ಶನಿವಾರ, ಜೂಲೈ 11, 2020
28 °C
ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸುವ ಸಾಮರ್ಥ್ಯದ ಜಲಾಶಯ

ತಾವರಗೇರಾ | ಸೊರಗುತ್ತಿರುವ ಕನಕನಾಲಾ ಜಲಾಶಯ

ಶರಣಬಸವ Updated:

ಅಕ್ಷರ ಗಾತ್ರ : | |

Prajavani

ತಾವರಗೇರಾ (ಕೊಪ್ಪಳ): ಜಿಲ್ಲೆಯ ಗಡಿಭಾಗದಲ್ಲಿರುವ ಕನಕನಾಲಾ ಜಲಾಶಯವು ನಿರ್ವಹಣೆ ಕೊರತೆಯಿಂದ ನೀರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೂಳು ತುಂಬಿಕೊಂಡು ಸೊರಗುತ್ತಿದೆ.

ಈ ಜಲಾಶಯ ವ್ಯವಸ್ಥಿತವಾಗಿ ನಿರ್ವಹಣೆಗೊಂಡರೆ ಕುಷ್ಟಗಿ ತಾಲೂಕಿಗಿಂತ ಸಿಂಧನೂರ ತಾಲೂಕಿನ ನಾನಾ ಗ್ರಾಮಗಳ ಸಾವಿರಾರು ಎಕರೆ ಪ್ರದೇಶದ ಕೃಷಿ ಭೂಮಿಯು ನಿರಾವರಿ ಪ್ರದೇಶವಾಗಿ ಮಾರ್ಪಾಡಗಲಿದೆ.

ಸಮೀಪದ ಕಿಲ್ಲಾರಹಟ್ಟಿ ಗ್ರಾಮದ ಬಳಿ ಇರುವ ಈ ಜಲಾಶಯದ ಕಾಯಕಲ್ಪಕ್ಕಾಗಿ ನೀರಿನಂತೆ ಹಣ ಖುರ್ಚು ಮಾಡಿದ್ದರೂ ಸಹ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಈ ಬಗ್ಗೆ ಹಲವು ಭಾರಿ ಹೋರಾಟ ಮಾಡಿದರೂ ಸಹ ಪರಿಹಾರ ದೊರಕಿಲ್ಲ ಎಂದು ಈ ಭಾಗದ ರೈತರು ಆರೋಪಿಸಿದ್ದಾರೆ.

252 ಹೇಕ್ಟರ್ ಪ್ರದೇಶದ ವಿಸ್ತೀರ್ಣದಲ್ಲಿ, 15,900 ಮೀಟರ್ ಉದ್ದದ 0.225 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಈ ಅಣೆಕಟ್ಟು, 189, 44 ಚದರ ಕೀಮೀ ವ್ಯಾಪ್ತಿಯ 5,100 ಎಕರೆ ಪ್ರದೇಶಕ್ಕೆ ನೀರುಣಿಸುವ ಉದ್ದೇಶ ಹೊಂದಿದೆ. 

ತುರ್ತಾಗಿ ಈ ಜಲಾಶಯದ ಆಧುನೀಕರಣಕ್ಕೆ ಕ್ರಮಕೈಗೊಳ್ಳಬೇಕಿದೆ ಎಂದು ಈ ಭಾಗದ ರೈತರು ಆಗ್ರಹಿಸುತ್ತಿದ್ದಾರೆ.

ಜಲಾಶಯದ ಆಧುನೀಕರಣಕ್ಕೆ ಆಗ್ರಹಿಸಿ ಸಿಂಧನೂರ ತಾಲೂಕಿನ ರೈತರು ಹಲವು ಬಾರಿ ನೀರಾವರಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಆದರೆ ಯಾವುದೇ ಪ್ರಯೋಜನೆ ಆಗಿಲ್ಲ.

ಬೇಡಿಕೆಗಳು: ಕಿಲ್ಲಾರಹಟ್ಟಿಯ ಕನಕನಾಲಾ ಜಲಾಶಯನೀರಿನ ಸಂಗ್ರಹ ಸಾಮರ್ಥ್ಯವನ್ನು 0.225 ಟಿಎಂಸಿಯಿಂದ 0.227 ಟಿಎಂಸಿಗೆ ಹೆಚ್ಚಿಸಬೇಕು. ನೀರು ಹರಿವು ಕಾಲುವೆ (ಅಕ್ವಾಡಕ್ಟ್) ಆಧುನಿಕರಣಗೋಳಿಸಬೇಕು. ಕುಷ್ಟಗಿ ತಾಲೂಕಿನ ಆರ್ಯಬೋಗಾಪೂರದಿಂದ ಜಲಾಶಯದ ವರೆಗೆ ಕಾಲುವೆ ನಿರ್ಮಿಸಬೇಕು. ಕಾಲುವೆಗಳಲ್ಲಿ ನೀರು ಸೋರಿಕೆಯನ್ನು ಆಗುವದನ್ನು ತಡೆಗಟ್ಟಬೇಕು ಎಂಬದು ಈ ಭಾಗದ ಸಾವಿರಾರು ರೈತರ ಬೇಡಿಕೆಗಳಾಗಿವೆ.

ಕನಕನಾಲಾ ಜಲಾಶಯದ ಬಗ್ಗೆ ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಬೆಂಗಳೂರ ಮೂಲದ ಕಂಪೆನಿ  ಸಮೀಕ್ಷೆ ನಡೆಸಿ ಅಂದಾಜು ₹ 94.54 ಕೋಟಿ ವೆಚ್ಚದ ಯೋಜನೆ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಿತ್ತು. ಆದರೆ ಆ ಬಳಿಕೆ ಮಹತ್ವದ ಬೆಳವಣಿಗೆಗಳು ಆಗಲಿಲ್ಲ ಎಂದು ರೈತರು ಬೇಸರದಿಂದ ಅಸಮಧಾನ ವ್ಯಕ್ತಪಡಿಸುತ್ತಾರೆ.

ಜಲಾಶಯದ ಮಡಿಲಿನ ಪ್ರದೇಶವು ಸದಾ ಹಚ್ಚಹಸಿರಿನಿಂದ ಕೂಡಿರುತ್ತದೆ. ಆದರೆ, ಈ ಭಾಗವನ್ನು ಪ್ರವಾಸೋಧ್ಯಮ ಕೇಂದ್ರವಾಗಿ ಅಭಿವೃದ್ಧಿ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಸ್ಥಳೀಯರು ದೂರುತ್ತಾರೆ.    

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು