ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಹಾ ಚಿತ್ರಗಳಿಗೆ ರಕ್ಷಣೆ ಕೊರತೆ: ಐತಿಹಾಸಿಕ ಸ್ಮಾರಕಗಳತ್ತ ಕಾಳಜಿ ಕೊರತೆ

Last Updated 4 ಜುಲೈ 2021, 7:06 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಪ್ರಾಗೈತಿಸಿಕ ಇತಿಹಾಸದಿಂದ ಹಿಡಿದು ಆಧುನಿಕ ಇತಿಹಾಸದವರೆಗೆ ಎಲ್ಲ ಮಜಲುಗಳಲ್ಲಿ ತನ್ನದೇ ಆದ ವಿಶೇಷತೆ ಹೊಂದಿದ್ದರೂ ಸಂಬಂಧಿಸಿದ ಇಲಾಖೆಗಳ ನಿರ್ಲಕ್ಷ್ಯದಿಂದ ಹಾಳಾಗುತ್ತಿರುವುದು ಇತಿಹಾಸ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ.

ಜೈನ, ಬೌದ್ಧ, ಶೈವ, ಮುಸ್ಲಿಂ ಸೇರಿದಂತೆ ವಿವಿಧ ಶೈಲಿಯ ಸ್ಮಾರಕಗಳು ಅದರಲ್ಲಿಯೂ ವಿಶೇಷವಾಗಿ ಆದಿ ಮಾನವನ ಆವಾಸ ಸ್ಥಾನಗಳಾದ ಗವಿ, ಗುಡ್ಡ, ಸಮಾಧಿ, ರೇಖಾಚಿತ್ರಗಳು ಅವಸಾನದತ್ತ ಸಾಗಿರುವುದು ಪ್ರಾಚ್ಯವಸ್ತು ಇಲಾಖೆ ನಿರಾಸಕ್ತಿಯ ಕಾರಣದಿಂದ ಭವ್ಯ ಇತಿಹಾಸ ಪರಂಪರೆ ಉಳಿಸುವಲ್ಲಿ ಹಿಂದೆ ಬಿದ್ದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ನಗರದ ಕೋಟೆ, ಕೊತ್ತಲು, ನಿಜಾಮರ ಕಾಲದ ಅಗಸಿ, ಕಮಾನುಗಳು, ಐತಿಹಾಸಿಕ, ಪೌರಾಣಿಕ, ಧಾರ್ಮಿಕ ಮಹತ್ವ ಹೊಂದಿದ ಮಳೆಮಲ್ಲೇಶ್ವರ ಸೇರಿದಂತೆ ಅನೇಕ ಸ್ಮಾಕರಗಳು ಆತಂಕದ ಸ್ಥಿತಿಯಲ್ಲಿ ಇವೆ. ನಗರದಲ್ಲಿ ನಿಜಾಮರು ನಿರ್ಮಿಸಿದ್ದ ಸ್ವಾಗತ ಕಮಾನುಗಳು ಅಭಿವೃದ್ಧಿ ಹೆಸರಿನಲ್ಲಿ ತೆರವುಗೊಳಿಸಲಾಗಿದ್ದರೂ ಅವುಗಳನ್ನು ಪುನರ್ ನಿರ್ಮಾಣ ಮಾಡುವ ಗೋಜಿಗೆ ಹೋಗದೇ ಇರುವುದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ.

ಅಲ್ಲದೆ ಕೊಪ್ಪಳ, ಬಹದ್ದೂರ ಬಂಡಿ, ಇರಕಲ್ಲಗಡಾ, ಆನೆಗೊಂದಿ, ಕಮ್ಮಟದುರ್ಗ ಸೇರಿದಂತೆ ಅನೇಕ ಕೋಟೆಗಳು ಅವಸಾನದ ಅಂಚಿನಲ್ಲಿವೆ. ಕೆಲವು ಕಡೆ ಅತಿಕ್ರಮ ಮಾಡಿಕೊಂಡಿದ್ದರೆ, ಇನ್ನೂ ಕೆಲವು ಕಾಲನ ದಾಳಿಗೆ ತುತ್ತಾಗಿ ಹಾಳಾಗುತ್ತಿವೆ. ಕೇಂದ್ರ ಮತ್ತು ರಾಜ್ಯ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ವೈಜ್ಞಾನಿಕ ಅಧ್ಯಯನ ಮಾಡಿದರೆ 10ಕ್ಕೂ ಅಂತರರಾಷ್ಟ್ರೀಯ ಮಟ್ಟದ ಸ್ಮಾರಕಗಳು, 20ಕ್ಕೂ ಹೆಚ್ಚು ರಾಷ್ಟ್ರೀಯ ಸ್ಮಾರಕಗಳು, 150 ರಾಜ್ಯ ಸ್ಮಾರಕಗಳ ನಿಯಮಾನುಸಾರ ಪಟ್ಟಿಯಲ್ಲಿ ಸೇರಬೇಕಾಗಿದೆ ಎಂಬುವುದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ.

ಈ ಕುರಿತು ದಾನ, ದತ್ತಿ, ಬಲಿ, ಶೌರ್ಯದ ಶಾಸನಗಳು, ತಾಮ್ರಪತ್ರಗಳು, ತಾಡೋಲೆಗಳು, ಬಸೀದಿಗಳು, ಐತಿಹಾಸಿಕ ಮತ್ತು ಸಾಹಿತ್ಯಿಕ ಸಾಮಗ್ರಿಗಳು ಇದ್ದರೂ ಅವುಗಳ ಸಮಗ್ರ ಅಧ್ಯಯನ ಕೊರತೆಯಿಂದ ಹೈದರಾಬಾದ್‌ ಕರ್ನಾಟಕ ಹಿಂದುಳಿದ ಭಾಗ ಎಂಬ ಹಣೆಪಟ್ಟಿಯಂತೆ ಇಲ್ಲಿಯೂ ಹಿಂದುಳಿದಿದೆ ಎಂದು ಹಿರಿಯ ಸಾಹಿತಿ, ಸಂಶೋಧಕ ಎಚ್‌.ಎಸ್‌.ಪಾಟೀಲ ವಿಷಾದದಿಂದ ಹೇಳುತ್ತಾರೆ.

ಗುಹಾಚಿತ್ರಗಳು: ವಿಶೇಷವಾಗಿ ಕೊಪ್ಪಳ ಮತ್ತು ಗಂಗಾವತಿ, ಕನಕಗಿರಿ ತಾಲ್ಲೂಕಿನ ವಿವಿಧ ಗುಡ್ಡಗಳಲ್ಲಿ ಕಂಡು ಬರುತ್ತಿವೆ. ಆದರೆ ಚಿತ್ರಗಳು ಮಾಸುತ್ತಿದ್ದು, ಅವುಗಳು ಅಧ್ಯಯನ ಮಾಡಲು ಯೋಗ್ಯವಾಗದಷ್ಟು ಮಸಕಾಗಿವೆ. ಗುನ್ನಳ್ಳಿ, ಕೊಪ್ಪಳ, ಆನೆಗೊಂದಿ, ಬೆಣಕಲ್‌ ಸೇರಿದಂತೆ ವಿವಿಧ ಕಡೆ ಆದಿಮಾನವರ ಗುಹಾಚಿತ್ರಗಳು ತಮ್ಮ ಪ್ರಾಚೀನತೆಯನ್ನು ಸಾರುತ್ತವೆ. ಅಲ್ಲದೆ ಅಶೋಕನ ಶಾಸನಗಳಾದ ಗವಿಮಠ ಮತ್ತು ಪಾಲ್ಕಿಗುಂಡು ಶಾಸನಗಳು ಸುತ್ತಮುತ್ತಲಿನ ಗಣಿಗಾರಿಕೆಗೆ ನಲುಗಿ ಹೋಗಿವೆ.

ಬಾವಿಗಳು ಕಸ ಸಂಗ್ರಹಣಾಗಾ ರಗಳಾಗಿದ್ದು, ಅವುಗಳನ್ನು ರಕ್ಷಣೆ ಮಾಡುವ ಗೋಜಿಗೆ ಹೋಗಿಲ್ಲ. ಕುಕನೂರಿನ ನವಲಿಂಗೇಶ್ವರ, ಪುರ ಗ್ರಾಮಗಳು ಅಧ್ಯಯನ ಯೋಗ್ಯವಾಗಿದ್ದರೂ ಆ ಹಿನ್ನೆಲೆಯಲ್ಲಿ ಯಾವುದೇ ಪ್ರಯತ್ನ ನಡೆಯುತ್ತಿಲ್ಲ. ಇತಿಹಾಸ ಕಮ್ಮಟ, ರಕ್ಷಣೆ, ಬೆಂಬಲ, ಜಾಗೃತಿ ಕುರಿತು ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದಲೇ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬುವುದು ಈ ಭಾಗದ ಇತಿಹಾಸ ತಜ್ಞರ ಅಶಯವಾಗಿದೆ.

*ಮಳೆಮಲ್ಲೇಶ್ವರ ಪ್ರಾಗೈತಿಸಿಕ ನೆಲೆಯಿಂದ ಇಂದಿನವರೆಗೆ ಪ್ರಸಿದ್ಧಿಯನ್ನು ಪಡೆದಿದೆ. ಅದರ ಸಮಗ್ರ ರಕ್ಷಣೆಗೆ ಜಿಲ್ಲಾಡಳಿತದ ಹಂತದಿಂದಲೇ ಕೆಲಸವಾಗಬೇಕು. ಸಂಶೋಧನೆಗೆ ಸರ್ಕಾರ ಸಹಕಾರ ನೀಡಬೇಕು

ಪ್ರೊ.ಎಚ್‌.ಎಸ್‌.ಪಾಟೀಲ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT