ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ನವಲಿ ಸಮಾನಾಂತರ ಜಲಾಶಯ ನನೆಗುದಿಗೆ

ಪ್ರತಿಬಾರಿಯೂ ವ್ಯರ್ಥವಾಗಿ ಹರಿದು ಹೋಗುತ್ತಿದೆ ತುಂಗಭದ್ರಾ ನೀರು
ಪ್ರಮೋದ ಕುಲಕರ್ಣಿ
Published 12 ಆಗಸ್ಟ್ 2024, 0:14 IST
Last Updated 12 ಆಗಸ್ಟ್ 2024, 0:14 IST
ಅಕ್ಷರ ಗಾತ್ರ

ಕೊಪ್ಪಳ: ತುಂಗಭದ್ರಾ ಜಲಾಶಯದ ನೀರು ವ್ಯರ್ಥವಾಗಿ ಹರಿದು ಹೋಗದಂತೆ ತಡೆಯಲು ಜಿಲ್ಲೆಯ ಕನಕಗಿರಿ ತಾಲ್ಲೂಕಿನ ನವಲಿ ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ಸಮಾನಾಂತರ ಜಲಾಶಯ ನಿರ್ಮಾಣದ ಆಶಯ ದಶಕಗಳೇ ಉರುಳಿದರೂ ಈಡೇರಿಲ್ಲ.

ತುಂಗಭದ್ರಾದಲ್ಲಿ 30 ಟಿಎಂಸಿ ಅಡಿಗಿಂತಲೂ ಹೆಚ್ಚು ಹೂಳು ತುಂಬಿಕೊಂಡಿರುವ ಕಾರಣ ಪರ್ಯಾಯವಾಗಿ ನವಲಿ ಬಳಿ ಹೊಸ ಜಲಾಶಯ ನಿರ್ಮಾಣ ಮಾಡುವುದಾಗಿ ದಶಕದ ಹಿಂದೆ ಆಗಿನ ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಿತ್ತು. ಅನುದಾನ ನೀಡುವುದಾಗಿಯೂ ಘೋಷಿಸಿತ್ತು.

2022ರಲ್ಲಿ ಗೋವಿಂದ ಕಾರಜೋಳ ಜಲಸಂಪನ್ಮೂಲ ಇಲಾಖೆ ಸಚಿವರಾಗಿದ್ದಾಗ ಈ ಯೋಜನೆಗಾಗಿ ₹ 13,040 ಕೋಟಿ ಮೊತ್ತದ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿತ್ತು. ಆದರೆ ಯೋಜನೆ ಮಾತ್ರ ಎರಡೂ ಪಕ್ಷಗಳ ಸರ್ಕಾರಗಳಿಂದ ಕಾರ್ಯರೂಪಕ್ಕೆ ಬಂದಿಲ್ಲ.

ತುಂಗಭದ್ರಾ ಜಲಾಶಯ ಪ್ರಸ್ತುತ ಒಟ್ಟು 105.78 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ತುಂಬಿದ ಬಳಿಕ ಪ್ರತಿಬಾರಿಯೂ ವ್ಯರ್ಥವಾಗಿ ನದಿಗೆ ನೀರು ಹರಿದು ಹೋಗುವ ಪ್ರಮಾಣ ಹೆಚ್ಚಾಗುತ್ತಿದೆ. 2022ರಲ್ಲಿ ಜಲಾಶಯದಲ್ಲಿ ಸಂಗ್ರಹವಾದ ಮತ್ತು ಹರಿದು ಹೋದ ನೀರಿನ ಪ್ರಮಾಣವೇ 604.64 ಟಿಎಂಸಿ ಅಡಿ.

ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ತುಂಗಭದ್ರಾ ನೀರಿನಲ್ಲಿ ಪಾಲು ಹೊಂದಿರುವುದರಿಂದ ರಾಜ್ಯ ಸರ್ಕಾರ ಉಳಿದ ಎರಡು ರಾಜ್ಯಗಳ ಜೊತೆ ಸಮನ್ವಯತೆ ಸಾಧಿಸಿ ಯೋಜನೆ ಆರಂಭಿಸಬೇಕಾಗಿದೆ. ತುಂಗಭದ್ರಾ ಜಲಾಶಯದಲ್ಲಿ 19ನೇ ಗೇಟ್‌ನ ಚೈನ್‌ ಲಿಂಕ್‌ ತುಂಡಾಗಿರುವುದರಿಂದ ಈಗ ನಿತ್ಯ ಲಕ್ಷಾಂತರ ಕ್ಯುಸೆಕ್‌ ನೀರು ಪೋಲಾಗುತ್ತದೆ. ಒಂದು ವೇಳೆ ಸಮಾನಾಂತರ ಜಲಾಶಯ ನಿರ್ಮಾಣವಾಗಿದ್ದರೆ ಒಂದಷ್ಟು ನೀರನ್ನಾದರೂ ಉಳಿಸಿಕೊಳ್ಳಲು ಅವಕಾಶವಿತ್ತು ಎನ್ನುತ್ತಾರೆ ಇಲ್ಲಿನ ರೈತರು.

ಪ್ರತಿ ಬಾರಿ ನೀರು ವ್ಯರ್ಥವಾಗಿ ಹರಿಯುವಾಗಲೆಲ್ಲ ಸಮಾನಾಂತರ ಜಲಾಶಯದ ಚರ್ಚೆ ಮುನ್ನಲೆಗೆ ಬರುತ್ತದೆ. ದಶಕದ ಹಿಂದಿನ ಯೋಜನೆ ಆರಂಭವಾಗಿದ್ದರೆ ಈ ಭಾಗದಲ್ಲಿ ಮಳೆ ಕೊರತೆಯಿದ್ದಾಗ ಕೃಷಿ ಚಟುವಟಿಕೆಗೆ ನೀರಿನ ತೊಂದರೆ ತಪ್ಪುತ್ತಿತ್ತು. ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕ್ಷೇತ್ರದಲ್ಲಿಯೇ ನವಲಿ ಗ್ರಾಮ ಬರುವುದರಿಂದ ’ಜಲಾಶಯ ಮಾತ್ರ ನಿರ್ಮಿಸಿದರೆ ಮುಳುಗಡೆಯ ಭೀತಿ ಇರುತ್ತದೆ. ಆದ್ದರಿಂದ ಸಣ್ಣ ಪ್ರಮಾಣದ ನೀರಿನ ಸಂಗ್ರಹದ ಮಾದರಿಗಳನ್ನು ನಿರ್ಮಿಸಿದರೆ ಹೆಚ್ಚು ರೈತರಿಗೆ ಅನುಕೂಲವಾಗುತ್ತದೆ’ ಎಂದು ಪ್ರತಿಪಾದಿಸುತ್ತಿದ್ದಾರೆ.

‘ಯಾವ ರೀತಿಯ ಜಲಾಶಯ ನಿರ್ಮಿಸಬೇಕು ಎನ್ನುವುದರ ಬಗ್ಗೆ ಪರ ಹಾಗೂ ವಿರೋಧದ ಅಭಿಪ್ರಾಯಗಳಿವೆ. ಆದ್ದರಿಂದ ಸರ್ಕಾರ ಈ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮ ಕೈಗೊಂಡು ವ್ಯರ್ಥವಾಗಿ ಹರಿಯುವ ತುಂಗಭದ್ರಾ ನೀರು ಜಿಲ್ಲೆಯಲ್ಲಿಯೇ ಒಂದಷ್ಟು ಪ್ರಮಾಣದಲ್ಲಿ ಉಳಿಸಿಕೊಳ್ಳಲು ಇರುವ ಅವಕಾಶವನ್ನು ಬಳಸಿಕೊಳ್ಳಬೇಕಿದೆ. ಇದರಿಂದ ರೈತರಿಗೂ ಲಾಭವಾಗುತ್ತದೆ’ ಎಂದು ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್‌ ಉದ್ದಿಹಾಳ್‌ ಹೇಳುತ್ತಾರೆ.

ನವಲಿ ಸಮಾನಾಂತರ ಜಲಾಶಯ ನಿರ್ಮಾಣದ ಬಗ್ಗೆ ನಮ್ಮ ಸರ್ಕಾರ ಬದ್ಧತೆ ಹೊಂದಿದೆ. ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳೊಂದಿಗೆ ಚರ್ಚಿಸಿ ತ್ವರಿತ ಕ್ರಮ ಕೈಗೊಳ್ಳಲಾಗುವುದು
ಡಿ.ಕೆ. ಶಿವಕುಮಾರ್‌ ಜಲಸಂಪನ್ಮೂಲ ಖಾತೆ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT