ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲಾವಸ್ಥೆಯ ಶಾಲೆಗೆ ಹಳೆಯ ವಿದ್ಯಾರ್ಥಿಗಳ ಕಾಯಕಲ್ಪ

ಹಳೆಯ ವಿದ್ಯಾರ್ಥಿಗಳೇ ಮೇಸ್ತ್ರಿ, ಶಾಲಾ ಸಿಬ್ಬಂದಿ ಸಹಾಯಕರು
Last Updated 18 ನವೆಂಬರ್ 2019, 9:55 IST
ಅಕ್ಷರ ಗಾತ್ರ

ಕೊಪ್ಪಳ: ಶಿಥಿಲಾವಸ್ಥೆಯಲ್ಲಿರುವ ನಗರದ ಸರ್ಕಾರಿ ಕೇಂದ್ರ ಪ್ರಾಥಮಿಕ ಶಾಲೆಯ ಕಟ್ಟಡದ ದುರಸ್ತಿ ಕೈಗೊಳ್ಳದ ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ತಾವೇ ಕಟ್ಟಡ ದುರಸ್ತಿಗೆ ಮುಂದಾಗಿದ್ದಾರೆ.

ಕಟ್ಟಡ ಶಿಥಿಲಾವಸ್ಥೆಗೆ ತಲುಪಿರುವ ಕುರಿತು ಹಲವು ಬಾರಿ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಅಕ್ಷರಸ್ಥರನ್ನಾಗಿ ಮಾಡಿದ ಶಾಲೆಯ ಕಾಯಕಲ್ಪಕ್ಕೆ ಮುಂದಾಗಿದ್ದಾರೆ.

236 ಹಳೆಯ ವಿದ್ಯಾರ್ಥಿಗಳು ಸೇರಿ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚನೆ ಮಾಡಿಕೊಂಡಿದ್ದಾರೆ. ಅಲ್ಲದೇ ರಾಜ್ಯದ ವಿವಿಧ ನಗರ ಹಾಗೂ ಇತರ ರಾಜ್ಯಗಳಲ್ಲಿ ನೆಲೆಸಿರುವ ಹಳೆ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಕಾರ್ಯ ನಿರಂತರವಾಗಿ ನಡೆದಿದ್ದು, ಶಿಕ್ಷಕರ ಜತೆಗೂಡಿ ಪ್ರತಿ ಶನಿವಾರ ಸಭೆ ನಡೆಸಿ ಮಾರನೇ ದಿನ ಭಾನುವಾರ ಶಾಲಾ ಅಭಿವೃದ್ಧಿ ಕೆಲಸದಲ್ಲಿ ತೊಡಗಿಕೊಳ್ಳಲಾಗುತ್ತಿದೆ.

ಈ ವಾರ ಸುತ್ತುಗೋಡೆ ನಿರ್ಮಿಸುತ್ತಿದ್ದೇವೆ. ಮುಂದಿನ ಭಾನುವಾರ ಈ ಗೋಡೆಗೆ ಸುಣ್ಣ ಬಳಿಯುವುದು, ಮುರಿದ ಕಿಟಗಿ, ಬಾಗಿಲುಗಳು ಹಾಗೂ ಮೇಲ್ಛಾವಣಿ ದುರಸ್ತಿ, ಬಾಲಕ ಮತ್ತು ಬಾಲಕಿಯರ ಶೌಚಾಲಯ, ಉದ್ಯಾನ ನಿರ್ಮಾಣ, ಮಹನೀಯರ ಹಾಗೂ ಕಲಿಕೆಗೆ ಪೂರಕವಾದ ಗೋಡೆ ಬರಹ ಬರೆಸುವ, ಗುರುವಂದನಾ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳ ಮೂಲಕಮಕ್ಕಳನ್ನು ಶಾಲೆಗೆ ಆಕರ್ಷಿಸುತ್ತೇವೆ ಎನ್ನುತ್ತಾರೆ ಹಳೆಯ ವಿದ್ಯಾರ್ಥಿ ಮಾರುತಿ ಆಪ್ಟೆ ಹಾಗೂ ಶಾಲಾ ಸಿಬ್ಬಂದಿ ಶ್ರೀನಿವಾಸ್ ಬಡಿಗೇರ.

ಹಳೆಯ ವಿದ್ಯಾರ್ಥಿಗಳ ಹೆಸರಿನಲ್ಲಿ ಜಂಟಿ ಖಾತೆ ತೆರೆಯಲಾಗಿದ್ದು, ಈಗಾಗಲೇ ಆನಂದ ಗೊಂಡಬಾಳ ಎಂಬ ವಿದ್ಯಾರ್ಥಿ ಖಾತೆಗೆ ₹ 5 ಸಾವಿರ ಜಮೆ ಮಾಡಿದ್ದಾರೆ. ಅಲ್ಲದೇ ಮತ್ತೊಬ್ಬ ವಿದ್ಯಾರ್ಥಿ ಅಬ್ದುಲ್‌ ಖಾದರ್‌ ಸುತ್ತುಗೋಡೆ ನಿರ್ಮಾಣಕ್ಕೆ 20 ಚೀಲ ಸಿಮೆಂಟ್‌ ನೀಡಿದ್ದಾರೆ. ಮೇಸ್ತ್ರಿಯಾದ ಹಳೆ ವಿದ್ಯಾರ್ಥಿ ಗೋಡೆ ಕಟ್ಟುತ್ತಿದ್ದಾರೆ. ಶಾಲಾ ಮುಖ್ಯಶಿಕ್ಷಕ, ಸಿಬ್ಬಂದಿ ಸಹಾಯಕರಾಗಿ ನೆರವಾಗಿ ಕಾಂಪೌಂಡ್‌ ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದರಿಂದ ಪ್ರೇರಣೆಗೊಂಡ ಕೆಲ ವಿದ್ಯಾರ್ಥಿಗಳು ತಮ್ಮ ಶಾಲೆ ಅಭಿವೃದ್ಧಿಗೆ ದೇಣಿಗೆ ನೀಡಲು ಮುಂದಾಗುವ ಮೂಲಕ ತಮ್ಮ ಶಾಲೆಯ ಅಭಿವೃದ್ಧಿಗೆ ನೆರವಾಗುತ್ತಿದ್ದಾರೆ.

ಕಳೆದ ವರ್ಷ ಪ್ರಾರ್ಥನೆಯ ವೇಳೆ ಮೇಲ್ಛಾವಣಿ ಕುಸಿದ ಪರಿಣಾಮ 482 ಶಾಲೆಗೆ ದಾಖಲಾಗಿದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 382ಕ್ಕೆ ಕುಸಿದಿದೆ. ಇದರಿಂದ 100 ವಿದ್ಯಾರ್ಥಿಗಳು ನಮ್ಮ ಶಾಲೆಯಿಂದ ಬೇರೆ ಶಾಲೆಗಳಿಗೆ ವರ್ಗಾವಣೆ ಆಗಿದ್ದಾರೆ. ಹಾಗಾಗಿ ಶಾಲೆಯ ವಾತಾವರಣವನ್ನು ಸುಂದರಗೊಳಿಸಿ, ಮಕ್ಕಳ ಕಲಿಕೆಗೆ ಪೂರಕವಾಗುವ ವಾತಾವರಣ ನಿರ್ಮಾಣ ಮಾಡಿ, ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ಗುರಿ ಹೊಂದಿದ್ದೇವೆ ಎನ್ನುತ್ತಾರೆ ಮುಖ್ಯಶಿಕ್ಷಕ ಬೀರಪ್ಪ ಅಂಡಗಿ.

5 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಗಳನ್ನು ಈಗಾಗಲೇ ಸರ್ಕಾರ ಮುಚ್ಚಿದೆ. ಆದರೆ ನಗರದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಇರುವ ಈ ಸರ್ಕಾರಿ ಶಾಲೆಯ ಅಭಿವೃದ್ದಿಗೆ ಈಗಲಾದರೂ ಸರ್ಕಾರ ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT