ಮಂಗಳವಾರ, ಜುಲೈ 27, 2021
25 °C
ವಾರದಿಂದ ಜಿಲ್ಲೆಯಲ್ಲಿ ಮಲೆನಾಡಿನ ವಾತಾವರಣ ನಿರ್ಮಾಣ

ನಿರೀಕ್ಷೆಗಳ ಮೂಟೆ ಹೊರಿಸಿದ ಮುಂಗಾರು: ಕೆಲವು ಕಡೆ ಬಿತ್ತನೆ, ತೇವಾಂಶ ಕೊರತೆ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭದಲ್ಲಿ ತನ್ನ ಆರ್ಭಟ ತೋರಿ ನಂತರ ಮರೆಯಾಗಿದ್ದು, ಗಾಳಿ, ಮೋಡಗಳ ಕಣ್ಣಾಮುಚ್ಚಾಲೆಯೊಂದಿಗೆ ಮಳೆ ನೀರು ಭುವಿಗೆ ತಾಕದೇ ಜನರು ಆಕಾಶದತ್ತ ನೋಡುವಂತೆ ಆಗಿದೆ.

ಮುಂಗಾರು ಮಳೆ ಉತ್ತಮವಾಗಬಹುದು ಎಂದು ಬಹುತೇಕ ರೈತರು ಹೊಲಗಳನ್ನು ಹರಗಿ ಸ್ವಚ್ಛಗೊಳಿಸಿ ಅಲ್ಪ ತೇವಾಂಶದಲ್ಲಿ ಬಿತ್ತನೆ ಮಾಡಿದ್ದಾರೆ. ಕೆಲವು ಕಡೆ ಮೊಳಕೆ ಒಡೆದ ಸಸಿಗಳು ತೇವಾಂಶದ ಕೊರತೆಯಿಂದ ಬಾಡುತ್ತಿದ್ದರೆ, ಹಸಿ ಮಳೆಯಾದರೆ ಬಿತ್ತನೆ ಕಾರ್ಯಕ್ಕೆ ಸನ್ನದ್ಧರಾಗಲು ರೈತರು ದಿನ ಎಣಿಸುತ್ತ ಕುಳಿತಿದ್ದಾರೆ.

ಕುಕನೂರು, ಯಲಬುರ್ಗಾ, ಕೊಪ್ಪಳ ತಾಲ್ಲೂಕಿನ ಅಳವಂಡಿ ಹೋಬಳಿಯ ರೈತರು ಅಲ್ಪ ತೇವಾಂಶದಲ್ಲಿಯೇ ಸಮೃದ್ಧ ಕಪ್ಪು ಮಣ್ಣಿನಲ್ಲಿ ಈಗಾಗಲೇ ಹೆಸರು, ಉದ್ದು, ಮೆಕ್ಕೆ ಜೋಳ, ಮುಂಗಾರು ಜೋಳ, ಸಜ್ಜೆ, ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ.  ಮೃಗಶಿರ ಮಳೆ ಕೆಲವು ಕಡೆ ಉತ್ತಮವಾಗಿ ಆಗಿದ್ದರೆ, ಕೆಲವು ಕಡೆ ಜಿಟಿ–ಜಿಟಿ ಸುರಿದಿದೆ. ಆರಿದ್ರಾ ಮಳೆ ಪ್ರವೇಶವಾಗಿದ್ದರೂ ಕಳೆದ ನಾಲ್ಕು ದಿನಗಳಿಂದ ದಟ್ಟವಾದ ಮೋಡಗಳು ಮೇಳೈಸಿ ಮಳೆಯಾಗುವ ಲಕ್ಷಣ ಗೋಚರಿಸಿದರು. ಮೋಡ ಒಡೆದು ನೀರಾಗಿ ಭೂಮಿಗೆ ಬಿದ್ದಿಲ್ಲ.

ಗಂಗಾವತಿ, ಕಾರಟಗಿ ಭಾಗದಲ್ಲಿಯೂ ಮಳೆ ಕೊರತೆ ಇದೆ. ಕುಷ್ಟಗಿ, ಕನಕಗಿರಿ ಭಾಗದಲ್ಲಿ ಮಸಾರಿ ಜಮೀನುಗಳು ಹೆಚ್ಚಿನ ತೇವಾಂಶ ಬೇಡುವ ಜಮೀನುಗಳಾಗಿದ್ದು, ಹಸಿ ಮಳೆಯಾದರೆ ಬಿತ್ತನೆ ಕಾರ್ಯ ಚುರುಕಾಗಲಿದೆ. ಶೇಂಗಾ, ಹತ್ತಿ ಸೇರಿದಂತೆ ವಿವಿಧ ವಾಣಿಜ್ಯ ಬೆಳೆ ಬೆಳೆಯುತ್ತಾರೆ. ಮಳೆಯಾಗುವ ಎಲ್ಲ ವಾತಾವರಣವಿದ್ದರೂ ಭಾರಿ ಮಳೆ ಇನ್ನೂ ಆಗಿಲ್ಲ. ವಾತಾವರಣ ಮಲೆನಾಡಿನಂತೆ ತಂಪಾಗಿದ್ದರೂ ನೀರು ಹರಿಯುವ ಮಳೆಯಾಗುತ್ತಿಲ್ಲ. ರೈತರು ಮಳೆಯ ನಿರೀಕ್ಷೆಯಲ್ಲಿ ಇದ್ದಾರೆ.

ಕಳಪೆ ಬೀಜ: ತಪ್ಪದ ಅಲೆದಾಟ

ಬೀಜ ಅಕ್ರಮ ಮಾರಾಟ, ಸಂಗ್ರಹ, ನಕಲಿ ಬೀಜಗಳ ಹಾವಳಿ ಕೂಡಾ ಹೆಚ್ಚಾಗಿದ್ದೂ, ಕೃಷಿ ಜಾಗೃತ ದಳದ ಅಧಿಕಾರಿಗಳು ವಿವಿಧೆಡೆ ದಾಳಿ ಮಾಡುತ್ತಿರುವುದು ನಡೆದಿದೆ. ಆದರೆ ಬೀಜ ಮೊಳಕೆ ಒಡೆಯದ ಕುರಿತು ದೂರು ನೀಡಿದರೆ ಸಕಾಲದಲ್ಲಿ ಅವರಿಗೆ ಪರಿಹಾರ ಕೂಡ ಇಲ್ಲಿಯವರೆಗೆ ದೊರೆತಿಲ್ಲ. ಅಂಥ ಕಂಪನಿಗಳ ಮೂಲ ಕಂಡು ಹಿಡಿಯುವಲ್ಲಿ ಕೃಷಿ ಇಲಾಖೆ ಅಷ್ಟೊಂದು ಶ್ರಮ ಮತ್ತು ನೈಪುಣ್ಯತೆ ಪ್ರದರ್ಶನ ಮಾಡುವುದಿಲ್ಲ.

ದೂರು ನೀಡುವ ರೈತ ಮಾತ್ರ ಅಲೆದು ಸುಸ್ತಾಗುವುದು ತಪ್ಪುತ್ತಿಲ್ಲ. ರೈತ ಸಂಪರ್ಕ ಕೇಂದ್ರಗಳ ಮೂಲಕ ಪಡೆದುಕೊಂಡ ಬೀಜ ಮತ್ತು ಗೊಬ್ಬರಕ್ಕೆ ಖಾತ್ರಿ ಇದ್ದು, ಖರೀದಿಗೆ ರೈತರು ಕೆಲಸ ಬಿಟ್ಟು ಇಲ್ಲಿಗೆ ಮುಗಿಬೀಳುವಂತೆ ಆಗಿರುವುದು ವಾಸ್ತವ. ಬೀಜ ಖರೀದಿಸಿದ ರಶೀದಿ, ಕೊಟ್ಟ ಹಣದ ದಾಖಲೆ ಇಟ್ಟುಕೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಪರಿಹಾರ ದೊರೆಯಬಹುದು. ಅಷ್ಟೊಂದು ಪುರಸೊತ್ತು ಕೃಷಿ ಕಾರ್ಯದಲ್ಲಿ ತೊಡಗಿರುವ ರೈತರಿಗೆ ಇಲ್ಲ.

ಹೀಗಾಗಿ ತಮ್ಮ ಪರಿಚಯದ, ವಿಶ್ವಾಸದ ಕಂಪನಿಗಳ ಬೀಜವನ್ನು ಹುಡುಕಾಡಿ ಖರೀದಿಸಿ ಬಿತ್ತನೆ ಕೂಡಾ ಮಾಡಿದ್ದಾರೆ. ಈಗ ಮಳೆಯ ಅವಶ್ಯಕತೆ ಅತ್ಯಂತ ಹೆಚ್ಚಾಗಿದ್ದು, ಮುಂದಿನ ವಾರದಲ್ಲಿ ಉತ್ತಮ ಮಳೆಯಾದರೆ ಮುಂಗಾರು ಬೆಳೆ ಉತ್ತಮವಾಗಿ ಬರುವುದು ಪಕ್ಕಾ ಎನ್ನಬಹುದು. ಬರಗಾಲಗಳಿಂದ ಕಂಗೆಟ್ಟಿರುವ ಇಲ್ಲಿನ ರೈತರಿಗೆ ಮುಂಗಾರು ಸಂತಸ ಹೊತ್ತು ತರುವ ನಿರೀಕ್ಷೆ ಇದೆ. ಮಳೆರಾಯ ಕೃಪೆ ತೋರಬೇಕಾಗಿರುವುದು ಸದ್ಯದ ತುರ್ತು ಕೂಡ ಹೌದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು