ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಲೋಕಸಭಾ | ಗೆಲುವಿನ ಅಂತರ: ಎಚ್‌.ಜಿ. ರಾಮುಲುದ್ದೇ ದಾಖಲೆ

17 ಲೋಕಸಭಾ ಚುನಾವಣೆಗಳಲ್ಲಿ ಮೂರು ಬಾರಿ ಮಾತ್ರ ಲಕ್ಷ ಮತಗಳ ಅಂತರದ ಜಯ
Published 20 ಏಪ್ರಿಲ್ 2024, 6:32 IST
Last Updated 20 ಏಪ್ರಿಲ್ 2024, 6:32 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆಯೇ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಗೆಲುವಿನ ಅಂತರದ ಮಾತಿನ ಭರಾಟೆಯೂ ಜೋರಾಗಿದೆ.

ಎರಡೂ ಪಕ್ಷಗಳ ನಾಯಕರು ನಮ್ಮ ಪಕ್ಷದ ಅಭ್ಯರ್ಥಿ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಭರವಸೆಯ ಮಾತುಗಳನ್ನಾಡುತ್ತಿದ್ದಾರೆ. ಇನ್ನೂ ಕೆಲ ನಾಯಕರು ಗೆಲುವಿನ ಅಂತರ ಹೇಳುವುದು ಹೇಗೆ? ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಅಷ್ಟೇ ಎನ್ನುತ್ತಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕನಕಗಿರಿ, ಗಂಗಾವತಿ, ಮಸ್ಕಿ, ಸಿಂಧನೂರು ಮತ್ತು ಸಿರಗುಪ್ಪ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವಿನ ಅಂತರದ ಚರ್ಚೆ ಕಾವು ಪಡೆದುಕೊಂಡಿದೆ.

ಹಿಂದಿನ ಚುನಾವಣೆಗಳ ಗೆಲುವಿನ ಅಂತರದ ಇತಿಹಾಸದ ಪುಟಗಳ ದಾಖಲೆ ನೋಡಿದಾಗ ಹಿಂದಿನ ಎಲ್ಲ 17 ಲೋಕಸಭಾ ಚುನಾವಣೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವಿನ ಸಾಧನೆ ಮಾಡಿರುವ ದಾಖಲೆ ಇರುವುದು ಮೂರು ಬಾರಿ ಮಾತ್ರ. ಹೆಚ್ಚು ಮತಗಳ ಅಂತರದಲ್ಲಿ ಜಯಭೇರಿ ಮೊಳಗಿಸಿದ ದಾಖಲೆ ಇರುವುದು ಎಚ್‌.ಜಿ. ರಾಮುಲು ಅವರ ಹೆಸರಿನಲ್ಲಿ.

1980ರ ಚುನಾವಣೆಯಲ್ಲಿ ಎಚ್‌.ಜಿ. ರಾಮುಲು ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ (ಇಂದಿರಾ ಕಾಂಗ್ರೆಸ್‌) ಪಕ್ಷದಿಂದ ಸ್ಪರ್ಧಿಸಿ 2,48,077 ಮತಗಳನ್ನು ಪಡೆದಿದ್ದರೆ, ಅರಸ್‌ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಎಚ್‌.ಆರ್‌. ಬಸವರಾಜು 86,274 ಮತಗಳನ್ನು ಗಳಿಸಿದ್ದರು. ಈ ಚುನಾವಣೆಯಲ್ಲಿ ರಾಮುಲು ಅವರ ಗೆಲುವಿನ ಅಂತರ 1,61,803 ಮತಗಳಾಗಿದ್ದವು. ಇದೇ ಇಂದಿಗೂ ದಾಖಲೆಯಾಗಿ ಉಳಿದುಕೊಂಡಿದೆ.

ಇದನ್ನು ಹೊರತುಪಡಿಸಿದರೆ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಪಡೆದ ಎರಡನೇ ಮತ್ತು ಮೂರನೇ ಸಂಸದ ಎನ್ನುವ ಹೆಗ್ಗಳಿಕೆ ಇರುವುದು ಸಿದ್ರಾಮೇಶ್ವರ ಸ್ವಾಮಿ ಅವರ ಹೆಸರಿನಲ್ಲಿ. ಸಿದ್ರಾಮೇಶ್ವರ ಅವರು 1971ರ ಚುನಾವಣೆಯಲ್ಲಿ 2,04,285 ಮತಗಳನ್ನು ಪಡೆದಿದ್ದರೆ ಪ್ರತಿಸ್ಪರ್ಧಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಶಿವಮೂರ್ತಿ ಸ್ವಾಮಿ ಅಳವಂಡಿ ಅವರು 67,685 ಮತಗಳನ್ನು ಗಳಿಸಿದ್ದರು. ಈ ಚುನಾವಣೆಯಲ್ಲಿ ಗೆಲುವು ಪಡೆದ ಅಭ್ಯರ್ಥಿಯ ಮತಗಳ ಅಂತರ 1,36,600.

ಸಿದ್ರಾಮೇಶ್ವರ ಅವರೇ ತಮ್ಮ ಮುಂದಿನ (1977) ಚುನಾವಣೆಯಲ್ಲಿ 1,25,779 ಮತಗಳ ಅಂತರದಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಸಂಗಣ್ಣ ಅಗಡಿ ಅವರ ಎದುರು ಗೆಲುವಿನ ಪತಾಕೆ ಹಾರಿಸಿ ಇದುವರೆಗಿನ ಚುನಾವಣೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿದ ಏಕೈಕ ಸಂಸದ ಎನ್ನುವ ವಿಶೇಷತೆ ಹೊಂದಿದ್ದಾರೆ. ಸಿದ್ರಾಮೇಶ್ವರ 2,23,451 ಮತಗಳನ್ನು ಪಡೆದಿದ್ದರೆ ಸಂಗಣ್ಣ ಅಗಡಿ 97,672 ಮತಗಳನ್ನು ಗಳಿಸಿದ್ದರು.

ಇನ್ನುಳಿದಂತೆ 1998ರ ಚುನಾವಣೆಯಲ್ಲಿ ಎಚ್‌.ಜಿ.ರಾಮುಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಕಣಕ್ಕಿಳಿದು 83,122 ಮತಗಳಿಂದ ಮತ್ತು 2009ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಶಿವರಾಮಗೌಡ 81,789 ಮತಗಳ ಅಂತರದಿಂದ ಜಯ ಪಡೆದಿದ್ದು ಕ್ರಮವಾಗಿ ನಾಲ್ಕು ಹಾಗೂ ಐದನೇ ಹೆಚ್ಚು ಮತಗಳ ಅಂತರದ ಗೆಲುವಿನ ಸಾಧನೆಯಾಗಿದೆ.

ಕಡಿಮೆ ಗೆಲುವಿನ ಅಂತರದಲ್ಲೂ ಇದೆ ದಾಖಲೆ!
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 1962ರ ಚುನಾವಣೆಯಲ್ಲಿ ಶಿವಮೂರ್ತಿ ಸ್ವಾಮಿ ಅಳವಂಡಿ ಅವರು ಲೋಕಸೇವಕ ಸಂಘದಿಂದ ಸ್ಪರ್ಧಿಸಿ ಪಡೆದಿದ್ದ 4281 ಮತಗಳ ಅಂತರದ ಗೆಲುವು ಈಗಲೂ ಕಡಿಮೆ ಅಂತರದ ಜಯವೆನ್ನುವ ದಾಖಲೆಯಾಗಿ ಉಳಿದುಕೊಂಡಿದೆ. ಆ ಚುನಾವಣೆಯಲ್ಲಿ ಅವರು 125018 ಮತಗಳನ್ನು ಪಡೆದಿದ್ದರೆ ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಂಗಣ್ಣ ಅಗಡಿ 120737 ಮತಗಳನ್ನು ಗಳಿಸಿದ್ದರು. ಇನ್ನುಳಿದಂತೆ 1957ರಲ್ಲಿ ಸಂಗಣ್ಣ ಅಗಡಿ 10467 1991ರಲ್ಲಿ ಬಸವರಾಜ ಪಾಟೀಲ ಅನ್ವರಿ 11197 ಮತ್ತು 1999ರಲ್ಲಿ ಎಚ್‌.ಜಿ. ರಾಮುಲು 12512 ಮತಗಳ ಅಂತರದಲ್ಲಿ ಗೆಲುವು ಪಡೆದಿದ್ದು ಕ್ರಮವಾಗಿ ಕಡಿಮೆ ಮತಗಳ ಅಂತರದ ಗೆಲುವಿನ ಪಟ್ಟಿಯಲ್ಲಿ ನಂತರದ ಮೂರು ಸ್ಥಾನಗಳನ್ನು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT