ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಸೋಲು ಗ್ಯಾರಂಟಿಯಾದರೂ ಸುಳ್ಳು ಹೇಳಿಕೆ’

ವಿಧಾನ ಪರಿಷತ್ ಚುನಾವಣೆ ಸಭೆ: ಬಿಜೆಪಿ ಹೇಳಿಕೆಗೆ ಸಚಿವ ತಂಗಡಗಿ ವ್ಯಂಗ್ಯ
Published 26 ಮೇ 2024, 14:37 IST
Last Updated 26 ಮೇ 2024, 14:37 IST
ಅಕ್ಷರ ಗಾತ್ರ

ಕುಷ್ಟಗಿ: ‘ಲೋಕಸಭೆ ಚುನಾವಣೆಯಲ್ಲಿ ಸೋಲು ಖಾತರಿಯಾಗಿದ್ದರೂ ಬಿಜೆಪಿಯವರು ಇಪ್ಪತ್ತು ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತೇವೆ ಎಂದು ಹೇಳುತ್ತಿರುವುದೇ ಮಹಾಸುಳ್ಳು ಎನ್ನುವುದಕ್ಕೆ ಉತ್ತಮ ಉದಾಹರಣೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ವಿಧಾನಪರಿಷತ್ತಿಗೆ ಈಶಾನ್ಯ ಪದವೀಧರ ಕ್ಷೇತ್ರದಿಂದ ನಡೆಯಲಿರುವ ಚುನಾವಣೆ, ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶನಿವಾರ ಪಟ್ಟಣದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಪೂರ್ವಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್‌ ಪಕ್ಷ ಸತ್ಯವನ್ನೇ ಹೇಳುತ್ತ ಬಂದಿದೆ. ಆದರೆ ಬಿಜೆಪಿಯ ಮೇಲಿನ ನಾಯಕರಿಂದ ಕೆಳಗಿನ ಹಂತದವರೆಗಿನವರ ವರೆಗೂ ಸುಳ್ಳು ಹೇಳುವ ಮೂಲಕ ಮತದಾರರನ್ನು ಖರೀದಿಸಿದವರಂತೆ ಮಾತನಾಡುವ ಮೂಲಕ ಫಲಿತಾಂಶಕ್ಕೆ ಮೊದಲೇ ಗೆದ್ದವರಂತೆ ಬೀಗುತ್ತಿರುವುದು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ಮಧ್ಯೆ ಕಂಡುಬರುವ ವ್ಯತ್ಯಾಸ’ ಎಂದರು. ಅಲ್ಲದೆ, ‘ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಗೆಲುವು ಖಚಿತ’ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಮಾತನಾಡಿ, ‘ಪಕ್ಷದ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು. ಕಾಂಗ್ರೆಸ್‌ ಪಕ್ಷದ ಜನಪರ ಯೋಜನೆಗಳು ಅಭ್ಯರ್ಥಿ ಗೆಲುವಿಗೆ ಪೂರಕವಾಗಲಿವೆ’ ಎಂದು ಹೇಳಿದರು.

ಮಾಜಿ ಸಂಸದ ಸಂಗಣ್ಣ ಕರಡಿ, ಶೇಖರಗೌಡ ಮಾಲಿಪಾಟೀಲ ಸೇರಿದಂತೆ ಅನೇಕ ಪ್ರಮುಖರು ಸಭೆಯಲ್ಲಿ ಮಾತನಾಡಿದರು. ಮಾಲತಿ ನಾಯಕ, ಚಂದ್ರಶೇಖರ ನಾಲತ್ವಾಡ, ದೊಡ್ಡಯ್ಯ ಗದ್ದಡಕಿಮಠ, ವಸಂತ ಮೇಲಿನಮನಿ, ಲಾಡ್ಲೆಮಷಾಕ್ ಯಲಬುರ್ಗಿ, ಯಲ್ಲಪ್ಪ ತಳವಾರ, ವಕೀಲರಾದ ಅಮರೇಗೌಡ ಪಾಟೀಲ, ಶಂಕರಗೌಡ ಪಾಟೀಲ, ಪುರಸಭೆ ಸದಸ್ಯ ಮೈನುದ್ದೀನ್ ಮುಲ್ಲಾ, ವಿಜಯ ನಾಯಕ, ನೇಮಣ್ಣ ಮೇಲಸಕ್ರಿ, ಹನುಮೇಶ ಭೋವಿ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT