ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಸರಿಯಾಗಿ ಒಂದು ವಾರದ ಹಿಂದೆ ಕೊಚ್ಚಿ ಹೋಗಿದ್ದ 19ನೇ ಗೇಟ್ ತನ್ನ ಸ್ಥಾನದಿಂದ ಸ್ವಲ್ಪ ಮುಂದೆ ಹೋಗಿ ಬಿದ್ದಿದ್ದು, ಅದರ ಭಾಗಗಳು ನೀರು ನಿಲುಗಡೆಯಾದ ಬಳಿಕ ಕಾಣಿಸಿಕೊಂಡವು.
ಜಲಾಶಯದಿಂದ ನದಿಗೆ ನೀರು ಹರಿಬಿಡುವ ಜಾಗದಿಂದ ಅಂದಾಜು 50ರಿಂದ 70 ಮೀಟರ್ ದೂರದ ಒಳಗೆ ಗೇಟ್ ಬಿದ್ದಿದೆ. ಜಲಾಶಯಕ್ಕೆ ತಾತ್ಕಾಲಿಕವಾಗಿ ನೂತನ ಗೇಟ್ ಅಳವಡಿಕೆ ಕಾರ್ಯ ಪೂರ್ಣಗೊಂಡ ಬಳಿಕ ಎಲ್ಲ 33 ಗೇಟ್‌ಗಳಿಂದ ನೀರು ಹೊರ ಬಿಡುವುದನ್ನು ನಿಲ್ಲಿಸಲಾಯಿತು. ಆಗ ಕೆಲ ಹೊತ್ತಿನಲ್ಲಿಯೇ ಕೊಚ್ಚಿ ಹೋಗಿದ್ದ ಗೇಟ್‌ನ ಭಾಗಗಳು ಕಾಣಿಸಿಕೊಂಡವು.
ಹಳೆಯ ಗೇಟ್ ಕಾಣಿಸುತ್ತಿದ್ದಂತೆಯೇ ಅಧಿಕಾರಿಗಳು, ಮಾಧ್ಯಮದವರು ಹಾಗೂ ಅಲ್ಲಿದ್ದ ಸಿಬ್ಬಂದಿ ಮುಗಿಬಿದ್ದು ಫೋಟೊ ತೆಗೆದುಕೊಳ್ಳುತ್ತಿದ್ದ ಚಿತ್ರಣ ಕಂಡುಬಂದಿತು. ಆ. 10ರಂದು ರಾತ್ರಿ 11 ಗಂಟೆ ಸುಮಾರಿಗೆ ಈ ಗೇಟ್ ಕೊಚ್ಚಿ ಹೋಗಿ ಅವಘಡ ಸಂಭವಿಸಿತ್ತು.