ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಕರ್ತವ್ಯ ಲೋಪದ ಆರೋಪ: ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್‌ ಆದೇಶ

ಪುರಸಭೆ ಮುಖ್ಯಾಧಿಕಾರಿಗೆ ‘ಕಡ್ಡಾಯ ರಜೆ ಶಿಕ್ಷೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಕಾರಣಕ್ಕೆ ಇಲ್ಲಿಯ ಪುರಸಭೆ ಮುಖ್ಯಾಧಿಕಾರಿ ಉಮೇಶ ಹಿರೇಮಠ ಅವರಿಗೆ ಕಡ್ಡಾಯ ರಜೆ ಮೇಲೆ ತೆರಳುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಆ.13 ರಂದು ಇಲ್ಲಿಯ ಸರ್ಕ್ಯೂಟ್‌ ಹೌಸ್‌ನಲ್ಲಿ ಬೆಳಿಗ್ಗೆ ನಡೆದ ಪುರಸಭೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ವೇಳೆ ಮುಖ್ಯಾಧಿಕಾರಿ ಕಾರ್ಯವೈಖರಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಜಿಲ್ಲಾಧಿಕಾರಿ ವಿಕಾಸ್ ಕಿಶೋರ ಸುರಳ್ಕರ್ ಅದೇ ದಿನ ಸಂಜೆ ಹೊರಡಿಸಿರುವ ಆದೇಶದಲ್ಲಿ ಕಡ್ಡಾಯ ರಜೆಯ ಮೇಲೆ ತೆರಳುವಂತೆ ಉಮೇಶ ಹಿರೇಮಠ ಅವರಿಗೆ ಸೂಚಿಸಿದ್ದಾರೆ.

ತೆರವಾಗಿರುವ ಸ್ಥಾನಕ್ಕೆ ಕೊಪ್ಪಳ ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಟಿ.ಎ.ಮಂಜುನಾಥ್ ಅವರನ್ನು ನಿಯೋಜಿಸಲಾಗಿದೆ. ಅವರು ಶನಿವಾರ ಪ್ರಭಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಆದೇಶದಲ್ಲೇನಿದೆ?: ವಿವಿಧ ಯೋಜನೆಗಳಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಿದ್ದ ಕಾಮಗಾರಿಗಳಿಗೆ ಟೆಂಡರ್‌ ಕರೆದಿಲ್ಲ. ಕಾಮಗಾರಿಗೆ ಆದೇಶ ನೀಡಿಲ್ಲ. ಹಾಗಾಗಿ ಲಕ್ಷಾಂತರ ರೂಪಾಯಿ ಮೊತ್ತದ ಅನುದಾನದ ಕಾಮಗಾರಿಗಳನ್ನು ಅನುಷ್ಠಾಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಈ ವಿಷಯದ ಕುರಿತು ಜುಲೈ 5 ರಂದು ನಡೆದ ಸಭೆಯಲ್ಲಿ ಸೂಚನೆ ನೀಡಿದರೂ ಕರ್ತವ್ಯದಲ್ಲಿ ಸುಧಾರಿಸಿಕೊಂಡಿಲ್ಲ.

13ನೇ ಹಣಕಾಸು ಮತ್ತು 2021-22ರ ಕಾಮಗಾರಿಗಳ ಕ್ರಿಯಾಯೋಜನೆ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ. ಈ ಕಾರಣದಿಂದ ಪಟ್ಟಣದ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಹಾಗಾಗಿ ಆಡಳಿತಾತ್ಮಕ ದೃಷ್ಟಿಯಿಂದ ಮುಖ್ಯಾಧಿಕಾರಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿ ಶಿಸ್ತುಕ್ರಮ ಜರುಗಿಸುವುದು ಸೂಕ್ತವಾಗಿದೆ ಎಂದು ವಿವರಿಸಲಾಗಿದೆ.

ಈ ವರ್ಷದ ಫೆ.16 ರಂದು ಮುಖ್ಯಾಧಿಕಾರಿಯಾಗಿ ಉಮೇಶ ಹಿರೇಮಠ ಅಧಿಕಾರವಹಿಸಿಕೊಂಡಿದ್ದರು. ಆದರೆ ಕೇವಲ ಆರು ತಿಂಗಳೊಳಗೆ ಕರ್ತವ್ಯಲೋಪದ ಮೇಲೆ ಕಡ್ಡಾಯ ರಜೆಯ ಮೇಲೆ ಕಳುಹಿಸಿರುವ ಜಿಲ್ಲಾಧಿಕಾರಿ ಕ್ರಮಕ್ಕೆ ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಸ್ತೆಯ ಜಾಗ ಒತ್ತುವರಿ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಂಡಿದ್ದೇ ಮುಖ್ಯಾಧಿಕಾರಿಗೆ ಮುಳುವಾಗಿದೆ. ರಾಜಕೀಯ ಒತ್ತಡದಿಂದ ಮುಖ್ಯಾಧಿಕಾರಿಗೆ ಕಡ್ಡಾಯ ರಜೆ ‘ಶಿಕ್ಷೆ’ ಕೊಡಿಸಲಾಗಿದೆ ಎಂದು ಸಾರ್ವಜನಿಕರು ಹೇಳಿದರು.

ಎತ್ತಂಗಡಿ ಹಿಂದೆ ರಾಜಕಾರಣ: ಅಧ್ಯಕ್ಷ ಅತೃಪ್ತಿ

ಕೆಲವೇ ತಿಂಗಳ ಹಿಂದೆ ಅಧಿಕಾರವಹಿಸಿಕೊಂಡಿದ್ದ ಮುಖ್ಯಾಧಿಕಾರಿಯನ್ನು ಏಕಾಏಕಿ ರಜೆಯ ಮೇಲೆ ಕಳುಹಿಸಿರುವ ಜಿಲ್ಲಾಧಿಕಾರಿ ಕ್ರಮ ಸಮಂಜಸ ಎನಿಸುವುದಿಲ್ಲ ಎಂದು ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ ಸುದ್ದಿಗಾರರ ಬಳಿ ಅಸಮಾಧಾನ ಹೊರಹಾಕಿದರು. ಆದೇಶದಲ್ಲಿ ವಿವರಿಸಿರುವಂತೆ ಮುಖ್ಯಾಧಿಕಾರಿ ಮೇಲೆ ಯಾವುದೇ ರೀತಿಯ ಗಂಭೀರ ಸ್ವರೂಪದ ಕರ್ತವ್ಯಲೋಪದ ಆರೋಪಗಳಿಲ್ಲ. ಆದರೂ ಕಡ್ಡಾಯ ರಜೆ ಆದೇಶ ಹೊರಡಿಸಿರುವುದು ತಮಗೂ ಅಚ್ಚರಿ ತಂದಿದೆ ಎಂದರು.

13ನೇ ಹಣಕಾಸು ಯೋಜನೆ 2011-12ನೇ ಹಣಕಾಸು ವರ್ಷಕ್ಕೆ ಸೇರಿದ್ದಾಗಿದೆ. ಕೆಲ ಯೋಜನೆಗಳ ಕಾಮಗಾರಿಗಳಿಗೆ ಟೆಂಡರ್‌ ಕರೆಯುವುದಕ್ಕೆ ಸಲ್ಲಿಸಿರುವ ಪ್ರಸ್ತಾವಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ಯರ್ಥವಾಗದೇ ಉಳಿದಿವೆ. ಈ ಪುರಸಭೆಗೆ ಕಳೆದ ಒಂದು ದಶಕದಿಂದಲೂ ಎಂಜಿನಿಯರ್‌ ಇಲ್ಲದ ಕಾರಣ ಟೆಂಡರ್‌ ಮತ್ತಿತರೆ ಕೆಲಸಗಳಿಗೆ ತಾಂತ್ರಿಕ ಅಡಚಣೆಯಾಗಿ ಕೆಲಸಗಳು ವಿಳಂಬಗೊಂಡಿವೆ. ಈ ಸಮಸ್ಯೆ ಜಿಲ್ಲಾಧಿಕಾರಿ ಗಮನದಲ್ಲಿಯೂ ಇದೆ. ಹೀಗಿದ್ದೂ ಕೆಲ ತಿಂಗಳ ಹಿಂದಷ್ಟೇ ಇಲ್ಲಿಗೆ ಬಂದಿರುವ ಮುಖ್ಯಾಧಿಕಾರಿಯನ್ನು ರಜೆ ಮೇಲೆ ಕಳಿಸಲು ಜಿಲ್ಲಾಧಿಕಾರಿ ಹೊರಡಿಸಿರುವ ತರಾತುರಿ ಆದೇಶದ ಹಿಂದೆ ಯಾವ ರೀತಿಯ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿ ಅಡಗಿದೆ ಎಂದು ಪ್ರಶ್ನಿಸಿದರು.

ರಸ್ತೆ ಮತ್ತು ಚರಂಡಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದ ಕೆಲ ವ್ಯಕ್ತಿಗಳ ಕಟ್ಟಡಗಳನ್ನು ನೆಲಸಮಗೊಳಿಸಲು ಮುಖ್ಯಾಧಿಕಾರಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. ಈ ಕಾರಣಕ್ಕೆ ಕೆಲ ರಾಜಕಾರಣಿಗಳು ಚುನಾಯಿತ ಪ್ರತಿನಿಧಿಯ ಮೂಲಕ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಎತ್ತಂಗಡಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಸಾರ್ವಜನಿಕರ ಆರೋಪ ನಿಜ ಇರಲೂಬಹುದು ಎಂದು ಅಧ್ಯಕ್ಷ ಜಿ.ಕೆ.ಹಿರೇಮಠ, ಸದಸ್ಯ ಕಲ್ಲೇಶ ತಾಳದ ಶಂಕೆ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು