ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಬೇಟೆಗೆ ನಾನಾ ಕಸರತ್ತು: ಅಭ್ಯರ್ಥಿಗಳಿಂದ ಸಾಮಾಜಿಕ ಮಾಧ್ಯಮಗಳ ಪರಿಣಾಮಕಾರಿ ಬಳಕೆ

Published 8 ಏಪ್ರಿಲ್ 2024, 6:22 IST
Last Updated 8 ಏಪ್ರಿಲ್ 2024, 6:22 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭಾ ಚುನಾವಣೆಯ ಎರಡನೇ ಹಂತಕ್ಕೆ ನಾಮಪತ್ರ ಸಲ್ಲಿಕೆ ಆರಂಭಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆಯೇ ಅಭ್ಯರ್ಥಿಗಳು ಮತಬೇಟೆಗೆ ನಾನಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 12ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಾಮಪತ್ರ ಸ್ವೀಕರಿಸಲಾಗುವುದು. ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಏ.12ರಿಂದ 19ರ ವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಕೆ ಜರುಗಲಿದೆ.

ಈ ಹಿನ್ನೆಲೆಯಲ್ಲಿ ಪ್ರಚಾರ ಕ್ರಮೇಣವಾಗಿ ಚುರುಕು ಪಡೆದುಕೊಳ್ಳುತ್ತಿದ್ದು ಪ್ರಸ್ತುತ ದಿನಮಾನದದಲ್ಲಿ ಎಲ್ಲರ ಅಚ್ಚುಮೆಚ್ಚಾಗಿರುವ ಸಾಮಾಜಿಕ ತಾಣಗಳನ್ನು ಎಲ್ಲ ಪಕ್ಷದವರೂ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಕೊಪ್ಪಳ ಲೋಕಸಭಾ ವ್ಯಾಪ್ತಿಯ ಕೊಪ್ಪಳ, ಯಲಬುರ್ಗಾ, ಕುಷ್ಟಗಿ, ಗಂಗಾವತಿ, ಕನಕಗಿರಿ, ಸಿಂಧನೂರು, ಮಸ್ಕಿ ಮತ್ತು ಸಿರಗುಪ್ಪ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ, ಪಟ್ಟಣಗಳಲ್ಲಿ ಮುಂದಿನ ಮೂರ್ನಾಲ್ಕು ದಿನ ಎಲ್ಲಿ ಪ್ರಚಾರ ಮಾಡಲಾಗುತ್ತದೆ ಎನ್ನುವ ವಿಷಯವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಸಭೆ, ಸಮಾರಂಭ, ಸಮಾವೇಶ ನಡೆಯುವ ಸ್ಥಳ, ಸಮಯ, ಮಾರ್ಗ ಮಧ್ಯದಲ್ಲಿ ಭೇಟಿಯಾದವರ ಫೋಟೊಗಳು, ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪ್ರಮುಖ ಜಾತ್ರೆ, ಉತ್ಸವಗಳಲ್ಲಿಯೂ ಅಭ್ಯರ್ಥಿಗಳು ತಪ್ಪದೇ ಪಾಲ್ಗೊಳ್ಳುತ್ತಿದ್ದಾರೆ. ಇತ್ತೀಚೆಗೆ ಕನಕಗಿರಿಯಲ್ಲಿ ನಡೆದ ಕನಕಾಚಲಪತಿ ಜಾತ್ರೆ, ಶಿವಶಾಂತವೀರ ಸ್ವಾಮೀಜಿ ಪುಣ್ಯಸ್ಮರಣೆ ಹೀಗೆ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಅಲ್ಲಿ ತಮ್ಮ ಇರುವಿಕೆಯನ್ನು ತೋರಿಸಿಕೊಳ್ಳುತ್ತಿದ್ದಾರೆ. ಅಲ್ಲಿಯೂ ಮತಬೇಟೆಗೆ ಕಸರತ್ತು ನಡೆಸುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ ಕೆ. ಬಸವರಾಜ ಕ್ಯಾವಟರ್‌ ಮತ್ತು ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ತಮ್ಮ ಫೇಸ್‌ಬುಕ್‌ ಖಾತೆಗಳಲ್ಲಿ ಪ್ರಚಾರದ ಎಲ್ಲ ವಿಡಿಯೊಗಳು, ಫೋಟೊಗಳು ಮತ್ತು ಪತ್ರಿಕಾ ತುಣುಕುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳನ್ನು ಮತ್ತು ಬಿಜೆಪಿ ನರೇಂದ್ರ ಮೋದಿ ಅವರನ್ನು ಜಪ ಮಾಡುತ್ತಿದೆ. ಅಭ್ಯರ್ಥಿಗಳ ಹಾಗೂ ಪಕ್ಷಗಳ ಬೆಂಬಲಿಗರು ಅಭ್ಯರ್ಥಿಗಳನ್ನು ಪೋಸ್ಟರ್‌ಗಳನ್ನು ಶೇರ್‌ ಮಾಡುವ ಮೂಲಕ ಪ್ರಚಾರಕ್ಕೆ ಕೈ ಜೋಡಿಸುತ್ತಿದ್ದಾರೆ. ಆದರೆ, ಸಾಮಾಜಿಕ ತಾಣಗಳ ಮೂಲಕದ ಪ್ರಚಾರದಲ್ಲಿ ಸ್ಥಳೀಯ ಸಮಸ್ಯೆಗಳೇ ಗೌಣವಾಗಿವೆ. ಈ ಮಾಧ್ಯಮಗಳ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ಕಾಂಗ್ರೆಸ್‌ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಕ್ಷೇತ್ರ ವ್ಯಾಪ್ತಿಯ ಮತದಾರರ ಫೋನ್‌ಗಳಿಗೆ ಆಡಿಯೊ ಸಂದೇಶವನ್ನು ರವಾನೆ ಮಾಡುತ್ತಿದೆ.

ಸಹೋದರನ ಕಸರತ್ತು: ರಾಜಶೇಖರ ಹಿಟ್ನಾಳ ಅವರ ಸಹೋದರರೂ ಆದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಕೂಡ ತಮ್ಮ ಪ್ರಚಾರದ ವಿಷಯಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಲ್ಲಿಯೂ ಮತಬೇಟೆ ನಡೆಸುತ್ತಿದ್ದಾರೆ.

ಫೇಸ್‌ಬುಕ್‌ನಲ್ಲಿ ಕ್ಯಾವಟರ್‌ 25 ಕೆ., ರಾಘವೇಂದ್ರ ಹಿಟ್ನಾಳ 19 ಕೆ. ಮತ್ತು ರಾಜಶೇಖರ ಹಿಟ್ನಾಳ 15 ಕೆ. ಹಿಂಬಾಲಕರನ್ನು ಹೊಂದಿದ್ದಾರೆ. ಇನ್ನೊಂದು ವಿಶೇಷವೆಂದರೆ ಅಭ್ಯರ್ಥಿಗಳ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಹಲವು ಖಾತೆಗಳಿವೆ. ಹೀಗಾಗಿ ಯಾವುದು ಅಧಿಕೃತವೆನ್ನುವ ಗೊಂದಲವಂತೂ ಅವರ ಬೆಂಬಲಿಗರು ಮತ್ತು ಕಾರ್ಯಕರ್ತರಲ್ಲಿದೆ.

ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಫೇಸ್‌ಬುಕ್‌ ಖಾತೆ
ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಫೇಸ್‌ಬುಕ್‌ ಖಾತೆ
ಸಭೆ, ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಿರಂತರ ಭಾಗಿ ಪ್ರತಿ ಕಾರ್ಯಕ್ರಮದ ಮಾಹಿತಿ ಹಂಚಿಕೆ ಪಕ್ಷದ ಕಾರ್ಯಕರ್ತರ ಮೂಲಕವೂ ಆಡಿಯೊ ಸಂದೇಶ ರವಾನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT