ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಕರಡಿ ದಾಳಿ, ಹೆಜ್ಜೆಗುರುತು ಪತ್ತೆಯಾಗಿಲ್ಲ ಎಂದ ಅಧಿಕಾರಿಗಳು

Published 6 ಆಗಸ್ಟ್ 2023, 13:51 IST
Last Updated 6 ಆಗಸ್ಟ್ 2023, 13:51 IST
ಅಕ್ಷರ ಗಾತ್ರ

ಕೊಪ್ಪಳ: ತಾಲ್ಲೂಕಿನ ಬೂದಗುಂಪಾ ಗ್ರಾಮದ ಸಮೀಪ ರೈತ ಹನುಮಂತ ಕಡಿಗೆಟ್ಟಿ (55) ಎಂಬುವರು ಮೃತಪಟ್ಟಿದ್ದು ’ಕರಡಿ ದಾಳಿಯಿಂದಲೇ ನನ್ನ ತಂದೆಯ ಸಾವಾಗಿದೆ’ ಎಂದು ಅವರ ಮಗ ವೀರೇಶ ಆರೋಪಿಸಿದ್ದಾರೆ. ಆದರೆ, ಘಟನೆ ನಡೆದ ಸ್ಥಳದಲ್ಲಿ ಕರಡಿ ಹೆಜ್ಜೆಗುರುತು ಪ‍ತ್ತೆಯಾಗಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ವೀರೇಶ ‘ಭಾನುವಾರ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ನನ್ನ ತಂದೆ ಹನುಮಂತ ಹೊಲದಲ್ಲಿರುವ ನೀರಿನ ಮೋಟರ್‌ ಆನ್‌ ಮಾಡಲು ಹೋಗಿದ್ದರು. ಅಲ್ಲಿ ಬೆಳೆಯಲಾಗಿದ್ದ ಮೆಕ್ಕೆಜೋಳ ನೋಡಿಕೊಂಡು ಬರಲು ಹೋದಾಗ ಕರಡಿ ಮೆಕ್ಕೆಜೋಳವನ್ನು ತಿನ್ನುತ್ತಿತ್ತು. ಇದನ್ನು ನೋಡಿ ಓಡಿಸಲು ಹೋದಾಗ ಕರಡಿ ತನ್ನ ಮರಿಗಳ ಜೊತೆ ತಂದೆಯನ್ನು ಓಡಿಸಿಕೊಂಡು ಬಂದಿದೆ. ಆಗ ಬಹಳಷ್ಟು ಎತ್ತದಲ್ಲಿದ್ದ ಬದು ದಾಟಿ ಬರುವಾಗ ಬಿದ್ದು ತಂದೆ ಮೃತಪಟ್ಟಿದ್ದಾರೆ. ಬಳಿಕ ಕರಡಿ ಮೃತದೇಹದ ಮೇಲೆ ತುಳಿದುಕೊಂಡು ಹೋಗಿದೆ’ ಎಂದು ವಿವರಿಸಿದರು.

‘ಹೊಲದಲ್ಲಿ ಕರಡಿ ಹೆಜ್ಜೆಗುರುತು ಕಾಣುತ್ತಿವೆ. ಮೆಕ್ಕೆಜೋಳವನ್ನು ಹಾಳು ಮಾಡಿವೆ’ ಎಂದು ಹೇಳಿದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ. ಭಾನುವಾರವೇ ಕುಟುಂಬದವರು ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಡೆಪ್ಯೂಟಿ ಆರ್‌ಎಫ್‌ಒ ಸುನೀಲ್‌ಕುಮಾರ್‌ ಚವ್ಹಾಣ ‘ಕರಡಿ ದಾಳಿ ಮಾಡಿದೆ ಎಂದು ಯಾರೂ ದೂರು ಕೊಟ್ಟಿಲ್ಲ. ನಾನೂ ಖುದ್ದು ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಲ್ಲಿ ಕರಡಿ ಹೆಜ್ಜೆಗುರುತು ಪತ್ತೆಯಾಗಿಲ್ಲ. ಕಾದುಹಂದಿಯ ಗುರುತು ಕಾಣುತ್ತಿದೆ’ ಎಂದರು.

ತನಿಖೆಯಾಗಲಿ: ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಿಧಾನಪರಿಷತ್‌ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ’ಕರಡಿ ದಾಳಿಯಿಂದಾಗಿಯೇ ವ್ಯಕ್ತಿ ಮೃತಪಟ್ಟಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ.

‘ಅಧಿಕಾರಿಗಳು ರೈತರ ವಿಷಯದಲ್ಲಿ ಅಮಾನವೀಯವಾಗಿ ನಡೆದುಕೊಳ್ಳಬಾರದು. ಬುದಗುಂಪಾ ಭಾಗದಲ್ಲಿ ಕರಡಿ ಹಾವಳಿ ವ್ಯಾಪಕವಾಗಿದೆ. ಈ ಕುರಿತು ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಅವರಿಗೆ ದೂರು ನೀಡಲಾಗುವುದು. ಹನುಮಂತ ಅವರನ್ನು ಕರಡಿ ಓಡಿಸಿಕೊಂಡು ಬಂದಾಗ ನಾಯಿಗಳು ಬೆನ್ನಟ್ಟಿದ್ದರಿಂದ ಕರಡಿಗಳು ವಾಪಸ್‌ ಹೋದವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT