ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ: ದುಸ್ಥಿತಿಯಲ್ಲಿ ಹೈಟೆಕ್‌ ಹಾಸ್ಟೆಲ್‌

Published 8 ಜೂನ್ 2024, 6:34 IST
Last Updated 8 ಜೂನ್ 2024, 6:34 IST
ಅಕ್ಷರ ಗಾತ್ರ

ಕುಷ್ಟಗಿ: ಪರಿಶಿಷ್ಟ ವರ್ಗಕ್ಕೆ ಸೇರಿದ ಪದವಿ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೆಂದು ಉನ್ನತ ಶಿಕ್ಷಣ ಇಲಾಖೆ ನಿರ್ಮಿಸಿರುವ ಹೈಟೆಕ್‌ ವಸತಿ ನಿಲಯವು ನಿರ್ವಹಣೆ ಇಲ್ಲದೇ ಹಾಳಾಗುತ್ತಿದೆ.

ವಿಶೇಷವಾಗಿ ಸಮುದಾಯದ ವಿದ್ಯಾರ್ಥಿಗಳಿಗೆ ವಸತಿ ಸಹಿತ ಶಿಕ್ಷಣ ನೀಡುವ ಉದ್ದೇಶದಿಂದ ಉನ್ನತ ಶಿಕ್ಷಣ ಇಲಾಖೆಯ 20013-14ನೇ ವರ್ಷದ ಎಸ್‌ಸಿಪಿ, ಟಿಎಸ್‌ಪಿ ಅನುದಾನದಲ್ಲಿ ನಿರ್ಮಿಸಿರುವ ಸುಸಜ್ಜಿತ ವಸತಿ ನಿಲಯವನ್ನು 2019ರಲ್ಲಿ ಉದ್ಘಾಟಿಸಲಾಗಿತ್ತು. ಆದರೆ ಹಾಸ್ಟೆಲ್‌ ನಿರ್ವಹಣೆ ಹೊಣೆ ಹೊತ್ತ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಕಳೆದ ಎರಡು ವರ್ಷದಿಂದ ಅದನ್ನು ನಿಗದಿತ ಉದ್ದೇಶದ ಬದಲು ಗೋದಾಮು ಮಾಡಿದೆ.

ರಕ್ಷಣೆ ಇಲ್ಲದ ಕಾರಣ ಕಟ್ಟಡದ ಕಿಟಕಿ ಗಾಜುಗಳೆಲ್ಲ ಒಡೆದು ಹೋಗಿವೆ. ಹೊರಗೆ ಇದ್ದ ಸಿಸಿ ಕ್ಯಾಮೆರಾಗಳನ್ನು ಕಿಡಿಗೇಡಿಗಳು ಒಡೆದು ಹಾಳು ಮಾಡಿದ್ದಾರೆ. ಬಿಸಿ ನೀರಿನ ವ್ಯವಸ್ಥೆಗೆ ಅಳವಡಿಸಿದ್ದ ಸೋಲಾರ್‌ ಸಲಕರಣೆ ಒಡೆದುಹಾಕಲಾಗಿದೆ. ಮುಖ್ಯದ್ವಾರದ ಬಳಿ ಪುಂಡರು ಮದ್ಯದ ಪೌಚ್‌ಗಳು, ಗುಟ್ಕಾ, ಮಾದಕ ವಸ್ತುಗಳನ್ನು ಸೇವಿಸಿ ಬಿಸಾಡಿದ್ದಾರೆ.

ಇನ್ನು ವಿದ್ಯಾರ್ಥಿಗಳ ಕೊಠಡಿಗಳಲ್ಲಿ ಬಳಕೆ ಮಾಡದಿದ್ದರೂ ಬೆಡ್‌ಗಳೆಲ್ಲ ಹಾಳಾಗಿಹೋಗಿವೆ. ಧೂಳು ಆವರಿಸಿ ಸುಂದರ ಕಟ್ಟಡ ಹಾಳುಕೊಂಪೆಯಾಗಿದೆ. ಅಲ್ಲಿನ ಎಲ್ಲ ವಸ್ತುಗಳೂ ಹಾಳಾಗಿವೆ.  ಬೀಗ ಇಲ್ಲದ ಬಾಗಿಲುಗಳು ಮುರಿದಿವೆ. ನೀರಿನ ಕೊಳವೆಗಳನ್ನು ಕಿತ್ತುಹಾಕಲಾಗಿದೆ. ತೆರೆದಿರುವ ಜಲಸಂಗ್ರಹಾರದಲ್ಲಿ ಎಲ್ಲ ರೀತಿಯ ತ್ಯಾಜ್ಯ ಬಿದ್ದು ಗಬ್ಬೆದ್ದುಹೋಗಿರುವುದು ಸ್ಥಳಕ್ಕೆ ಭೇಟಿ ನೀಡಿದಾಗ ಕಂಡುಬಂದಿತು.

ಭೇಟಿಯೇ ಇಲ್ಲ: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ಮತ್ತು ವಸತಿ ನಿಲಯದ ಮೇಲ್ವಿಚಾರಕ ಇರುವುದು ಪಟ್ಟಣದಲ್ಲೇ ಆದರೆ ತಮ್ಮದೇ ಇಲಾಖೆಯ ವಸತಿ ನಿಲಯ ಹೀಗೆ ದುಸ್ಥಿತಿಗೆ ಒಳಗಾಗಿದ್ದರೂ ಅಲ್ಲಿಗೆ ಭೇಟಿ ನೀಡಿಲ್ಲ ಎಂಬುದಕ್ಕೆ ಅಲ್ಲಿನ ಸ್ಥಿತಿಗತಿ ನೋಡಿದರೇನೆ ಗೊತ್ತಾಗುತ್ತದೆ ಎಂದು ಸಾರ್ವಜನಿಕರಾದ ವೀರಭದ್ರಪ್ಪ, ಸಂಗಮೇಶ ಇತರರು ದೂರಿದರು.

ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಾಣಗೊಂಡಿದ್ದರೂ ಇಲಾಖೆ ಅಧಿಕಾರಿಗಳು ಆ ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಿಲ್ಲ. ಈ ಬಗ್ಗೆ ಹೇಳಿದರೂ ಹಾಸ್ಟೆಲ್ ವಾರ್ಡನ್‌ ಮತ್ತು ಇಲಾಖೆ ಅಧಿಕಾರಿ ಬೇಜವಾಬ್ದಾರಿಯಿಂದ ವರ್ತಿಸುತ್ತ ಬಂದಿದ್ದಾರೆ ಎಂಬ ಆರೋಪಗಳು ಕೇಳಿಬಂದವು. ನಿರ್ವಹಣೆಯೂ ಇಲ್ಲದ ಕಾರಣ ಕಟ್ಟಡ ಹಾಳಾಗುತ್ತಿದೆ ಎಂಬುದು ತಿಳಿಯಿತು.

ಅಧಿಕಾರಿ ಹೇಳಿದ್ದು: ಹಾಸ್ಟೆಲ್‌ ದುಸ್ಥಿತಿ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ವೀರಪ್ಪ, 'ಹಾಸ್ಟೆಲ್‌ ಬಳಕೆಯಲ್ಲಿಯೇ ಇದೆ. ಪರೀಕ್ಷೆ ನಂತರ ವಿದ್ಯಾರ್ಥಿಗಳು ಮನೆಗೆ ಹೋಗಿದ್ದಾರೆ ಎಂದರು. ಪದವಿ ಹಾಸ್ಟೆಲ್‌ ಎಂಬುದು ಇಲ್ಲ. ಕಟ್ಟಡ ಮಾತ್ರ ಇದೆ. ಮೆಟ್ರಿಕ್‌ ನಂತರದ ಹಾಸ್ಟೆಲ್‌ ಮೂಲಕ ಪದವಿ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಹನುಮಸಾಗರ ರಸ್ತೆಯಲ್ಲಿನ ಹಾಸ್ಟೆಲ್‌ದಲ್ಲಿ ನೂರು ಮಕ್ಕಳಿಗೆ ಅವಕಾಶವಿದ್ದರೂ ಮಕ್ಕಳ ಸಂಖ್ಯೆ ಕಡಿಮೆ ಇದ್ದುದರಿಂದ ಒಂದೇ ಕಡೆ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿತ್ತು. ಕಟ್ಟಡ ಸುಸ್ಥಿತಿಯಲ್ಲಿದ್ದು ನಿರ್ಲಕ್ಷ್ಯ ವಹಿಸಿಲ್ಲ ಎಂದರು.

ವಿದ್ಯಾರ್ಥಿಗಳ ವಸತಿ ಕೊಠಡಿಗಳಲ್ಲಿ ದೂಳು ಹಿಡಿದ ಉಪಕರಣಗಳು
ವಿದ್ಯಾರ್ಥಿಗಳ ವಸತಿ ಕೊಠಡಿಗಳಲ್ಲಿ ದೂಳು ಹಿಡಿದ ಉಪಕರಣಗಳು

ಪದವಿ ವಿದ್ಯಾರ್ಥಿಗಳಿಗೆಂದೆ ನಿರ್ಮಿಸಿರುವ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಮೂಲಕ ಸದ್ಬಳಕೆಯಾಗುವಂತೆ ಕ್ರಮ ಕೈಗೊಳ್ಳಬೇಕು.

-ಎಸ್‌.ವಿ.ಡಾಣಿ ಪ್ರಾಚಾರ್ಯ.

ನ್ಯಾಕ್‌ ತಂಡದ ಅಸಮಾಧಾನ ಕೆಲ ತಿಂಗಳ ಹಿಂದೆ ಇಲ್ಲಿಯ ಪದವಿ ಕಾಲೇಜಿಗೆ ಭೇಟಿ ನೀಡಿದ್ದ ರಾಷ್ಟ್ರೀಯ ಮೌಲ್ಯಂಕನ ಮತ್ತು ಮಾನ್ಯತಾ ಪರಿಷತ್ (ನ್ಯಾಕ್) ತಂಡದ ಅಧಿಕಾರಿಗಳು ಈ ಹಾಸ್ಟೆಲ್‌ ಕಟ್ಟಡವನ್ನೂ ವೀಕ್ಷಿಸಿದ್ದರು. ಆದರೆ ಅಲ್ಲಿ ವಿದ್ಯಾರ್ಥಿಗಳು ಇಲ್ಲದಿರುವುದು ಕಟ್ಟಡದಲ್ಲಿನ ದುಸ್ಥಿತಿ ಕಂಡುಬಂದಿತು. ಲಕ್ಷಾಂತರ ಹಣದಲ್ಲಿ ನಿರ್ಮಿಸಿರುವ ಕಟ್ಟಡವನ್ನು ಸದ್ಬಳಕೆ ಮಾಡಿಕೊಳ್ಳದಿರುವುದಕ್ಕೆ ಸ್ಥಳದಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT