ಮಗಳು ಪಮ್ಮಿಗೆ ಮ್ಯಾಥ್ಸ್ ಟೆಸ್ಟ್‌ನಲ್ಲಿ ಎರಡು ಮಾರ್ಕ್ಸ್ ಕಮ್ಮಿ ಬಂದಿದ್ದಕ್ಕೆ ಶಂಕ್ರಿ, ಸುಮಿ ಆತಂಕಪಟ್ಟರು.
‘ಔಟಾಫ್ ಔಟ್ ಬರೆದಿದ್ದೆ ಮಮ್ಮಿ...’ ಪಮ್ಮಿ ಅಳು ಜೋರು ಮಾಡಿದಳು.
‘ಮ್ಯಾಥ್ಸ್ ಟೀಚರ್ ಕಂಜೂಸ್, ಮಾರ್ಕ್ಸ್ ಕೊಡಲ್ಲ ಅಂತ ನನಗೆ ಮೊದಲೇ ಗೊತ್ತಿತ್ತು’ ಸುಮಿಗೆ ಸಿಟ್ಟು ಬಂತು.
‘ಕೇಳಿದಷ್ಟು ಫೀಸ್ ಕೊಟ್ಟಿದ್ದೇವೆ, ಮಾರ್ಕ್ಸ್ ಕೊಡಬೇಡ್ವಾ? ಆ ಎರಡು ಮಾರ್ಕ್ಸ್ ಅನ್ನು ಟೀಚರ್ ತಮ್ಮ ಮಗಳಿಗೆಂದು ಮನೆಗೆ ತಗೊಂಡೋದ್ರೇನೊ’ ಅಂದ ಶಂಕ್ರಿ.
‘ಇರಬಹುದು ಡ್ಯಾಡಿ, ಮೊನ್ನೆ ಮಗಳಿಗೆಂದು ಎರಡು ಚಾಕ್‍ಪೀಸ್ ತಗೊಂಡು ಹೋಗಿದ್ರು’ ಪಮ್ಮಿ ಚಾಡಿ ಹೇಳಿದಳು.
‘ನಾಳೆ ಸ್ಕೂಲಿಗೆ ಹೋಗಿ ಟೀಚರ್‍ನ ತರಾಟೆಗೆ ತೆಗೆದುಕೊಳ್ತೀನಿ’ ಸುಮಿ ಸಿಟ್ಟಾದಳು.
‘ಬೇಡ ಮಮ್ಮಿ, ಮ್ಯಾಥ್ಸ್ ಟೀಚರ್ ತುಂಬಾ ಸ್ಟ್ರಿಕ್ಟ್, ಕೇಳಿದರೆ ಇನ್ನೆರಡು ಮಾರ್ಕ್ಸ್ ಕಟ್ ಮಾಡ್ತಾರೆ. ಅವರು ಎಚ್‌ಎಂಗೇ ಹೆದರಲ್ಲ, ನಿನಗೆ ಹೆದರ್ತಾರಾ?!’ ಪಮ್ಮಿ ಹೆದರಿಸಿದಳು.
ತಡೆಯಲಾಗದೆ ಸುಮಿ ತನ್ನ ಚಿಕ್ಕಮ್ಮನಿಗೆ ಫೋನ್ ಮಾಡಿ ಸಂಕಟ ಹೇಳಿಕೊಂಡಳು. ಚಿಕ್ಕಮ್ಮ ಬಂಧುಬಳಗಕ್ಕೆ ವಿಷಯ ಮುಟ್ಟಿಸಿದಳು.
ಶಂಕ್ರಿ ಮೊಬೈಲ್‍ಗೆ ಕಾಲ್ ಮೇಲೆ ಕಾಲ್ ಬಂದವು.
‘ಕಡಿಮೆ ಮಾರ್ಕ್ಸ್ ತಗೊಂಡಿದ್ದಾಳೆ ಅಂತ ಮಗಳಿಗೆ ಹೊಡೆಯೋದು, ಬಡಿಯೋದು ಮಾಡ್ಬೇಡಿ. ಮೂರನೇ ಕ್ಲಾಸ್ ಹುಡುಗಿ ಮುಂದೆ ಬುದ್ಧಿ ಕಲಿಯುತ್ತಾಳೆ’ ಎಂದ ಒಬ್ಬ.
‘ಈಗಲೇ ಹೀಗಾದ್ರೆ ನಿಮ್ಮ ಮಗಳು ಮುಂದೆ ಚೆನ್ನಾಗಿ ಓದಿ ಡಾಕ್ಟರಾಗ್ತಾಳಾ?’ ಎಂದಳು ಒಬ್ಬಳು.
‘ಸ್ಕೂಲ್ ಚೇಂಜ್ ಮಾಡಿ, ಜಾಸ್ತಿ ಮಾರ್ಕ್ಸ್ ಕೊಡುವ ಸ್ಕೂಲಿಗೆ ಸೇರಿಸಿ’ ಇನ್ನೊಬ್ಬರ ಸಲಹೆ.
‘ಎಜುಕೇಷನ್ ನೆಗ್ಲೆಕ್ಟ್ ಮಾಡ್ಬೇಡಿ, ಟ್ಯೂಷನ್ನಿಗೆ ಕಳಿಸಿ’.
‘ಮಗಳ ಜಾತಕವನ್ನು ಜ್ಯೋತಿಷಿಗೆ ತೋರಿಸಿ, ದೋಷವಿದ್ದರೆ ಪರಿಹಾರ ಮಾಡಿಕೊಳ್ಳಿ’ ಎಂದರು.
ತಲೆಕೆಟ್ಟು ಶಂಕ್ರಿ ಮೊಬೈಲ್ ಬಂದ್ ಮಾಡಿದ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.