ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಬಿಜೆಪಿ ಸೇರಲಿರುವ ಮಾಜಿ ಸಂಸದ ಶಿವರಾಮಗೌಡ

Published 2 ಏಪ್ರಿಲ್ 2024, 17:31 IST
Last Updated 2 ಏಪ್ರಿಲ್ 2024, 17:31 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭೆ‌‌ ಚುನಾವಣೆ ಕಾವು ಏರುತ್ತಿದ್ದಂತೆಯೇ ‘ಆಪರೇಷನ್‌‘ ನಡೆಸುತ್ತಿರುವ ಜಿಲ್ಲೆಯ ಬಿಜೆಪಿ ನಾಯಕರು ಮಾಜಿ ಸಂಸದ ಶಿವರಾಮಗೌಡ ಅವರನ್ನು ಪಕ್ಷಕ್ಕೆ ಕರೆತರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅವರು ಕಾಂಗ್ರೆಸ್ ತೊರೆದು ಎರಡ್ಮೂರು ದಿನಗಳಲ್ಲಿ ಬಿಜೆಪಿ ಸೇರ್ಪಡೆಯಾಗುವುದು ನಿಶ್ಚಿತವಾಗಿದೆ.

2009ರ ಲೋಕಸಭಾ ಚುನಾವಣೆಯಲ್ಲಿ ಶಿವರಾಮಗೌಡ ಬಿಜೆಪಿಯಿಂದ ಗೆದ್ದು ಸಂಸದರಾಗಿದ್ದರು. 2014ರಲ್ಲಿ ಟಿಕೆಟ್ ತಪ್ಪಿದ್ದರಿಂದ ಅಸಮಾಧಾನಗೊಂಡು ಕಾಂಗ್ರೆಸ್‌ ಸೇರಿದ್ದರು. ಮರಳಿ ಅವರನ್ನು ಪಕ್ಷಕ್ಕೆ ಕರೆ ತರುವ ಪ್ರಯತ್ನದಲ್ಲಿ ಜಿಲ್ಲೆಯ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಹಾಲಪ್ಪ ಆಚಾರ್, ಮಾಜಿ‌ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು ಸೇರಿದಂತೆ ಬಿಜೆಪಿಯ ಹಲವು ನಾಯಕರು ಮಂಗಳವಾರ ಶಿವರಾಮಗೌಡ ಅವರ ಗಂಗಾವತಿಯ ಮನೆಗೆ ಭೇಟಿ ನೀಡಿ ಚರ್ಚಿಸಿದರು. ಈ ವೇಳೆ ಪಕ್ಷಕ್ಕೆ ಬರುವಂತೆ ಮಾಡಿದ ಮನವಿಗೆ ಒಪ್ಪಿಕೊಂಡಿದ್ದಾರೆ.

ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್‌ ಪಂಚಮಸಾಲಿ ಸಮುದಾಯದವರಾಗಿದ್ದು, ಇದೇ ಸಮುದಾಯದ ಶಿವರಾಮಗೌಡ ಅವರ ಸೇರ್ಪಡೆಯಿಂದ ಮತಗಳ ಕ್ರೋಢೀಕರಣಕ್ಕೆ ಅನುಕೂಲವಾಗುತ್ತದೆ ಎನ್ನುವುದು ನಾಯಕರ ಲೆಕ್ಕಾಚಾರ. ಇವರ ಜೊತೆಗೆ ಜಿಲ್ಲೆಯ ಕೆಲ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳಿಗೂ ಬಿಜೆಪಿ ಗಾಳ ಹಾಕುತ್ತಿದೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಶಿವರಾಮಗೌಡ ‘ಬಿಜೆಪಿ ಮುಖಂಡರು ಭೇಟಿಯಾಗಿದ್ದರು. ಈ ವಾರದಲ್ಲಿಯೇ ಬಿಜೆಪಿ ಸೇರುತ್ತೇನೆ’ ಎಂದರು. ದೊಡ್ಡನಗೌಡ ಪಾಟೀಲ ’ಜಿಲ್ಲೆಯ ಇನ್ನೂ ಕೆಲ ನಾಯಕರು ಪಕ್ಷಕ್ಕೆ ಬರುವವರಿದ್ದಾರೆ. ಆದಷ್ಟು ಬೇಗನೆ ಅವರ ಹೆಸರು ಬಹಿರಂಗಪಡಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT