ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ ಖರೀದಿ ಕೇಂದ್ರ ತೆರೆಯಲು ಸರ್ಕಾರದ ಆದೇಶ

Last Updated 14 ನವೆಂಬರ್ 2021, 6:47 IST
ಅಕ್ಷರ ಗಾತ್ರ

ಗಂಗಾವತಿ: ಜಿಲ್ಲೆಯಲ್ಲಿ ಈಗಾಗಲೇ ಭತ್ತ ಕಟಾವು ಕಾರ್ಯ ಆರಂಭವಾಗಿದ್ದು, ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ 3.35 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಆದೇಶ ನೀಡಿದೆ.

ಆಹಾರ ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ ಆದೇಶದ ಪ್ರಕಾರ ರೈತರಿಂದ ಖರೀದಿ ಮಾಡುವ ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ₹1940, ಎ ಗ್ರೇಡ್ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ₹1960 ದರ ನಿಗದಿಪಡಿಸಿ ಆದೇಶ ಹೊರಡಿಸಿದೆ.

ಕೊಪ್ಪಳ, ಉಡುಪಿ, ರಾಯಚೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ನೀಡುವ ರೈತರು ಹೆಸರು ನೋಂದಾಯಿಸಬೇಕು.

ಸರ್ಕಾರ 2021-22ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರಿಂದ ಖರೀದಿಸಲಾಗುವ ಆಹಾರ ಧಾನ್ಯಗಳಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆಯಿಂದ ಜಾರಿ ಮಾಡಿರುವ ಫ್ರೂಟ್ಸ್‌ ದತ್ತಾಂಶದಿಂದ ರೈತರ ಮಾಹಿತಿ ಪಡೆಯುತ್ತಿದೆ.

ಕೃಷಿ ಇಲಾಖೆ ಒದಗಿಸುವ ಸರಾಸರಿ ಬೆಳೆಯ ಮಾಹಿತಿ ಅನ್ವಯ ಸರ್ಕಾರದ ಮಾರ್ಗಸೂಚಿಗಳ ಅಡಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತವನ್ನು ನೀಡಲು ಇಚ್ಛಿಸುವ ಕೊಪ್ಪಳ, ಉಡುಪಿ, ರಾಯಚೂರು, ದಕ್ಷಿಣ ಕನ್ನಡ ಜಿಲ್ಲೆಗಳ ರೈತರಿಂದ ನೋಂದಣಿ ಪ್ರಕ್ರಿಯೆ ಆರಂಭಿಸುವಂತೆ ಸರ್ಕಾರ‌ ಆದೇಶ ನೀಡಿದೆ.

ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ,‘ಪ್ರತಿವರ್ಷ ಭತ್ತ ಕಟಾವು ಮುಗಿದ ನಂತರ ಭತ್ತ ಖರೀದಿ ಕೇಂದ್ರ ಆರಂಭ ಆಗುತ್ತಿತ್ತು. ಇದರಿಂದ ರೈತರಿಗೆ ಲಾಭ ಸಿಗುತ್ತಿರಲಿಲ್ಲ. ಈ ಸಮಸ್ಯೆಯಿಂದ ರೈತರನ್ನು ಪಾರು ಮಾಡಲು ಮುಂಚಿತವಾಗಿಯೇ ಭತ್ತ ಖರೀದಿ‌ ಕೇಂದ್ರಗಳನ್ನು ಆರಂಭಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಸರ್ಕಾರ ಭತ್ತದ ಖರೀದಿ ಕೇಂದ್ರ ಆರಂಭಕ್ಕೆ ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿಗಳು ಕೂಡಲೇ ಭತ್ತ ಖರೀದಿ ಕೇಂದ್ರ ಆರಂಭಿಸಿ, ರೈತರಿಗೆ ಅನುಕೂಲ ಮಾಡಕೊಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT