ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕನೂರು: ನಗರ ಒಂದು ಸಮಸ್ಯೆ ನೂರು

ಶುದ್ಧ ಕುಡಿಯುವ ನೀರು ಮರೀಚಿಕೆ: ಪಾದಚಾರಿ ಮಾರ್ಗ ಒತ್ತುವರಿ
Last Updated 9 ಮಾರ್ಚ್ 2020, 9:34 IST
ಅಕ್ಷರ ಗಾತ್ರ

ಕುಕನೂರು: ಇತ್ತೀಚೆಗೆ ರಾಜ್ಯ ಸರ್ಕಾರ ನೂತನ ತಾಲ್ಲೂಕು ಕೇಂದ್ರವಾಗಿ ಘೋಷಿಸಿದ ಕುಕನೂರಿನಲ್ಲಿ ಸ್ವಚ್ಛತೆ ಎನ್ನುವುದು ಮೊದಲಿನಿಂದಲೂ ಮರೀಚಿಕೆಯಾಗಿದೆ.

ಹೋಬಳಿ ಕೇಂದ್ರವಾಗಿರುವ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ಸದಾ ಗೋಚರಿಸುತ್ತವೆ. ಇನ್ನೊಂದೆಡೆ ಚರಂಡಿಯುದ್ದಕ್ಕೂ ಮಡುಗಟ್ಟಿ ನಿಂತ ತ್ಯಾಜ್ಯ ನೀರಿನ ದರ್ಶನವಾಗುತ್ತದೆ. ಇದರ ಪರಿಣಾಮ ಸ್ಥಳೀಯ ನಾಗರಿಕರಿಗೆ ಸದಾ ಸೊಳ್ಳೆ ಕಾಟ.

ನಗರದ ಫುಟ್‌ಪಾತ್‌ಗಳನ್ನು ಅಂಗಡಿ ಮಳಿಗೆಗಳು ಆಕ್ರಮಿಸಿಕೊಳ್ಳುವುದಂತೂ ಮಾಮೂಲಿ ವಿದ್ಯಮಾನ. ಪಾದಚಾರಿ ಮಾರ್ಗದ ಮುಕ್ಕಾಲು ಪಾಲನ್ನು ಅಂಗಡಿಗಳ ಮುಂಗಟ್ಟುಗಳು, ಚೌಕಟ್ಟುಗಳೇ ಒತ್ತುವರಿ ಮಾಡಿಕೊಂಡಿವೆ. ಅಂಗಡಿಯ ಜಾಹೀರಾತು ಫಲಕವನ್ನು ಪಾದಚಾರಿ ಮಾರ್ಗಕ್ಕೆ ಅಡ್ಡಲಾಗಿ ಇಡುವುದು ಪಾದಚಾರಿಗಳು ಎದುರಿಸುವ ಇನ್ನೊಂದು ತೊಡಕು.

ಬಯಲು ಶೌಚಾಲಯ ಹಾಗೂ ಮೂತ್ರಾಲಯ: ಅನೇಕ ಕಡೆ ಪಾದಚಾರಿ ಮಾರ್ಗಗಳೇ ಬಯಲು ಶೌಚಾಲಯಗಳಾಗಿ ಬಿಟ್ಟಿವೆ. ಇಲ್ಲಂತೂ ಮೂಗು ಮುಚ್ಚಿಕೊಂಡೂ ನಡೆಯಲೂ ಸಾಧ್ಯವಾಗದು.

ಪರಿಸ್ಥಿತಿ ಇಲ್ಲಿಗಷ್ಟೇ ಸೀಮಿತವಲ್ಲ. ತಿಂಗಳಾನುಗಟ್ಟಲೆ ವಾಹನಗಳನ್ನು ನಿಲ್ಲಿಸುವ ಕಡೆಗಳಲ್ಲಿ ಪಾದಚಾರಿ ಮಾರ್ಗಗಳು ಶೌಚಾಲಯಗಳಂತೆ ಬಳಕೆಯಾಗುವ ಉದಾಹರಣೆಗಳು ನಗರದಲ್ಲಿ ಸಿಗುತ್ತವೆ. ‘ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು’ ಎಂಬ ಗೋಡೆಬರಹಗಳು ಇದ್ದರೂ ಅದರ ಮೇಲೆಯೇ ಮೂತ್ರ ಮಾಡುವ ಮಹಾನುಭಾವರೂ ಇದ್ದಾರೆ. ಇಂತಹ ಕಡೆ ಮಹಿಳೆಯರು ಪಾದಚಾರಿ ಮಾರ್ಗ ಬಳಸುವುದಾದರೂ ಹೇಗೆ?

ಅನೇಕ ಕಡೆ ಫುಟ್‌ಪಾತ್‌ನಲ್ಲೇ ಕಸ ರಾಶಿ ಹಾಕಲಾಗುತ್ತದೆ. ಇಲ್ಲಂತೂ ನಡೆಯುವವರ ಗೋಳು ಹೇಳತೀರದು.
ಪಾದಚಾರಿ ಮಾರ್ಗದಲ್ಲಿ ಬೈಕ್‌ಗಳನ್ನು ಚಲಾಯಿಸುವ ಹಾವಳಿ ಇತ್ತೀಚೆಗೆ ಹೆಚ್ಚುತ್ತಿದೆ. ಸಂಚಾರ ದಟ್ಟನೆಯಲ್ಲಿ ಸಿಲುಕಿ ನಲುಗುವ ಬೈಕ್‌ ಸವಾರರರಿಗೆ ಇದರಿಂದ ಬಿಡುಗಡೆ ಪಡೆಯುವ ಸುಲಭ ದಾರಿಯಾಗಿ ಗೋಚರಿಸುವುದು ಪಾದಚಾರಿ ಮಾರ್ಗಗಳು. ಯಾವುದೇ ಅಳುಕಿಲ್ಲದೆ ಶರವೇಗದಲ್ಲಿ ಫುಟ್‌ಪಾತ್‌ನಲ್ಲಿ ಸಾಗಿಬರುವ ಬೈಕ್‌ ಸವಾರರಿಗೆ ಪಾದಚಾರಿಗಳು ಗಾಬರಿ ಬಿದ್ದು ಜಾಗ ಬಿಟ್ಟುಕೊಡಬೇಕಾಗುತ್ತದೆ.

ಇಂತಹ ಅಪರಾಧ ಎಸಗುವ ಬೈಕ್‌ ಸವಾರರನ್ನು ಪತ್ತೆಹಚ್ಚಿ ಶಿಕ್ಷಿಸಲು ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಕುಡಿಯುವ ನೀರು

ನಗರಕ್ಕೆ ಸರಬರಾಜು ವಾಗುವ ಕುಡಿಯುವ ನೀರಿನ ಭಾವಿಗೆ ಸುರಕ್ಷತೆ ಹಾಗೂ ಮುಚ್ಚುವ ವ್ಯವಸ್ಥೆ ಮಾಡಿರುವುದಿಲ್ಲ. ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸದೆ ಗಾವರಾಳ ಗ್ರಾಮದ ಮಾರ್ಗ ಮಧ್ಯದ ಜಮೀನಿನಲ್ಲಿ ಕಸ ಸುರಿಯಲಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯ ಉಂಟಾತ್ತಿದೆ. ಬೆಳೆಗಳಿಗೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ ಶುದ್ಧ ಕುಡಿಯುವ ನೀರಿನ ಘಟಕಗಳ ಅವಶ್ಯಕತೆ ಇದೆ ಎಂದು ಬಸವರಡ್ಡಿ ಬಿಡನಾಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT