಾಗಿವೆ.

ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದರೂ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ. ಶ್ರಮದ ಮತ್ತು ಗುಂಪಾಗಿ ನಿರ್ವಹಿಸುವ ಈ ಕಾಮಗಾರಿಗಳಲ್ಲಿ ಅಂತರ ಕಾಯ್ದುಕೊಳ್ಳುವಲ್ಲಿ ಸುಲಭವಲ್ಲ. ಈ ಕುರಿತು ಪಂಚಾಯತ್ ರಾಜ್‌ ಇಲಾಖೆ ಸಿಬ್ಬಂದಿ ಚಿಂತಿತರಾಗಿದ್ದಾರೆ.

ಉದ್ಯೋಗಕ್ಕಾಗಿ ಕೆಲಸ ಅರಿಸಿ ಗುಳೆ ಹೋದವರು ಕಳೆದ ಮೂರುದಿನಗಳಲ್ಲಿ ಸ್ವಗ್ರಾಮಗಳಿಗೆ ವಲಸೆ ಬಂದಿದ್ದು, ಕೋವಿಡ್‌ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಜಿಲ್ಲಾ ಆಸ್ಪತ್ರೆಯ ಹಿಂದೆ ಇರುವ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ತಾಲ್ಲೂಕುಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಬಿಡುವಿಲ್ಲದೆ ಕೆಲಸ ಕಾರ್ಯಗಳಲ್ಲಿ ತೊಡಗಿದ್ದು, ಲಸಿಕೆ ಹಾಕಿಸಲು ಜನರನ್ನು ಪ್ರೇರೇಪಿಸುತ್ತಿದ್ದಾರೆ.

ಬಸ್‌ ಸೇರಿದಂತೆ ಸಾರಿಗೆ ಸೌಲಭ್ಯವಿಲ್ಲದ ಗ್ರಾಮಗಳಿಗೆ ವಿವಿಧ ಶಿಕ್ಷಣ ಸಂಸ್ಥೆಯವರು ತಮ್ಮ ವಾಹನಗಳನ್ನು ಬಳಸಿಕೊಳ್ಳಲು ಒಪ್ಪಿಗೆ ನೀಡಿದ್ದು, ದೂರದ ತಾಂಡಾ ಸೇರಿದಂತೆ ವಿವಿಧ ಪ್ರದೇಶದಿಂದ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆ ತರುವ ಕಾರ್ಯ ನಡೆದಿದೆ.

ನಗರದ ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್‌ ಹಾಕಿ ಪೊಲೀಸರು ಕಾವಲು ಕಾಯುತ್ತಿದ್ದು, ಅವಶ್ಯಕ ಕೆಲಸ ಕಾರ್ಯಗಳಿಗೆ ಮಾತ್ರ ಜನರು ಸಂಚಾರ ಮಾಡುತ್ತಿದ್ದಾರೆ. ವ್ಯಾಪಾರಸ್ಥರು ಮತ್ತು ಬೀದಿ ಬದಿಯ ಸಣ್ಣ ಅಂಗಡಿ ಮಾಲೀಕರು ತೊಂದರೆಯಲ್ಲಿದ್ದಾರೆ. ಕಳೆದ ಸಾಲಿನಲ್ಲಿ ವಿವಿಧ ಕಾರ್ಮಿಕ ವರ್ಗಕ್ಕೆ ಘೋಷಣೆಯಾದ ಪ್ರೋತ್ಸಾಹಧನ ಬಹುತೇಕ ಕಡೆ ಬಂದಿಲ್ಲ. ಅದಕ್ಕಾಗಿ ಕಾರ್ಮಿಕ ಇಲಾಖೆಗೆ ಎಡತಾಕುವುದು ತಪ್ಪುತ್ತಿಲ್ಲ.

ಬೆಳಿಗ್ಗೆ 6ರಿಂದ 10ರವರೆಗೆ ವಿವಿಧ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದ್ದು ಕೊಂಚ ನೆಮ್ಮದಿ ಮೂಡಿಸಿದರೂ ಹೂವು, ಹಣ್ಣು, ತರಕಾರಿ ವ್ಯಾಪಾರಸ್ಥರು ಸಂಕಷ್ಟದಲ್ಲಿ ಇರುವುದು ಕಂಡು ಬರುತ್ತದೆ. ಹೂವಿನ ಕೊಯ್ಲು ಮಾಡಿ ತಂದರೆ ಗ್ರಾಹಕರು ದೊರೆಯಲಿಕ್ಕಿಲ್ಲ ಎಂದು ಕೆಲವು ರೈತರು ಗಿಡಗಳಲ್ಲಿಯೇ ಹೂವುಗಳನ್ನು ಬಿಟ್ಟಿದ್ದಾರೆ.

ಮಾಂಸ, ಮೊಟ್ಟೆ, ದಿನಸಿ ವಸ್ತುಗಳ ಬೆಲೆ ಏರಿಕೆಯಾಗಿದೆ. ಗುಟ್ಕಾ ಸೇರಿದಂತೆ ಇನ್ನಿತರ ವಸ್ತುಗಳನ್ನು ಕೆಲವು ವ್ಯಾಪಾರಿಗಳು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿರುವುದರಿಂದ ವ್ಯಸನಿಗಳು ಯಾವುದೇ ಚೌಕಾಸಿ ಮಾಡದೇ ಖರೀದಿ ನಡೆಸುತ್ತಿದ್ದಾರೆ. ಈ ಕುರಿತು ನಗರಸಭೆ ಅಗತ್ಯ ವಸ್ತುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆ ನೀಡಿದರೂ ಮಾರಾಟ ಮಾಡುವುದು ನಿಂತಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.