ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು ಮೇಳ: ₹1.5 ಕೋಟಿಗೂ ಹೆಚ್ಚು ವಹಿವಾಟು

‘ಹಣ್ಣುಗಳ ರಾಜ’ನ ಮಾರುಕಟ್ಟೆಯಲ್ಲಿ ಕೇಸರ್‌ಗೆ ಭರಪೂರ ಬೇಡಿಕೆ
Last Updated 1 ಜೂನ್ 2022, 13:53 IST
ಅಕ್ಷರ ಗಾತ್ರ

ಕೊಪ್ಪಳ: ಕಣ್ಣು ಹಾಯಿಸಿದಷ್ಟೂ ಹಣ್ಣುಗಳ ರಾಶಿ, ತರಹೇವಾರಿ ತಳಿಗಳು, ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಉಪ್ಪಿನಕಾಯಿ ರುಚಿ.

ಇದು ನಗರದ ತೋಟಗಾರಿಕೆ ಕಚೇರಿ ಆವರಣದಲ್ಲಿ ಹತ್ತು ದಿನಗಳ ಕಾಲ ನಡೆದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳದ ಕೊನೆಯ ದಿನವಾದ ಬುಧವಾರ ಕಂಡು ಬಂದ ಚಿತ್ರಣ.

ಕೋವಿಡ್‌ ಕಾರಣಕ್ಕಾಗಿ ಕಳೆದ ಎರಡು ವರ್ಷ ಮೇಳ ನಡೆದಿರಲಿಲ್ಲ. ಹೀಗಾಗಿ ಈ ಬಾರಿಯ ಮೇಳಕ್ಕೆ ಹೆಚ್ಚು ಬೇಡಿಕೆ ಕಂಡು ಬಂತು. ಗ್ರಾಹಕರಿಗೆ ಒಂದೇ ಕಡೆ ವಿವಿಧ ತಳಿಗಳ ಹಣ್ಣುಗಳನ್ನು ಖರೀದಿಸುವ ಅವಕಾಶ ಲಭಿಸಿತು. ಜಿಲ್ಲೆಯಲ್ಲಿಯೇ ಬೆಳೆದ ಮಾವುಗಳು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಮೇಳ ಆಯೋಜಿಸಿತ್ತು.

ಕೇಸರ್‌ಗೆ ಬೇಡಿಕೆ: ಕೇಸರ್ ತಳಿಯ ಮಾವಿನ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದ್ದು, ಇದೊಂದೇ ತಳಿ 100 ಟನ್‌ಗೂ ಹೆಚ್ಚು ಮಾರಾಟವಾಗಿದೆ.

ಬೆನೆಶಾನ್, ದಶಹರಿ, ರಸಪುರಿ, ಸ್ವರ್ಣರೇಖಾ, ಇಮಾಮ ಪಸಂಧ, ಆಪೋಸ್, ಮಲ್ಲಿಕಾ, ತೋತಾಪುರಿ, ಸಿಂಧೂರಿ, ಕಲ್ಮಿ ಹಣ್ಣುಗಳು 50ರಿಂದ 60 ಟನ್‌ಗೂ ಹೆಚ್ಚು ಮಾರಾಟವಾಗಿದೆ. ಉಪ್ಪಿನಕಾಯಿಗೆ ಬಳಸುವ ಪುನಾಸ್ ಕಾಯಿ ಅಂದಾಜು 5 ಟನ್‌ನಷ್ಟು ಮಾರಾಟವಾಯಿತು. ₹1.5 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ ತಿಳಿಸಿದರು.

ಮೇಳದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ’ಇಲ್ಲಿನ ಕೇಸರ್‌ ಮಾವಿನ ಹಣ್ಣುಗಳನ್ನು ಹೊರರಾಜ್ಯಗಳಿಗೂ ಕಳುಹಿಸಲಾಗಿದೆ. 10 ದಿನಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಹಾಗೂ 50ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು. ರೈತರು ನೈಸರ್ಗಿಕವಾಗಿ ಮಾಗಿಸಿದ ತಮ್ಮ ವಿವಿಧ ತಳಿಯ ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿದ್ದಾರೆ‘ ಎಂದು ತಿಳಿಸಿದರು.

ಅಮೃತವರ್ಷಿಣಿ ಎಫ್.ಇ.ಒ ಅಧ್ಯಕ್ಷ ಸಂತೋಷ್ ಸರ್ನಾಡಗೌಡರ್, ರೈತರಾದ ವೀರೇಶ್ ನಾಡಿಗೇರ, ಶಿವಣ್ಣ ಹೊಸಮನಿ, ಶ್ರೀನಿವಾಸರಾವ್ ಜಾಲಿಹಾಳ, ಷಣ್ಮುಖಪ್ಪ ಘಂಟಿ, ನಾಗಪ್ಪ, ವೀರಭದ್ರಸ್ವಾಮಿ ಬಸವರಾಜ, ಫಕೀರಪ್ಪ ಸ್ವಾಮಿ, ವಾಮದೇವ ಎಚ್, ಮಾರುತಿ, ಶ್ರೀಪಾದ ಮುರಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

10 ದಿನಗಳ ಕಾಲ ನಡೆದ ಮಾವು ಮೇಳ

ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಪ್ರಯತ್ನ

ಒಟ್ಟು 150 ಟನ್‌ಗೂ ಹೆಚ್ಚು ಮಾವು ಮಾರಾಟ

ಮುಂದಿನ ದಿನಗಳಲ್ಲಿ ಕೇಸರ್ ತಳಿಯನ್ನು ಅಧಿಕ ಸಾಂದ್ರತೆ ಬೇಸಾಯ ಪದ್ದತಿಯಲ್ಲಿ 1000 ಎಕರೆಯ ಪ್ರದೇಶಾಭಿವೃದ್ಧಿ ಕೈಗೊಳ್ಳುವ ಗುರಿ ಹೊಂದಲಾಗಿದೆ.
ಕೃಷ್ಣ ಉಕ್ಕುಂದ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ

ವಿವಿಧ ತಳಿಯ ಹಣ್ಣುಗಳನ್ನು ತಂದಿದ್ದರಿಂದ ಮೇಳದಲ್ಲಿ ನನ್ನ ನಿರೀಕ್ಷೆಗಿಂತಲೂ ಹೆಚ್ಚು ವ್ಯಾಪಾರವಾಗಿದ್ದು ಖುಷಿ ನೀಡಿದೆ.
ಯಲ್ಲಮ್ಮ
ಹಣ್ಣಿನ ವ್ಯಾಪಾರಿ, ಕನಕಗಿರಿ

‘ರೈತರಲ್ಲಿ ಕಾದು ಮಾರುವ ತಾಳ್ಮೆ ಇರಲಿ’

ಕೊಪ್ಪಳ: ರೈತರಲ್ಲಿ ಬೆಳೆ ಬೆಳೆಯುವಾಗ ಇರುವ ತಾಳ್ಮೆ ಅದನ್ನು ಮಾರುವಾಗ ಇರುವುದಿಲ್ಲ ಎಂದು ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ ಹೇಳಿದರು.

ಮಾವು ಮೇಳದ ಸಮಾರೋಪದಲ್ಲಿ ಮಾತನಾಡಿದ ಅವರು ‘ಫಸಲು ಬಂದ ಕೂಡಲೇ ಸಿಕ್ಕಷ್ಟೇ ಬೆಲೆಗೆ ಮಾರಾಟ ಮಾಡುವ ಯೋಚನೆ ರೈತರಲ್ಲಿರುತ್ತದೆ. ಇದರಿಂದ ಮಧ್ಯವರ್ತಿಗಳಿಗೆ ಹೆಚ್ಚು ಲಾಭವಾಗಿ ರೈತ ನಷ್ಟಕ್ಕೆ ಸಿಲುಕುತ್ತಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮಾರುಕಟ್ಟೆಯ ಜ್ಞಾನ ಪಡೆದುಕೊಳ್ಳುವುದು ಅವಶ್ಯಕವಾಗಿದೆ‘ ಎಂದರು.

‘ಮಧ್ಯವರ್ತಿಗಳಿಲ್ಲದೆ ರೈತರಿಗೆ ನೇರವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಮೇಳದ ಉದ್ದೇಶವಾಗಿದೆ. ಇಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳು ದೊರೆಯುತ್ತವೆ. ಜೊತೆಗೆ ರೈತರಿಗೂ ಲಾಭ ದೊರೆಯಲಿದೆ. ಸರ್ಕಾರದ ಇಂತಹ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT