ಸೋಮವಾರ, ಜನವರಿ 17, 2022
20 °C
ಪ್ರತಿವರ್ಷ ಹೂವಿನ ಹರಕೆ ತೀರಿಸುವ ಜಯಶ್ರೀ–ನಾಗರಾಜ ಹೂಗಾರ ದಂಪತಿ

ಪುಷ್ಪಾಲಂಕಾರದಲ್ಲಿ ಕಂಗೊಳಿಸಿದ ಶಕ್ತಿಮಾತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಲಿಗಿ (ಮುನಿರಾಬಾದ್): ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಯಾತ್ರಾಸ್ಥಳ, ಶಕ್ತಿ ದೇವತೆಯ ಕ್ಷೇತ್ರ ಎಂದು ಹೆಸರಾದ ಹುಲಿಗಿಯ ಹುಲಿಗೆಮ್ಮ ದೇವಿಗೆ ಈಚೆಗೆ ಭಕ್ತರೊಬ್ಬರು ಪುಷ್ಪಾಲಂಕಾರ ಸೇವೆ ಮಾಡಿದ್ದು, ಗಮನ ಸೆಳೆಯಿತು.

ಗಂಗಾವತಿಯ ಹೂವಿನ ವ್ಯಾಪಾರಿ ಜಯಶ್ರೀ–ನಾಗರಾಜ ಹೂಗಾರ ದಂಪತಿ ಹರಕೆಯಂತೆ ಪ್ರತಿವರ್ಷ ಸ್ವಾಗತ ಕಮಾನು, ದೇವಸ್ಥಾನ, ಗರ್ಭಗುಡಿ, ದೇವಸ್ಥಾನದ ಒಳ ಆವರಣ ಹಾಗೂ ದೇವಿ ವಿಗ್ರಹವನ್ನು ವಿವಿಧ ಬಣ್ಣದ ಹೂಗಳಿಂದ ಅಲಂಕರಿಸುತ್ತಾರೆ.

ದೇವಾಲಯದ ಪ್ರದಕ್ಷಿಣಾ ಪಥದಲ್ಲಿ ಹೂವು ಹಾಕಲಾಗುತ್ತದೆ. ಅದರ ಮೇಲೆ ದೇವಿಯ ಹರಕೆ ರಥೋತ್ಸವ ಬರುತ್ತದೆ. ಆ ದೃಶ್ಯ ನಯನ ಮನೋಹರವಾಗಿರುತ್ತದೆ. ವಿವಿಧ ಬಣ್ಣದ ಗುಲಾಬಿ, ಸೇವಂತಿಗೆ, ಮಲ್ಲಿಗೆ, ಡೇರೆ, ಚಂಡು, ಗ್ಲಾಡಿಯೇಟರ್ ಹಾಗೂ ಆರ್ಕಿಡ್‌ನಂಥ ನೈಸರ್ಗಿಕ ಹೂವುಗಳನ್ನು ಅಲಂಕಾರಕ್ಕೆ ಬಳಸಲಾಗುತ್ತದೆ.

‘ಸ್ಥಳೀಯವಾಗಿ ಸಿಗುವ ಹೂವುಗಳ ಜತೆಗೆ ಬೆಂಗಳೂರು, ದಾವಣಗೆರೆ ಮತ್ತು ತುಮಕೂರು ಭಾಗದಿಂದ ಅಪರೂಪದ ಹೂವುಗಳನ್ನು ತಂದು ಅಲಂಕಾರ ಮಾಡುತ್ತೇವೆ’ ಎನ್ನುತ್ತಾರೆ ಪುಷ್ಪಾಲಂಕಾರದ ಸಂಕಲ್ಪ ಮಾಡಿರುವ ಹೂವಿನ ವ್ಯಾಪಾರಿ ನಾಗರಾಜ ಹೂಗಾರ.

ಕೊಂಚ ಬದಲಾವಣೆ ಇರಲಿ ಎಂಬ ಉದ್ದೇಶದಿಂದ ಅನಾನಸ್ ಮತ್ತು ಸೇಬು ಸೇರಿದಂತೆ ಕೆಲವು ಹಣ್ಣುಗಳನ್ನು ಕೂಡ ಈ ಬಾರಿ ಅಲಂಕಾರಕ್ಕೆ ಬಳಸಲಾಗಿದೆ ಎನ್ನುತ್ತಾರೆ ಅವರು.

ಸೌಂದರ್ಯ ಭರಿತ ಹೂವುಗಳು ಮತ್ತು ಪರಿಮಳ ದೇವಾಲಯದ ಆವರಣವನ್ನು ಆಕರ್ಷಣಿಯವಾಗಿಸಿತ್ತು ಎನ್ನುತ್ತಾರೆ ಸಿಬ್ಬಂದಿ. ಪುಷ್ಪಾಲಂಕಾರ ಮತ್ತು ಹರಕೆ ರಥೋತ್ಸವ ನೆರವೇರಿಸಿದ ಜಯಶ್ರೀ–ನಾಗರಾಜ ದಂಪತಿಯನ್ನು ದೇವಸ್ಥಾನದ ಅಧಿಕಾರಿಗಳು ಸನ್ಮಾನಿಸಿದರು.

ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಿಬ್ಬಂದಿ ಗುರುರಾಜ ಪುರೋಹಿತ್, ಸಿದ್ದಪ್ಪ, ಸುಮಾ ಹಾಗೂ ಈರಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.