ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿ ಗಾತ್ರಕ್ಕಿಳಿದ ರಾಜಕಾಲುವೆ: ಒತ್ತುವರಿ ತಡೆಯುವಲ್ಲಿ ಪುರಸಭೆ ನಿರ್ಲಕ್ಷ್ಯ

Last Updated 25 ಜೂನ್ 2022, 4:51 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣದಲ್ಲಿರುವ ರಾಜಕಾಲುವೆ ಒತ್ತುವರಿ ಮುಂದುವರೆದಿದ್ದು ಅಕ್ಕಪಕ್ಕದವರು ಅತಿಕ್ರಮಿಸಿರುವುದರಿಂದ ಕಾಲುವೆ ಚಿಕ್ಕ ಚರಂಡಿಯಂತಾಗಿರುವುದು ಕಂಡುಬಂದಿದೆ.

3 ಮತ್ತು 4 ಮತ್ತು 7ನೇ ವಾರ್ಡುಗಳ ವ್ಯಾಪ್ತಿಯಲ್ಲಿ, ಕೊಪ್ಪಳ ರಾಜ್ಯ ಹೆದ್ದಾರಿ ಮಧ್ಯೆ ಬರುವ ಈ ಕಾಲುವೆ ಈಗ ನಾಪತ್ತೆಯಾಗುವ ಹಂತ ತಲುಪಿದ್ದರೂ ಪುರಸಭೆಯ ಅಧ್ಯಕ್ಷ, ಅಧಿಕಾರಿಗಳು ಅದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದೇ ಸ್ಥಿತಿ ಮುಂದುವರೆದರೆ ಭವಿಷ್ಯದಲ್ಲಿ ಜನರು ಬಹಳಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಜನರು ಹೇಳಿದ್ದಾರೆ.

ರಾಷ್ಟ್ರೀಯ ಹದ್ದಾರಿ ಪಕ್ಕದಿಂದ ಕುರುಬನಾಳ ರಸ್ತೆ ಪಕ್ಕದ ಹೊಲಗಳಲ್ಲಿ ನಾಲೆ ಹಾದು ಹೋಗಿದೆ. ಹಿಂದೆ ಮಳೆಗಾಲದಲ್ಲಿ ಇದರಲ್ಲಿ ನಿರಂತರ ನೀರು ಹರಿಯುತ್ತಿತ್ತು. ಹೆಚ್ಚು ಮಳೆಯಾದರೆ ಹಳ್ಳ ತುಂಬಿ ಹರಿಯುತ್ತಿತ್ತು. ಸುತ್ತ ಮುತ್ತ ಬಡಾವಣೆಗಳು ಹುಟ್ಟಿಕೊಂಡ ನಂತರ ಹಳ್ಳವನ್ನು ರಾಜಕಾಲುವೆ ಎಂದೆ ಕರೆಯಲಾಯಿತು. ಈಗ ಕಾಲುವೆಯೇ ಮಾಯವಾಗುತ್ತಿದೆ ಎಂದೆ ಸಾರ್ವಜನಿಕರು ವಿವರಿಸಿದರು.

ಕಾಲುವೆಯ ಅಕ್ಕಪಕ್ಕದಲ್ಲಿ ತಲೆ ಎತ್ತುತ್ತಿರುವ ಹೊಸ ಬಡಾವಣೆಗಳ ಮಾಲೀಕರು ಕಾಲುವೆ ಜಾಗವನ್ನು ಕಬಳಿಸಿದ್ದು, ಮನೆಗಳವರು ಕಾಲುವೆ ಒತ್ತುವರಿ ಮಾಡಿ ಕೈತೋಟ ಮಾಡಿಕೊಂಡಿರುವುದು ಕಂಡುಬಂದಿದೆ. ದೊಡ್ಡಪ್ರಮಾಣದಲ್ಲಿ ಮಳೆಯಾದರೆ ನೀರು ಬಡಾವಣೆಗಳ ಮನೆಗಳಿಗೆ ನುಗ್ಗುವ ಆತಂಕ ಅಲ್ಲಿಯ ಜನರದು. ಪರಿಸ್ಥಿತಿ ಹೀಗಿದ್ದರೂ ಕಾಲುವೆಯ ಮೂಲ ಜಾಗವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪುರಸಭೆ ಯಾವುದೇ ಪ್ರಯತ್ನ ನಡೆಸುತ್ತಿಲ್ಲ ಎಂದು 3-4ನೇ ವಾರ್ಡುಗಳ ಜನರು ಅಸಮಾಧಾನ ವ್ಯಕ್ತಪಡಿಸಿದರು.

ಕಂದಾಯ ಮೂಲಗಳ ಪ್ರಕಾರ ಹಳ್ಳದ ಪ್ರದೇಶವನ್ನು 'ಬ' ಖರಾಬ್ (ಸರ್ಕಾರದ ಜಾಗ) ಎಂದೆ ಮೂಲ ನಕ್ಷೆಯಲ್ಲಿ ಗುರುತಿಸಲಾಗಿದೆ. ಆದರೆ ಈ ಕಾಲುವೆಯ ವಿಸ್ತಾರದ ಬಗ್ಗೆ ಮಾಹಿತಿಗಾಗಿ ಸಂಪರ್ಕಿಸಿದರೆ ಭೂ ಮಾಪನ ಇಲಾಖೆಯವರು ಸ್ಪಷ್ಟ ಮಾಹಿತಿ ನೀಡಲಿಲ್ಲ. ಇದರ ರಕ್ಷಣೆಗೆ ಯಾರೂ ಮುಂದಾಗದ ಕಾರಣ ಒತ್ತುವರಿ ನಿರಂತರ ನಡೆಯುತ್ತಿದೆ. ಕೊಪ್ಪಳ ರಸ್ತೆಯ ಅಕ್ಕಪಕ್ಕದಲ್ಲಿ ಖಾಸಗಿ ನಿರ್ಮಾಣ ಕಾಮಗಾರಿಗಳು ನಡೆದಿದ್ದು ಅತಿಕ್ರಮಣವನ್ನು ತಡೆಯಲು ಪುರಸಭೆ ಪ್ರಯತ್ನಿಸಬೇಕು ಎಂದು ಜನರು ಒತ್ತಾಯಿಸಿದರು.

ಈ ಕುರಿತು ವಿವರಿಸಿದ ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ, ರಾಜಕಾಲುವೆ ಹತ್ತು ಅಡಿ ಅಗಲ ಇದ್ದು ಚರಂಡಿ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT