ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲಾವಿದರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ’: ಹ್ಯಾಸ್ಯ ಕಲಾವಿದ ಪ್ರಾಣೇಶ್

Last Updated 8 ಆಗಸ್ಟ್ 2021, 10:59 IST
ಅಕ್ಷರ ಗಾತ್ರ

ಗಂಗಾವತಿ: ‘ಕಲ್ಯಾಣ ಕರ್ನಾಟಕ ಭಾಗದ ಕಲಾವಿದರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಮಿಡಿಯದೆ ಇರುವುದು ದುರಂತವಾಗಿದೆ. ಮುಂದೆ ಕಲಾವಿದರ ಅಭಿವೃದ್ಧಿಗೆ ಸಹಕರಿಸದೆ ಇದ್ದಲ್ಲಿ ನಾಡಿನ ಕಲೆ, ಸಂಸ್ಕೃತಿ ಮರೆಯಾಗಲಿದೆ‘ ಎಂದು ಗಂಗಾವತಿ ಹ್ಯಾಸ್ಯ ಕಲಾವಿದ ಪ್ರಾಣೇಶ್ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜಿಲ್ಲಾ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಘಟಕದ ವತಿಯಿಂದ ಭಾನುವಾರ ನಡೆದ ಗಂಗಾವತಿ, ಕಾರಟಗಿ, ಕನಕಗಿರಿ ತಾಲ್ಲೂಕು ಕಲಾವಿದರ ಸಭೆಯಲ್ಲಿ ಅವರು ಮಾತನಾಡಿದರು.

ಕೊರೊನಾ ಸಂಕಷ್ಟದ ಕಾಲದಲ್ಲಿ ಕಲಾವಿದರಿಗೆ ಸರ್ಕಾರ ಯಾವುದೇ ನೆರವು ನೀಡಿಲ್ಲ. ಇದರಿಂದ ಸಾಕಷ್ಟು ಕಲಾವಿದರ ಬದುಕು ಬೀದಿಗೆ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕ ಕಲಾವಿದರು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದರೂ ಕಲಾ ಪ್ರತಿಭೆಗಳನ್ನು ಗುರುತಿಸುವಲ್ಲಿ ಸರ್ಕಾರ ಪ್ರತಿ ಭಾರಿ ವಿಫಲವಾಗುತ್ತಿದೆ. ಆದ್ದರಿಂದ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯ ಎಲ್ಲ ಪ್ರಕಾರದ ಕಲಾವಿದರು ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಮಾತ್ರ ಯಶಸ್ಸು ಸಿಗಲಿದೆ ಎಂದರು.

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ ಪೀರಗಾರ್‌ ಮಾತನಾಡಿ, ರಾಜ್ಯ ಸರ್ಕಾರದಿಂದ ನಡೆಯುವ ಉತ್ಸವಗಳಲ್ಲಿ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರಿಗೆ ಅವಕಾಶ ನೀಡಬೇಕು. ಕಲಾವಿದರಿಗೆ ಸಿಗುವ ಸವಲತ್ತುಗಳು ಬೆಂಗಳೂರು, ಉತ್ತರ ಕನ್ನಡ, ದಾವಣಗೆರೆ, ವಿಜಯಪುರ, ಶಿವಮೊಗ್ಗ ಭಾಗದವರಿಗೆ ಸೀಮಿತವಾಗಿವೆ. ಕಲ್ಯಾಣ ಕರ್ನಾಟಕ ಭಾಗದ ಕಲಾವಿದರಿಗೂ ಸಿಗಬೇಕು ಎಂದರು.

ಕೊಪ್ಪಳದಲ್ಲಿ ಸಿದ್ದಯ್ಯ ಪುರಾಣಿಕ ಪ್ರತಿಷ್ಠಾನ ರಚನೆ, ಕಲಾವಿದರಿಗೆ ಗುರುತಿನ ಚೀಟಿ, ಅರ್ಹರಿಗೆ ಮನೆ ನಿರ್ಮಾಣ, ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ಸ್ಥಾಪನೆ, ಹಂಪಿ ಮಾದರಿಯಲ್ಲಿ ಜಿಲ್ಲಾ ಕಲಾವಿದರ ಉತ್ಸವ ಆಚರಣೆ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬೀದಿ ನಾಟಕಗಾರರು, ಹಗಲು ವೇಶಗಾರರು, ಕಲಾವಿದರು, ನೃತ್ಯ ಕಲಾವಿದರು, ರಂಗಭೂಮಿ ಕಲಾವಿದರು, ಡೊಳ್ಳು ಕುಣಿತ, ಭರತನಾಟ್ಯ, ಜಾನಪದ ನೃತ್ಯ, ಬಯಲಾಟ, ಸೇರಿ ವಿವಿಧ ಕಲಾವಿದರು ಭಾಗಿವಹಿಸಿದ್ದರು.

ಹಿರಿಯ ಕಲಾವಿದ ರೇವಣಸಿದ್ದಯ್ಯ, ವಿಭೂತಿ ಗುಂಡಪ್ಪ ,ಎಂ. ಶಿವಲಿಂಗಪ್ಪ, ರಜಿಯಾ ಬೇಗಂ. ಕಲಿಕೇರಿ ಚಿನ್ನಪ್ಪ, ಬಿ.ಎಸ್ ಪೂಜಾರಿ, ದೀಪ ದರೋಜಿ, ಖಾದರ್ ಸಾಬ್, ಶರಣು ಶೆಟ್ಟರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT