ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಕೊಪ್ಪಳ : ಅಭ್ಯರ್ಥಿ ಸಂಖ್ಯೆಯಲ್ಲಿ ಹೊಸ ದಾಖಲೆ

ಕೊಪ್ಪಳ ಕ್ಷೇತ್ರದಲ್ಲಿ 2009ರ ದಾಖಲೆ ಮೀರಿಸಿದ ಅಭ್ಯರ್ಥಿಗಳು, ಬೇಕು ಎರಡು ಮತಯಂತ್ರ
Published 25 ಏಪ್ರಿಲ್ 2024, 5:59 IST
Last Updated 25 ಏಪ್ರಿಲ್ 2024, 5:59 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭಾ ಚುನಾವಣೆಯ ರಾಜ್ಯದ ಎರಡನೇ ಹಂತದ ಮತದಾನದ ಕ್ಷೇತ್ರಗಳಲ್ಲಿ ನಾಮಪತ್ರದ ಭರಾಟೆ ಮುಗಿಯುತ್ತಿದ್ದಂತೆ ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳು ಯಾರು, ಅವರ ಸಂಖ್ಯೆ ಎಷ್ಟು ಎನ್ನುವ ವಿಷಯವೂ ಮುನ್ನೆಲೆಗೆ ಬಂದಿದೆ.

ರಾಜ್ಯ ಸರ್ಕಾರದ ಚುನಾವಣಾ ಶಾಖೆಯ ಮಾಹಿತಿ ಪ್ರಕಾರ 1952ರಿಂದ 2018ರ ವರೆಗೆ ನಡೆದ ಒಟ್ಟು 17 ಚುನಾವಣೆಗಳು ನಡೆದಿವೆ. ಅದರಲ್ಲಿ ಇದೇ ಮೊದಲ ಬಾರಿಗೆ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 19 ಅಭ್ಯರ್ಥಿಗಳು ಕಣದಲ್ಲಿ ಉಳಿಯುವ ಮೂಲಕ ’ದಾಖಲೆ’ ಬರೆದಿದ್ದಾರೆ. ಇದುವರೆಗಿನ ದಾಖಲೆಗಳಲ್ಲಿ 2009ರ ಚುನಾವಣೆಯಲ್ಲಿ 18 ಜನ ಸ್ಪರ್ಧೆ ಮಾಡಿದ್ದೇ ಗರಿಷ್ಠ ಎನ್ನುವ ಸಾಧನೆ ಉಳಿದುಕೊಂಡಿತ್ತು. 2019ರ ಚುನಾವಣೆಯಲ್ಲಿ 14 ಜನ ಕಣದಲ್ಲಿದ್ದರು.

1952ರಿಂದ 1971ರ ತನಕದ ಮೊದಲ ಐದು ಚುನಾವಣೆಗಳಲ್ಲಿ ಇಬ್ಬರು ಅಭ್ಯರ್ಥಿಗಳಷ್ಟೇ ಕಣದಲ್ಲಿದ್ದರು. 1977ರಲ್ಲಿ ಸಿದ್ರಾಮೇಶ್ವರ ಸ್ವಾಮಿ, ಸಂಗಣ್ಣ ಅಗಡಿ ಮತ್ತು ಕೆ.ಆರ್‌. ತಿಪ್ಪಣ್ಣ ಸ್ಪರ್ಧೆ ಮಾಡಿದ್ದರು. 1980ರಲ್ಲಿ ಎಚ್‌.ಜಿ. ರಾಮುಲು, ಎಚ್‌.ಆರ್‌. ಬಸವರಾಜು ರಾಷ್ಟ್ರೀಯ ಪಕ್ಷಗಳಿಂದ ಸ್ಪರ್ಧೆ ಮಾಡಿದ್ದರೆ, ಭೀಮಪ್ಪ ಕನಕಪ್ಪ ಸೇರಿದಂತೆ ಮತ್ತಿಬ್ಬರು ಪಕ್ಷೇತರ ಅಭ್ಯರ್ಥಿಗಳಾಗಿದ್ದರು. 1984ರಲ್ಲಿ 11 ಜನ, 1989ರಲ್ಲಿ ಮೂವರು, 1991ರಲ್ಲಿ 14 ಜನ, 1996ರಲ್ಲಿ 12 ಅಭ್ಯರ್ಥಿಗಳು, 1999ರಲ್ಲಿ ಮೂವರು ಮತ್ತು 2004ರಲ್ಲಿ ಆರು ಜನ ಚುನಾವಣಾ ಸವಾಲು ಎದುರಿಸಿದ್ದರು. 

ಈ ಎಲ್ಲಾ ಚುನಾವಣೆಗಳಿಗಿಂತಲೂ 2009ರ ಲೋಕಸಭಾ ಅಖಾಡದಲ್ಲಿ 18 ಜನ ಸ್ಪರ್ಧಿಗಳಿದ್ದರು. ಇಕ್ಬಾಲ್‌ ಅನ್ಸಾರಿ (ಜೆಡಿಎಸ್‌), ಬಸವರಾಜ ರಾಯರಡ್ಡಿ (ಕಾಂಗ್ರೆಸ್‌), ಶಿವಪುತ್ರಪ್ಪ ಗುಮಗೇರಾ (ಬಿಎಸ್‌ಪಿ), ಶಿವರಾಮಗೌಡ (ಬಿಜೆಪಿ), ಜಾಕೀರ್‌ (ಎಲ್‌ಜೆಪಿ), ಬಸವರಾಜ ಕರಡಿ ವಡ್ಡರಹಟ್ಟಿ (ಜೆಡಿಯು), ಭಾರದ್ವಾಜ (ಸಿಪಿಐಎಂಎಲ್‌), ಪಕ್ಷೇತರರಾಗಿ ಜೆ. ಈಶ್ವರಪ್ಪ, ಉಪ್ಪಾರ ಹನುಮಂತಪ್ಪ, ಗೌಸಿಯಾ ಬೇಗಂ, ಚಕ್ರವರ್ತಿ ನಾಯಕ್‌ ಟಿ., ಚಂದ್ರಶೇಖರ, ನಜೀರ್‌ ಹುಸೇನ್‌, ಡಿ.ಎಚ್‌. ಪೂಜಾರ, ಮಾರೆಮ್ಮ ಯಂಕಪ್ಪ, ಶರಬಯ್ಯ, ಶಿವಕುಮಾರ ನವಲಿ ಸಿದ್ಧಪ್ಪ ತೋಂಟಾಪುರ ಹಾಗು ಹಂಡಿ ರಫೀಕಸಾಬ್‌ ಚುನಾವಣೆ ಎದುರಿಸಿದ್ದರು. ನಂತರದ 2014ರ ಚುನಾವಣೆಯಲ್ಲಿ 16 ಅಭ್ಯರ್ಥಿಗಳು ಕಣದಲ್ಲಿದ್ದರು.

ಸಿಬ್ಬಂದಿಗೆ ಹೊರೆ: ಒಂದು ಮತಯಂತ್ರದಲ್ಲಿ ಒಟ್ಟು 16 ಅಭ್ಯರ್ಥಿಗಳ ಪಟ್ಟಿ ಮಾತ್ರ ಅಳವಡಿಸಲಾಗಿರುತ್ತದೆ. ಈ ಬಾರಿ 19 ಜನ ಅಭ್ಯರ್ಥಿಗಳು ಮತ್ತು ನೋಟಾ (ಮೇಲಿನವರು ಯಾರೂ ಅಲ್ಲ) 20 ಸಾಲುಗಳು ಇರಲಿವೆ. ಆದ್ದರಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಯಾದ ಸಿಬ್ಬಂದಿ ಈ ಬಾರಿ ಎರಡು ಮತಯಂತ್ರಗಳನ್ನು ತೆಗೆದುಕೊಂಡು ಹೋಗಬೇಕಾದ ‘ಹೊರೆ’ ಇದೆ.

’ಒಂದು ಮತಯಂತ್ರವನ್ನು ಸೂಸೂತ್ರವಾಗಿ ನಿರ್ವಹಣೆ ಮಾಡುವುದೇ ದೊಡ್ಡ ಸವಾಲು. ಅಂಥದ್ದರಲ್ಲಿ ಈ ಬಾರಿ ಎರಡು ಮತಯಂತ್ರಗಳನ್ನು ಹೊತ್ತು ಬಿರುಬಿಸಿಲಿನಲ್ಲಿ ಹೋಗಬೇಕು. ಹೀಗಾಗಿ ಹಿಂದಿನ ಚುನಾವಣೆಗಳಿಗಿಂತಲೂ 2024ರ ಚುನಾವಣೆ ನಿರ್ವಹಣೆ ನಿಜಕ್ಕೂ ಸವಾಲಿನ ಕೆಲಸವಾಗಿದೆ. ಇದು ರಾಜಕಾರಣಿಗಳಿಗಷ್ಟೇ ಅಲ್ಲ, ಅಧಿಕಾರಿಗಳಿಗೂ ಅಗ್ನಿಪರೀಕ್ಷೆ’ ಎಂದು ಚುನಾವಣಾ ಕೆಲಸಕ್ಕೆ ನಿಯೋಜನೆಯಾಗಿರುವ ಸಿಬ್ಬಂದಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT