ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಇತರ ಸಾಂಕ್ರಾಮಿಕ ರೋಗಗಳಿಗಿಲ್ಲ ಕಡಿವಾಣ

ಇತರ ಸೋಂಕು ರೋಗಗಳ ನಿಯಂತ್ರಣ ನಿರ್ಲಕ್ಷ್ಯ: ಸಾಂಕ್ರಾಮಿಕ ರೋಗ ಲಸಿಕೆ, ಮಾತ್ರೆ ವಿತರಣೆಯಲ್ಲಿ ವಿಳಂಬ, ಜಾಗೃತಿಗೆ ಸೀಮಿತ
Last Updated 19 ಜುಲೈ 2021, 4:15 IST
ಅಕ್ಷರ ಗಾತ್ರ

ಕೊಪ್ಪಳ: ಎರಡು ವರ್ಷಗಳಿಂದ ಕೊರೊನಾ ಅಬ್ಬರ ಆವರಿಸಿಕೊಂಡಿದ್ದು, ಜನರು ಪರದಾಡುವಂತಾಗಿದೆ. ಇದರ ಪರಿಣಾಮ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇತರೆ ಸಾಂಕ್ರಾಮಿಕ ಮತ್ತು ಸೋಂಕು ರೋಗ ನಿಯಂತ್ರಣಕ್ಕೆ ಗಮನ ಹರಿಸಲು ಕಷ್ಟಸಾಧ್ಯವಾಗುತ್ತಿದೆ.

ಕೋವಿಡ್‌ ಸೋಂಕು ಜಿಲ್ಲೆಗೆ ಕಾಲಿಟ್ಟ ದಿನದಿಂದು ಹಾಸಿಗೆ, ಆಮ್ಲಜನಕ, ರೆಮ್‌ಡಿಸಿವರ್ ಮಾತ್ರೆ, ವೆಂಟಿಲೇಟರ್‌, ಆರೈಕೆ ಕೇಂದ್ರ ನಿರ್ವಹಣೆ, ಚಿಕಿತ್ಸೆಯಲ್ಲಿಯೇ ಎಡೆಬಿಡದೇ ಕಾರ್ಯಗಳು ನಡೆದಿವೆ. ಇತರೆ ಸಾಂಕ್ರಾಮಿಕ ರೋಗ ನಿವಾರಣೆಗೆ ಅಗತ್ಯ ಸಿಬ್ಬಂದಿ, ಔಷಧಿ ಇಲ್ಲದಿರುವುದು ಕಂಡು ಬರುತ್ತಿದೆ.

ಜಿಲ್ಲೆಯಲ್ಲಿ ಮುಂಗಾರು ಮಳೆ ಮತ್ತು ನಂತರ ಬಿಸಿಲಿನ ತಾಪಕ್ಕೆ ವಿಷಮಶೀತ ಜ್ವರ, ಕಾಲರಾ, ಕರಳುಬೇನೆ, ಡೆಂಗಿ, ಚಿಕುನ್‌ ಗುನ್ಯಾ, ಆನೆಕಾಲು ರೋಗ, ಎಚ್‌ಐವಿ, ಟಿಬಿ ಸೇರಿದಂತೆ ಅನೇಕ ಸಾಂಕ್ರಾಮಿಕ ರೋಗಗಳು ನಿಧಾನವಾಗಿ ಕಾಲಿಟ್ಟಿದ್ದು, ಕೊರೊನಾದ ಮಧ್ಯೆಯೂ ಕೆಲವು ಕಡೆ ಜಾಗೃತಿ ಮೂಡಿಸುವ ಕೆಲಸ ಮಾತ್ರ ನಡೆಯುತ್ತದೆ. ಖುದ್ದಾಗಿ ಮಕ್ಕಳು, ಹಿರಿಯರು, ಅಶಕ್ತರಿಗೆ ಮಾತ್ರೆ ನುಂಗಿಸಬೇಕು ಎಂದರೆ ಶಾಲೆ, ಕಾಲೇಜು ಬಂದ್‌ ಆಗಿರುವುದು, ಲಾಕ್‌ಡೌನ್‌ನಿಂದ ಉಳಿದ ರೋಗಕ್ಕೆ ಪರಿಣಾಮಕಾರಿ ಮದ್ದು ಸಿಗಲು ತೊಂದರೆಯಾಗುತ್ತಿದೆ.

ಕಾಲರಾ: ಅಶುದ್ಧ ಕುಡಿಯುವ ನೀರು ಮತ್ತು ಸೊಳ್ಳೆಗಳಿಂದ ಬರುವ ಈ ಸಾಂಕ್ರಾಮಿಕ ರೋಗ ಗ್ರಾಮೀಣ ಭಾಗದಲ್ಲಿ ಜಾಸ್ತಿ ಕಾಣಿಸಿಕೊಳ್ಳುತ್ತದೆ. ಕೆರೆ, ಬಾವಿಯ ನೀರನ್ನು ಕುಡಿಯಲು ಉಪಯೋಗಿಸುವುದರಿಂದ ವಾಂತಿ, ಬೇಧಿಯಂತಹ ಪ್ರಕರಣ ಕಂಡು ಬಂದಿವೆ. ಆದರೆ ಈ ಸಾರಿ ಇದು ಅಷ್ಟೊಂದು ಭೀಕರವಾಗಿಲ್ಲ. 50 ರಿಂದ 100 ಸಂಖ್ಯೆಯ ಆಸುಪಾಸಿನಲ್ಲಿ ಇದ್ದರೂ ಪರಿಣಾಮಕಾರಿ ಚಿಕಿತ್ಸೆ ನೀಡಿ ಗುಣ ಪಡಿಸಲಾಗಿದೆ.

ಆನೆಕಾಲು ರೋಗ: ಇದು ಕೂಡಾ ಅಶುದ್ಧ ನೀರು, ಕೊಳತೆ ನಾರುತ್ತಿರುವ ಚರಂಡಿ, ಹಳ್ಳ, ಹೊಳೆಯ ಮಲೀನ ನೀರಿನಲ್ಲಿ ಉತ್ಪತ್ತಿ ಯಾಗುವ ಇಡಿಫಸ್‌ ಎಂಬ ರೋಗದಿಂದ ಕಾಲು, ಕೈಗಳು ಊದಿಕೊಂಡು ಜೀವನ್ಮರಣದ ನಡುವೆ ಬದುಕುವಂತೆ ಸೋಂಕಿತರನ್ನು ಹೈರಾಣುಗೊಳಿಸುತ್ತಿವೆ. ಆನೆಕಾಲು ರೋಗ ನಿರ್ಮೂಲನೆಗೆ ಪಣ ತೊಟ್ಟಿರುವ ಆರೋಗ್ಯ ಇಲಾಖೆ ಖುದ್ದಾಗಿ ಮನೆ, ಶಾಲೆಗಳಿಗೆ ಭೇಟಿ ನೀಡಿ ಮಾತ್ರೆಯನ್ನು ನುಂಗಿಸುವ ಕೆಲಸ ಮಾಡುತ್ತಿತ್ತು. ಆದರೆ ಕೊರೊನಾ ಕಾರಣದಿಂದ ಕೆಲವು ಕಡೆ ಹಂಚಿಕೆಯಾಗಿದೆ. ಮಾತ್ರೆ ತೆಗೆದುಕೊಂಡಿದ್ದಾರೆಯೋ, ಬಿಟ್ಟಿದ್ದಾರೆಯೋ ಗಮನಿಸಲು ಆಗುತ್ತಿಲ್ಲ.

ಕರಳು ಬೇನೆ: ಇದು ಕೂಡಾ ಸಾಂಕ್ರಾಮಿಕ ರೋಗದ ಲಕ್ಷಣವಾಗಿದ್ದು, ಅಶುದ್ಧ ನೀರು, ಆಹಾರದಿಂದ ಜಂತುಹುಳು ಸೇರಿದಂತೆ ಇತರೆ ಕರಳು ಸಂಬಂಧಿ ಬೇನೆಗೆ ಕಾರಣವಾಗುತ್ತದೆ. ಈ ರೋಗ ಕೂಡಾ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣ ದಲ್ಲಿ ಇದೆ. ಕೊರೊನಾ ಎರಡನೇ ಅಲೆಯಲ್ಲಿ ಜನವರಿಯಿಂದ ಜೂನ್‌ವರೆಗೆ2020ರಲ್ಲಿ 4009 ಪ್ರಕರಣ, 2021ರಲ್ಲಿ 2640 ಪ್ರಕರಣ ಕಂಡು ಬಂದಿವೆ. ಜೂನ್‌ ಒಂದೇ ತಿಂಗಳಲ್ಲಿ ಕರಳು ಬೇನೆ 438 ಜನರಿಗೆ ಬಂದಿತ್ತು.

ವಿಷಮ ಶೀತ ಜ್ವರ 1907 ಜನರಲ್ಲಿ ಕಾಣಿಸಿಕೊಂಡಿದೆ. ನಾಯಿ ಕಚ್ಚುವ ಮೂಲಕ ರೇಬಿಸ್ ಎಂಬ ರೋಗ ಸಾಂಕ್ರಾಮಿಕ ಆಗಿದ್ದು, ಹುಚ್ಚು ನಾಯಿ ವ್ಯಕ್ತಿಗಳಿಗೆ ಕಡಿದರೆ ಬರುವ ರೋಗ ಇದಾಗಿದೆ. ನಾಯಿಯಂತೆ ಕಿರುಚಾಡುವ ಸಂಭವ ಇರುವುದರಿಂದ ಇವರು ಯಾರಿಗಾದರೂ ಕಚ್ಚಿದರೆ ರೇಬಿಸ್‌ ರೋಗ ಬರುವ ಸಂಭವ ಇರುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ 2658 ಜನರಿಗೆ ನಾಯಿ ಕಡಿತ ಪ್ರಕರಣ ವರದಿಯಾಗಿದ್ದು, ಸಕಾಲಕ್ಕೆ ಚಿಕಿತ್ಸೆ ನೀಡಿದ್ದರಿಂದ ವಿಶೇಷವಾಗಿ ಚುಚ್ಚುಮದ್ದು ಹಾಕಿದ್ದರಿಂದ ರೇಬಿಸ್ ರೋಗದಿಂದ ಪಾರಾಗಿದ್ದಾರೆ.

ಜಾಗೃತಿ ಕಾರ್ಯಕ್ರಮ: ಮುಂಗಾರು ಮಳೆಯಿಂದ ಅಲ್ಲಲ್ಲಿ ನೀರು ನಿಲ್ಲುವುದರಿಂದ ಮತ್ತು ಅಶುದ್ಧ ನೀರು ಪೂರೈಕೆ ಆಗುವುದರಿಂದ ಕಾಯಿಸಿ ಆರಿಸಿ ಕುಡಿಯುವುದು, ಶುದ್ಧ ಫಿಲ್ಟರ್‌ ನೀರಿನ ಬಳಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡುವುದು, ಸಾಂಕ್ರಾಮಿಕ ರೋಗ ಲಕ್ಷಣಗಳು ಕಂಡು ಬಂದರೆ ಗ್ರಾಮಗಳನ್ನು ಸ್ಯಾನಿಟೈಜೇಶನ್‌ ಮಾಡುವುದು. ಸುತ್ತಲಿನ ಗ್ರಾಮಗಳನ್ನು ಗುರುತಿಸಿ ಬೇರೆಡೆ ಹರಡದಂತೆ ನಿಗಾ ವಹಿಸಿ ರೋಗ ನಿರ್ಮೂಲನೆಗೆ ಶ್ರಮಿಸಬೇಕಾದ ಅಗತ್ಯ ಕೊರೊನಾ ಕಾಲದಲ್ಲಿ ಎಂದಿಗಿಂತಲೂ ಇಂದು ಹೆಚ್ಚಾಗಿದೆ.

ಕೊರೊನಾ ನೆಪದಿಂದ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಶೇ 70ರಷ್ಟು ಸುಧಾರಿಸಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕಿದೆ. ಸ್ವಚ್ಛತೆ, ಸಕಾಲಕ್ಕೆ ಚಿಕಿತ್ಸೆ, ಆಪ್ತಸಮಾಲೋಚನೆ, ಆರೈಕೆ, ಕಾಳಜಿಯನ್ನು ವೈದ್ಯರು, ಶುಶ್ರೂಷಕರು ಪ್ರದರ್ಶನ ಮಾಡಬೇಕಿದೆ. ಇದರಿಂದ ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರೆ ಸಾವಿನ ಪ್ರಮಾಣದ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು.

ಖಾಸಗಿ ಆಸ್ಪತ್ರೆಗಳಲ್ಲಿ ಇದರ ಪಾತ್ರ ಪ್ರಮುಖವಾಗಿದ್ದು, ಸಾಂಕ್ರಾಮಿಕ ರೋಗ ಲಕ್ಷಣಗಳು ಕಂಡು ಬಂದರೆ ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಿದರೆ ಅಂಕಿ, ಅಂಶಗಳ ಆಧಾರದ ಮೇಲೆ ಯೋಜನೆ ರೂಪಿಸವುದು ಅನುಕೂಲವಾಗುತ್ತದೆ. ಹಿಂಜರಿಕೆ, ಭಯ ಬಿಟ್ಟು ರೋಗಿಗಳು ಸಂಬಂಧಿಸಿದ ರೋಗಗಳಿಗೆ ಚಿಕಿತ್ಸೆ ಪಡೆದರೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಯೋಜನೆಗಳಿಗೆ ಅನಕೂಲವಾಗುತ್ತದೆ ಎನ್ನುತ್ತಾರೆ ಸಾಮಾಜಿಕ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT