ಮಾಚಿದೇವರ ಕಾಯಕ ನಿಷ್ಠೆ ಮಾದರಿ

7
ಜಿಲ್ಲಾಡಳಿತದ ವತಿಯಿಂದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ

ಮಾಚಿದೇವರ ಕಾಯಕ ನಿಷ್ಠೆ ಮಾದರಿ

Published:
Updated:
Prajavani

ಕೊಪ್ಪಳ: ಮಡಿವಾಳ ಮಾಚಿದೇವರ ಕಾಯಕ ನಿಷ್ಠೆ ಎಲ್ಲರಿಗೂ ಮಾದರಿ ಎಂದು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎ.ಎಂ.ಮಡಿವಾಳರ‌ ಹೇಳಿದರು.

ನಗರದ ಸಾಹಿತ್ಯಭವನದಲ್ಲಿ ಶುಕ್ರವಾರ ಜಿಲ್ಲಾಡಳಿತದ ವತಿಯಿಂದ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಶರಣರ ವಸ್ತ್ರವನ್ನೂ ಮಾತ್ರ ಮಡಿ ಮಾಡುವುದು. ದುಶ್ಛಟಗಳಿಗೆ ಬಲಿಯಾದವರ ಮತ್ತು ಕಳ್ಳರ, ಕ್ರೂರಿಗಳ ಹಾಗೂ ಬೇರೆಯವರಿಂದ ಹಣ ತಿನ್ನುವವರ ಬಟ್ಟೆಗಳನ್ನು ಮಡಿ ಮಾಡುವುದಿಲ್ಲ ಎನ್ನುವ ನಾಲ್ಕು ನಿಯಮದ ಮೂಲಕ ಕಾಯಕದಲ್ಲಿ ತೊಡಗಿದ್ದ ವೀರಗಣಾಚಾರಿ. ಇದರಿಂದ ಸಾಮಾನ್ಯನಾಗದೇ ಅಸಮಾನ್ಯ ನಿಜಶರಣ ಮಡಿವಾಳ ಮಾಚಿದೇವರಾಗಿದ್ದರು ಎಂದರು.

ಕಾಯಕ ನಿಷ್ಠ, ನಿರ್ಭಯ, ನಿಷ್ಕಲ್ಮಶ ಮನಸ್ಸಿನವರು ಮಾಚಿದೇವರು. 800 ವರ್ಷಗಳ ಹಿಂದಿನ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಸುಧಾರಣೆ ಮಾಡಲು ಪ್ರಯತ್ನಿಸಿದರು. 12ನೇ ಶತಮಾನ ಕ್ರಾಂತಿಕಾರಿ ಯುಗ ವಾಗಿತ್ತು. ಸಮಾಜದ ಸ್ವಾಸ್ಥ್ಯಕ್ಕೆ ಶರಣರೆಲ್ಲರೂ ಶ್ರಮಿಸಿದರು. ಶರಣರು ತಮಗಾಗಿ ವಚನ ಬರೆಯದೇ ಸಮಾಜದಲ್ಲಿನ ಆರ್ಥಿಕ‌ ಮತ್ತು‌ ಮತೀಯ ವ್ಯವಸ್ಥೆಯನ್ನು ಹೋಗಲಾಡಿಸಲು ಬೇರೆಯವರಿಗಾಗಿ ವಚನ ರಚಿಸಿದರು. ಕಾಯಕದಲ್ಲಿ ಮೇಲು ಕೀಳು ಇಲ್ಲ. ಎಲ್ಲ ಕಾರ್ಯಗಳು ಸಮಾನ ಎಂದು ಪ್ರತಿಪಾದಿಸಿದರು. ಶರಣರಲ್ಲಿಯೇ ಹಿರಿಯರಾಗಿದ್ದ ಮಾಚಿದೇವರು ಅನುಭಾವಿಗಳಾಗಿದ್ದರು ಎಂದರು.

ದುಶ್ಚಟಗಳಿಗೆ ದಾಸರಾಗಬಾರದು. ಆಂತರಿಕ ಮತ್ತು ಬಾಹ್ಯವಾಗಿ ನಿರ್ಮಲವಾಗುವ ಮೂಲಕ ಶರಣರಿಗೆ ಗೌರವ ನೀಡಬೇಕು. ಹಣ ಮತ್ತು ಅಧಿಕಾರದಿಂದ ಯಾರೂ ದೊಡ್ಡವರಾಗುವುದಿಲ್ಲ.‌ ವಿಚಾರಗಳಿಂದ ಮತ್ತು ಜೀವನ ಶೈಲಿಯಿಂದ ದೊಡ್ಡವರಾಗುತ್ತಾರೆ. ಹಾಗಾಗಿ ಒಳ್ಳೆಯ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದರು. 

ಮಾಚಿದೇವರ ಗುರುಗಳು ಶಾಸ್ತ್ರದ ಜತೆಗೆ ದುಷ್ಟರೊಡನೆ ಹೋರಾಡಲು ಶಸ್ತ್ರ ಕಲೆಯನ್ನು ಕಲಿಸಿದರು. ಪ್ರವರ್ಧಮಾನಕ್ಕೆ ಬಂದ ಬಳಿಕ ಶರಣರ ಅನುಭವ ಮಂಟಪಕ್ಕೆ ಕಳುಹಿಸಿದರು. ಅಲ್ಲಿಂದ ಇವರ ಸಮಾಜ ತಿದ್ದುವ ಕೆಲಸ ಆರಂಭವಾಯಿತು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲದಲ್ಲಿದ್ದ ಅಸ್ಪೃಶ್ಯತೆ, ಅಸಮಾನತೆ ಸೇರಿದಂತೆ ವಿವಿಧ ರೀತಿಯ ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಮ್ಮ ವಚನಗಳ ಮೂಲಕ ತಿದ್ದುವ ಕೆಲಸವನ್ನು ಮಾಚಿದೇವರು ಮಾಡಿದ್ದಾರೆ. 12ನೇ ಶತಮಾನದ ಶರಣರಲ್ಲಿ ಶ್ರೇಷ್ಠರಾಗಿದ್ದಾರೆ. ಜೀವ ಇರುವುದರಲ್ಲಿಯೇ ಸಮಾಜ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಅಲ್ಲದೇ ಮಾಚಿದೇವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ್, ಸ್ವಾತಂತ್ರ್ಯ ಹೋರಾಟಗಾರ ಸುಮಂತರಾವ್ ಪಟವಾರೆ, ಮಡಿವಾಳ ಸಮಾಜದ ಜಿಲ್ಲಾ ಕಾರ್ಯದರ್ಶಿ ಗವಿಸಿದ್ದಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಅಧ್ಯಕ್ಷ ಶಂಕ್ರಪ್ಪ,‌ ಸಮಾಜದ ಮುಖಂಡರಾದ ಮಹೇಶ,‌ ರಾಮಣ್ಣ,‌ ಆರ್.ವಿ.ಮಡಿವಾಳರ,‌ ವಿರುಪಣ್ಣ, ವೆಂಕೋಬಪ್ಪ, ಕನಕಪ್ಪ, ಬಸಪ್ಪ ಮಡಿವಾಳರ‌, ಮೂಕಪ್ಪ, ವೆಂಕಟೇಶ ಭಾಗ್ಯನಗರ ಇದ್ದರು.

ತಹಶೀಲ್ದಾರ್ ಎಂ.ಎನ್‌.ಮಜ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಾಬು ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಸಿ.ವಿ.ಜಡಿಯವರ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !