ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಸಡಿಲ: ಖರೀದಿಗೆ ಅವಕಾಶ

ಲಸಿಕೆ ಹಾಕಿಸಿಕೊಳ್ಳಲು ಯುವಕರ ಉತ್ಸಾಹ: ‘ನೋ ಸ್ಟಾಕ್‌’ ತಂದ ನಿರುತ್ಸಾಹ
Last Updated 9 ಜೂನ್ 2021, 3:06 IST
ಅಕ್ಷರ ಗಾತ್ರ

ಕೊಪ್ಪಳ: ಒಂದೂವರೆ ತಿಂಗಳಿನಿಂದಲಾಕ್‌ಡೌನ್‌ನಿಂದ ಜನ ಪರದಾಡಿದರು. ಸೋಮವಾರ ಜಿಲ್ಲೆಯಲ್ಲಿ ಬಿಗಿ ಲಾಕ್‌ಡೌನ್‌ ಸಡಿಲಿಸಲಾಗಿದೆ. ಬೆಳಿಗ್ಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಜನಜೀವನ ಸಹಜಸ್ಥಿತಿಗೆ ಮರಳಿದೆ. ಆದರೆ, ಜನರಲ್ಲಿ ಖರೀದಿಯ ಧಾವಂತ, ಉತ್ಸಾಹ ಕಂಡುಬರಲಿಲ್ಲ.

ಕೋವಿಡ್‌ ಎರಡನೇ ಅಲೆ ಹೆಚ್ಚಿದ ಕಾರಣ ಸರ್ಕಾರ ಮತ್ತು ಜಿಲ್ಲಾಡಳಿತ ಎರಡು ವಿಧದ ಲಾಕ್‌ಡೌನ್‌ ವಿಧಿಸಿದ್ದರಿಂದ ವ್ಯಾಪಾರ, ವಟಿವಾಟು ಇಲ್ಲದೆ ತೀವ್ರ ತೊಂದರೆಯಾಗಿತ್ತು. ಹೋಟೆಲ್‌ಗಳು, ಮಾರುಕಟ್ಟೆ ಸಂಪೂರ್ಣ ಬಂದ್‌ ಆಗಿದ್ದರಿಂದ ಜನರು ಪರದಾಡಿದರು.

ದುಡಿಯುವ ವರ್ಗದವರು ಕೆಲಸ ಅರಿಸಿಕೊಂಡು ಹೋದರೂ ಕೊರೊನಾದಿಂದ ಯಾರೂ ಕರೆದುಕೊಳ್ಳುವ ಸ್ಥಿತಿಯಲ್ಲಿ ಇದ್ದಿಲ್ಲ. ಒಂದು ರೀತಿಯ ನಿರುತ್ಸಾಹದಿಂದಲೇ ದಿನವನ್ನು ಆರಂಭಿಸಿದ್ದ ಜನತೆಗೆ ಲಾಕ್‌ಡೌನ್‌ ತೆರವು ಮಾಡಿದ್ದರಿಂದ ಉಸಿರಾಡುವಂತೆ ಆಯಿತು.

ಲಸಿಕೆ ಕೊರತೆ: 18 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲಾಗಿತ್ತು. ಜನ ಹೆಚ್ಚಿನ ಸಂಖ್ಯೆಯಲ್ಲಿ ಆಧಾರ್‌ ಕಾರ್ಡ್‌ ಹಿಡಿದುಕೊಂಡು ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದರು. ಆದರೆ ‘ನೋ ಸ್ಟಾಕ್‌’ ಎಂಬ ನಾಮಫಲಕ ನೋಡಿ ನಿರಾಶರಾಗಿ ಮರಳಿ ಹೋಗಬೇಕಾಯಿತು. ಲಸಿಕಾ ಪ್ರಕ್ರಿಯೆಗೆ ವೇಗ ನೀಡುವ ದೃಷ್ಟಿಯಿಂದ ಜಿಲ್ಲಾಸ್ಪತ್ರೆ, ನಗರ ಆರೋಗ್ಯ ಕೇಂದ್ರ, ಸಾರಿಗೆ ಸಂಸ್ಥೆಯ ಕೇಂದ್ರ ಬಸ್‌ ನಿಲ್ದಾಣದಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು.

ಆದರೆ ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆಗಳ ಕೊರತೆ ಕಾಡಿದ್ದರಿಂದ ಲಸಿಕೆ ಹಾಕಲು ಆಗಲಿಲ್ಲ. ಇದರಿಂದ ಜನ ಗೊಣಗಾಡುತ್ತಲೇ ಮನೆಯತ್ತ ತೆರಳಿದರು.

ನಿಧಾನಗತಿಯ ವ್ಯಾಪಾರ: ಲಾಕ್‌ಡೌನ್‌ ಅನ್ನು ಇನ್ನೂ ಸಂಪೂರ್ಣವಾಗಿ ತೆರವುಗೊಳಿಸಿಲ್ಲ. ಬೆಳಿಗ್ಗೆ 6 ರಿಂದ 10 ರವರೆಗೆ ತರಕಾರಿ, ಹಣ್ಣು, ಹಾಲು, ದಿನಸಿ, ಹೋಟೆಲ್‌ಗಳಲ್ಲಿ ಪಾರ್ಸಲ್‌ ಸೇವೆ, ಮದ್ಯದ ಅಂಗಡಿ ಸೇರಿದಂತೆ ಮಾರುಕಟ್ಟೆಯಲ್ಲಿ ತರೇವಾರಿ ಅಂಗಡಿಗಳು ತೆರೆದಿದ್ದರು ಜನರು ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರಲಿಲ್ಲ.

ರಸ್ತೆಯ ಉದ್ದಗಲಕ್ಕೂ ಹಣ್ಣು, ತರಕಾರಿ, ಸೊಪ್ಪು, ಹೂ ಮಾರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಗ್ರಾಹಕರು ಕಡಿಮೆ ಸಂಖ್ಯೆಯಲ್ಲಿ ಇದ್ದರಿಂದ ನಿರೀಕ್ಷಿತ ಪ್ರಮಾಣದ ವ್ಯಾಪಾರ ಆಗುತ್ತಿಲ್ಲ ಎಂದು ವ್ಯಾಪಾರಸ್ಥರು ಅಲವತ್ತುಕೊಂಡರು.

ಮುಂಗಾರು ಮಳೆ ಉತ್ತಮವಾಗಿ ಆಗಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಕೃಷಿ ಉಪಕರಣ, ಔಷಧ, ಗೊಬ್ಬರ, ಕ್ರಿಮಿನಾಶಕ ಸೇರಿದಂತೆ ವಿವಿಧ ವಸ್ತುಗಳ ಖರೀದಿಗೆ ಗ್ರಾಮೀಣ ಭಾಗದ ಜನರು ರೈತ ಸಂಪರ್ಕ ಕೇಂದ್ರ, ರಸಗೊಬ್ಬರದ ಅಂಗಡಿಗಳ ಎದುರು ನೆರೆದಿದ್ದು ಕಂಡು ಬಂತು. ಕಟ್ಟಡ ಸಾಮಗ್ರಿಗಳ ಖರೀದಿಯ ಅಂಗಡಿಗಳು ತೆರೆದಿದ್ದವು.

ಕಾರ್ಮಿಕರಿಗೆ ಲಸಿಕೆ

ಕೊಪ್ಪಳ: ಜಿಲ್ಲಾ ಕಾರ್ಮಿಕ ಇಲಾಖೆ ಮತ್ತು ಸಿದ್ಧರಾಮೇಶ್ವರ ಬಾರ್ ಬೆಂಡಿಂಗ್ ಮತ್ತು ಕಟ್ಟಡ ಕಾರ್ಮಿಕರ ಸಂಘದ ಸಹಯೋಗದಲ್ಲಿ ತಾಲ್ಲೂಕಿನ ಕಿನ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಟ್ಟಡ ಕಾರ್ಮಿಕರಿಗೆ ಕೋವಿಡ್ ಲಸಿಕೆ ನೀಡಲಾಯಿತು.

ಲಸಿಕಾ ಅಭಿಯಾನದ ಅಂಗವಾಗಿ ಕಿನ್ನಾಳದ 250ಕ್ಕೂ ಹೆಚ್ಚು ಕಾರ್ಮಿಕರಿಗೆ ಲಸಿಕೆ ಹಾಕಲಾಯಿತು.

ಜೂ.7 ರಂದು ತಾಲ್ಲೂಕಿನ ಮಿಟ್ಟಿಕೇರಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಲಾಗಿತ್ತು. ಜಾಗೃತಿ ಮೂಡಿಸಲಾಗಿತ್ತು.

ಬಹದ್ದೂರ ಬಂಡಿ ಗ್ರಾಮದಲ್ಲಿ 100ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿಗೆ ಲಸಿಕೆ ನೀಡಲಾಯಿತು.

ಕೊಪ್ಪಳ ಜಿಲ್ಲಾ ಕಾರ್ಮಿಕ ಅಧಿಕಾರಿ ವೀಣಾ ಮಾಸ್ತಿ, ಕೊಪ್ಪಳ ತಾಲ್ಲೂಕು ಕಾರ್ಮಿಕ ನಿರೀಕ್ಷಕ ಶಿವಶಂಕರ್ ಬಿ. ತಳವಾರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ, ಆರೋಗ್ಯ ಇಲಾಖೆ ಸಿಬ್ಬಂದಿ, ಕಿನ್ನಾಳ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ರಮೇಶ ಜಿ. ಘೋರ್ಪಡೆ, ಸಂಘದ ಉಪಾಧ್ಯಕ್ಷ ಉಮೇಶ ಬಡಿಗೇರ, ಕಾರ್ಯದರ್ಶಿ ಸುರೇಶ ವಡ್ಡರ, ಬಸವರಾಜ ಚಿಲವಾಡಿಗಿ, ಬಸಣ್ಣ ವಡ್ಡರ, ರವಿ ಹಡಪದ, ಈರಪ್ಪ ತಿಮ್ಲಾಪುರ, ಹುಸೇನ್ ಬಾಷಾ ದಿಂಡೂರು, ನಾಗರಾಜ ಕಾಯಿಗಡ್ಡಿ, ಗಂಗಾಧರ ಸಜ್ಜನ, ಶಿವಪ್ಪ ಹರಿಜನ, ಜಾಫರಸಾಬ ಗುಡ್ಲಾನೂರ, ಗುರುಲಿಂಗಮ್ಮ ಕುಂಬಾರ ಹಾಗೂ ಸಂಘದ ಸರ್ವ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT