ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ | ಮಿನಿ ವಿಧಾನಸೌಧ ಕಳಪೆ ಕಾಮಗಾರಿ: ಜನರ ಆಕ್ರೋಶ

Published 18 ಡಿಸೆಂಬರ್ 2023, 5:29 IST
Last Updated 18 ಡಿಸೆಂಬರ್ 2023, 5:29 IST
ಅಕ್ಷರ ಗಾತ್ರ

ಕುಷ್ಟಗಿ: ವಿವಿಧ ಇಲಾಖೆಗಳ ಕಚೇರಿಗಳನ್ನು ಒಳಗೊಂಡ ಇಲ್ಲಿಯ ಮಿನಿ ವಿಧಾನಸೌಧ ಕಟ್ಟಡ ಒಳ ಮತ್ತು ಹೊರ ಆವರಣ ಮಲಿನವಾಗಿದೆ. ಅಷ್ಟೇ ಅಲ್ಲ ಕಟ್ಟಡದ ಛಾವಣಿ ಮೂತ್ರ ವಿಸರ್ಜನೆ ತಾಣವಾಗಿದ್ದು ನರಕಸದೃಶವಾಗಿದೆ.

ತಹಶೀಲ್ದಾರ್ ಚೇಂಬರ್‌ ಒಳಗೊಂಡ ಕಂದಾಯ, ಉಪ ನೋಂದಣಿ, ಉಪ ಖಜಾನೆ, ಆಹಾರ ಇಲಾಖೆಗಳ ಕಚೇರಿಗಳಿರುವ ಈ ಆಡಳಿತ ಸಂಕೀರ್ಣದಲ್ಲಿ ಬಹಳಷ್ಟು ಸಿಬ್ಬಂದಿ ಇದ್ದು ಜೊತೆಗೆ ಕೆಲಸ ಕಾರ್ಯಗಳಿಗೆ ನೂರಾರು ಜನರು ಭೇಟಿ ನೀಡುತ್ತಾರೆ. ಆದರೆ ಕಟ್ಟಡದ ಸುತ್ತಲಿನ ಪ್ರದೇಶ ಮುಳ್ಳುಕಂಟಿ, ಹೊಲಸಿನ ಆಗರವಾಗಿದೆ ಎಂದೇ ಜನರು ಅತೃಪ್ತಿ ಹೊರಹಾಕುತ್ತಿದ್ದಾರೆ.

ಇಲ್ಲಿನ ಮಲಿನ ವಾತಾವರಣ ಸಾರ್ವಜನಿಕರ ಆಕ್ಷೇಪಕ್ಕೆ ಗುರಿಯಾಗಿದೆ. ಕಚೇರಿಗೆ ಬರುವ ಜನರು ಅಷ್ಟೇ ಅಲ್ಲ ಸ್ವತಃ ಸಿಬ್ಬಂದಿಯೇ ಸ್ವಚ್ಛತೆ ಕಾಯ್ದುಕೊಳ್ಳುವಲ್ಲಿ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂಬ ದೂರುಗಳಿವೆ. ಕಚೇರಿ ಒಳ ಆವರಣ, ಮೂಲೆಯಲ್ಲಿ ಎಲ್ಲೆಂದರಲ್ಲಿ ತಂಬಾಕು, ಗುಟ್ಕಾ, ಎಲೆ ಅಡಿಕೆ ಜಗಿದು ಉಗುಳುವುದು, ಕಾಗದಪತ್ರಗಳನ್ನು ಬಿಸಾಡುವುದು ಇಲ್ಲಿ ಸಾಮಾನ್ಯ. ಮೂಲಸೌಲಭ್ಯಗಳ ಕೊರತೆ ಇದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕಚೇರಿಗೆ ಬರುವ ಜನರು, ವಯಸ್ಸಾದವರು ಸಿಬ್ಬಂದಿ ಟೇಬಲ್‌ ಮುಂದೆ ನಿಂತುಕೊಂಡೇ ವ್ಯವಹರಿಸಬೇಕಿದೆ. ಹೊರಗೆ ಕುಳಿತುಕೊಳ್ಳುವುದಕ್ಕೆ ಕೆಲವೇ ಆಸನಗಳಿವೆ ಎಂದು ಸಾರ್ವಜನಿಕರಾದ ವೀರಭದ್ರಗೌಡ ದಂಡಿನ, ಮೇಲಗಿರಿಯಪ್ಪ ಅಗಸಿಮುಂದಿನ ಇತರರು ದೂರಿದರು.

ಛಾವಣಿ ಮೂತ್ರಾಲಯ: ನಿಸರ್ಗ ಕರೆ ಪೂರೈಸಿಕೊಳ್ಳಲು ಸಿಬ್ಬಂದಿಗೆ ಮಿನಿವಿಧಾನಸೌಧದ ಒಳಗೆ ವ್ಯವಸ್ಥೆ ಇಲ್ಲ ಎಂದು ಕೆಲ ಇಲಾಖೆಗಳ ಸಿಬ್ಬಂದಿ ಅಳಲು ತೋಡಿಕೊಂಡರು. ಕಟ್ಟಡದ ಹೊರ ಆವರಣದ ಎಡ ಭಾಗದ ಸಂದಿಯಲ್ಲಿ ಜನರು ಮೂತ್ರ ವಿಸರ್ಜಿಸುತ್ತಿರುವುದರಿಂದ ಅಲ್ಲಿ ಪರಿಸರ ಮಾಲಿನ್ಯ ಮಿತಿಮೀರಿದೆ. ಇನ್ನು ಛಾವಣಿಯ ಮೇಲೆ ಎಲ್ಲೆಂದರಲ್ಲಿ ಮೂತ್ರ ವಿಸರ್ಜಿಸುತ್ತಿರುವುದು ವಾತಾವರಣ ಅಸಹ್ಯವಾಗಿದೆ. ಮಳೆ ಬಂದರೆ ಹೊಲಸು ಕೆಳಗೆ ಇಳಿಯುತ್ತಿದ್ದು ಇದರಿಂದ ಇಡಿ ಪ್ರದೇಶ ಮಲಿನವಾಗುತ್ತಿದೆ ಎಂದು ಸಿಬ್ಬಂದಿ ಹಾಗೂ ಸಾರ್ವಜನಿಕರು ವಿವರಿಸಿದರು.

ಮಿನಿವಿಧಾನಸೌಧ ನೈರ್ಮಲ್ಯ ಸಂರಕ್ಷಣೆ ಕೇವಲ ಕಂದಾಯ ಇಲಾಖೆಗಷ್ಟೇ ಅಲ್ಲ ಇತರೆ ಇಲಾಖೆ ಅಧಿಕಾರಿ, ಸಿಬ್ಬಂದಿಯ ಮೇಲಯೂ ಇದೆ. ಆದರೆ ಎಲ್ಲದಕ್ಕೂ ಕಂದಾಯ ಇಲಾಖೆಯನ್ನೇ ಹೊಣೆಯಾಗಿಸಲಾಗುತ್ತಿದೆ. ಉಳಿದ ಇಲಾಖೆಗಳಿಗೆ ಅಂಥ ಜವಾಬ್ದಾರಿಯೇ ಇಲ್ಲವೆ? ಎಂಬ ಅಸಮಾಧಾನ ಕಂದಾಯ ಇಲಾಖೆ ಸಿಬ್ಬಂದಿಯದು.

ಕಳಪೆ ಕೆಲಸ, ಕಿತ್ತಿದ ಛಾವಣಿ: ಕಾಮಗಾರಿ ಕಳಪೆಯಾಗಿರುವ ಕಾರಣಕ್ಕೆ ದಶಕದ ಅವಧಿಯಲ್ಲಿಯೇ ಎಲ್ಲೆಂದರಲ್ಲಿ ಮಿನಿ ವಿಧಾನಸೌಧ ಕಟ್ಟಡ ಅಲ್ಲಲ್ಲಿ ಹಾಳಾಗಿರುವುದು ಕಂಡುಬಂದಿದೆ. ಬಹುತೇಕ ಕೊಠಡಿಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಛಾವಣಿ ಮೇಲಿನ ಗೋಡೆ (ಗ್ರಿಲ್) ಒಡೆದುಹೋಗಿವೆ. ಅದೇ ರೀತಿ ಆರ್‌ಸಿಸಿ ಛಾವಣಿ ಮೇಲಿನ ಪ್ಲಾಸ್ಟರ್ ಕಿತ್ತು ಹಾಳಾಗಿದ್ದು ಮಣ್ಣಿನ ಮಾಳಿಗೆಯಂತಾಗಿರುವುದು ಕಂಡುಬಂದಿತು. ಮಳೆ ಬಂದರೆ ಇನ್ನಷ್ಟು ದಿನಗಳಲ್ಲಿ ಛಾವಣಿ ಮೂಲಕ ನೀರು ಜಿನುಗಬಹುದು ಎಂದು ಸಿಬ್ಬಂದಿ ತಿಳಿಸಿದರು.

ಕಳಪೆ ಕಾಮಗಾರಿಗೆ ಸಾಕ್ಷ್ಯ ಒದಗಿಸುತ್ತಿರುವ ಮಿನಿ ವಿಧಾನಸೌಧದ ಛಾವಣಿ
ಕಳಪೆ ಕಾಮಗಾರಿಗೆ ಸಾಕ್ಷ್ಯ ಒದಗಿಸುತ್ತಿರುವ ಮಿನಿ ವಿಧಾನಸೌಧದ ಛಾವಣಿ
ಕಚೇರಿಗಳಿಗೆ ಬರುವ ಜನ ಹೊಲಸು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸ್ವಚ್ಚತೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ.
ಶ್ರುತಿ ಮಳ್ಳಪ್ಪಗೌಡ್ರ ತಹಶೀಲ್ದಾರ್
ತಹಶೀಲ್ದಾರ್‌ ಹೇಳಿದ್ದೇನು?
ಅವ್ಯವಸ್ಥೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಶ್ರುತಿ ಮಳ್ಳಪ್ಪಗೌಡ್ರ ಸ್ವಂತ ಖರ್ಚಿನಲ್ಲಿಯೇ ಕುಡಿಯುವ ನೀರು ಪೂರೈಕೆ ಪ್ಲಾಂಟ್‌ ಮತ್ತು ಜನರು ಕುಳಿತುಕೊಳ್ಳುವುದಕ್ಕೆ ಆಸನ ವ್ಯವಸ್ಥೆ ಕಲ್ಪಿಸಿದ್ದೇವೆ. ಕಟ್ಟಡದ ಸಣ್ಣಪುಟ್ಟ ದುರಸ್ತಿಗೆ ಹಣ ಬಿಡುಗಡೆಗೆ ಮನವಿ ಮಾಡಿದ್ದಕ್ಕೆ ಜಿಲ್ಲಾಧಿಕಾರಿ ಸ್ಪಂದಿಸಿದ್ದಾರೆ. ಛಾವಣಿ ಮೇಲಿನ ಕಸ ತ್ಯಾಜ್ಯವನ್ನು ತೆಗೆಸಲಾಗಿದೆ ಎಂದರು. ಆದರೆ ಸಿಬ್ಬಂದಿ ಬದಲು ಕಚೇರಿಗೆ ಬರುವ ಜನರೇ ಛಾವಣಿ ಮೇಲೆ ಮೂತ್ರ ವಿಸರ್ಜಿಸುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತೇವೆ. ಒಳ ಹೊರಾವರಣದ ನೈರ್ಮಲ್ಯ ಮತ್ತು ಸಾರ್ವಜನಿಕ ಸೇವೆಗಿರುವ ಕಟ್ಟಡದ ಬಗ್ಗೆ ಜನರ ಸಹಕಾರವೂ ಅಗತ್ಯವಾಗಿರುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT