ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಪೂರ್ಣ ಬಳಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಸೂಚನೆ

ಪ್ರಗತಿ ಪರಿಶೀಲನಾ ಸಭೆ
Last Updated 4 ಜನವರಿ 2022, 13:02 IST
ಅಕ್ಷರ ಗಾತ್ರ

ಕೊಪ್ಪಳ: ಸರ್ಕಾರ ನೀಡಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆಯಾಗಬೇಕು ಮತ್ತು ಹಿಂದಿನ ವರ್ಷದ ಯಾವುದೇ ಕೆಲಸ ಮತ್ತು ಕಾಮಗಾರಿ ಉಳಿಯದಂತೆ ಮುಂದಿನ ಮೂರು ತಿಂಗಳ ಒಳಗಾಗಿ ಮುಗಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ ಹೇಳಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ನಡೆದ 2021-22ನೇ ಸಾಲಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ನಮ್ಮ ಕೆಲಸವನ್ನು ಜನ ಸ್ನೆಹಿಯಾಗಿ ಮಾಡಿದಾಗ ಇಲಾಖೆಗೆ ಒಳ್ಳೆಯ ಹೆಸರು ಬರುತ್ತದೆ. ಹಾಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ಜನರ ಪ್ರೀತಿಗೆ ಅಧಿಕಾರಿಗಳು ಪಾತ್ರರಾಗಬೇಕು’ ಎಂದು ಹೇಳಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಸಮಸ್ಯೆಗಳು ಉಂಟಾಗದಂತೆ ಈ ಕೋವಿಡ್ ಸಂದರ್ಭದಲ್ಲಿ ನಾವು ನೋಡಿಕೊಳ್ಳಬೇಕಾಗಿದ್ದು ಜಿಲ್ಲೆಯ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್ ವೈದ್ಯರ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಚಿಕಿತ್ಸೆ ಸರಿಯಾಗಿ ನೀಡುತ್ತಿಲ್ಲ ಎಂದು ದೂರುಗಳು ಕೇಳಿ ಬರುತ್ತಿದ್ದು ಮುಂದೆ ಹಾಗಾಗಬಾರದು ಎಂದರು.

ಕೃಷಿ ಇಲಾಖೆಯಿಂದ ರೈತರಿಗೆ ಸರಿಯಾದ ಸೌಲಭ್ಯಗಳನ್ನು ಸಿಗಬೇಕಾದರೆ ಸಹಕಾರ ಸಂಘಗಳಿಗೆ ಬೀಜ, ಗೊಬ್ಬರವನ್ನು ನೀಡಬೇಕು. ಅದನ್ನು ಬಿಟ್ಟು ನೀವು ಖಾಸಗಿಯವರಿಗೆ ನೀಡಿದರೆ ಹೇಗೆ ಮತ್ತು ಜಿಲ್ಲೆಗೆ ಬೇಕಾಗುವ ಗೊಬ್ಬರ ಮತ್ತು ಅದರ ಸ್ಟಾಕ್ ಮಾಹಿತಿ ತಮಲ್ಲಿ ಸರಿಯಾಗಿ ಇರಬೇಕು. ಹೆಚ್ಚಿನ ಗೊಬ್ಬರ ಬೇಕಾದರೆ ರೈತರ ಅಗತ್ಯಕ್ಕೆ ತಕ್ಕಂತೆ ಅವರಿಗೆ ಒದಗಿಸುವ ಕೆಲಸ ಮಾಡಬೇಕೆಂದು ಕೃಷಿ ಇಲಾಖೆಯ ಜಂಟಿ ನಿರ್ದೆಶಕರಿಗೆ ಸೂಚಿಸಿದರು.

ಸಂಸದ ಕರಡಿ ಸಂಗಣ್ಣ ಮಾತನಾಡಿ, ಜಿಲ್ಲೆಯಲ್ಲಿ ಎಷ್ಟುಆಮ್ಲಜನಕ ಘಟಕಗಳು ಜಿಲ್ಲೆಯ ಆಸ್ಪತ್ರೆಗಳಲ್ಲಿವೆ. ಅವುಗಳ ಕಾರ್ಯನಿರ್ವಹಣೆಯ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ತೋಟಗಾರಿಕೆ ಬೆಳೆಗಳಿಗೆ ಪ್ರಾಣಿಗಳು ಹಾಳುಮಾಡಿದ್ದು ಅವುಗಳಿಗೆ ಇಲ್ಲಿಯವರೆಗೆ ಪರಿಹಾರ ನೀಡಿಲ್ಲ ಮತ್ತು ಚಿಕ್ಕು ಮತ್ತು ಕಲ್ಲಂಗಡಿ ಹಣ್ಣುಗಳಿಗೆ ಪರಿಹಾರ ನೀಡುವುದಿಲ್ಲ ಎಂದರು.

ಆತ್ಮ ನಿರ್ಭರ ಯೋಜನೆ ಅಡಿ ಜಿಲ್ಲೆಯಲ್ಲಿ 32 ಜನ ಫಲಾನುಭವಿಗಳಿಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳು ಮಾಂಸ ಹಾಗೂ ಮಾಂಸದ ಉತ್ಪನ್ನಗಳು ಕುರಿತು ಅವರಿಗೆ ತರಬೇತಿ ಆಯ್ಕೆಮಾಡಿದ್ದರೂ ಅವರಿಗೆ ಯಾವುದೇ ಸಬ್ಸಿಡಿ ಸಿಗದಿರುವುದರಿಂದ ಅವರು ಮುಂದೆ ಬರುತ್ತಿಲ್ಲ. ಜಾನುವಾರುಗಳಿಗೆ ಕಾಲು ಬಾಯಿ ರೋಗದ ಲಸಿಕೆ ಹಾಕಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೋವಿಡ್‌ನಿಂದ ನಿಧನರಾದವರಿಗೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಎಷ್ಟು ಪರಿಹಾರ ನೀಡಲಾಗಿದೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಪ್ರಶ್ನಿಸಿದರು.

ಆಗ ಪ್ರತಿಕ್ರಿಯಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಅವರು, ‘ಜಿಲ್ಲೆಯಲ್ಲಿ 527 ಜನರು ಕೋವಿಡ್‌ನಿಂದ ಮೃತಪಟ್ಟಿದ್ದು 379 ಕುಟುಂಬಗಳಿಗೆ ಪರಿಹಾರ ನೀಡಲಾಗಿದ್ದು ಇನ್ನೂ 63 ಬಾಕಿ ಇವೆ. ಇದರ ಹೊರತಾಗಿ ಆಯಾ ತಾಲ್ಲೂಕಿನ ತಹಶೀಲ್ದಾರರು ಪರಿಹಾರ ವಿತರಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿದರು.

ಸಭೆಯಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ, ಬಸವರಾಜ ಧಢೇಸೂಗೂರು, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್,ಜಿಪಂ ಸಿಇಒಬಿ.ಫೌಜಿಯಾ ತರನ್ನುಮ್,ಎಸ್‌ಪಿ ಟಿ.ಶ್ರೀಧರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜುಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT