ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಕ್ರಿಕೆಟ್: ಶುಭಾರಂಭದ ನಿರೀಕ್ಷೆಯಲ್ಲಿ ಹರ್ಮನ್ ಬಳಗ

ಭಾರತ–ದಕ್ಷಿಣ ಆಫ್ರಿಕಾ ಏಕದಿನ ಪಂದ್ಯ ಇಂದು; ಸ್ಮೃತಿ ಮಂದಾನ, ಶ್ರೇಯಾಂಕಾ ಮೇಲೆ ಚಿತ್ತ
Published 15 ಜೂನ್ 2024, 19:30 IST
Last Updated 15 ಜೂನ್ 2024, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇದೇ ವರ್ಷ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಅದಕ್ಕೂ ಮುನ್ನ ನಡೆಯಲಿರುವ ಪ್ರತಿಯೊಂದು ಸರಣಿಯೂ ಮಹಿಳಾ ಕ್ರಿಕೆಟ್ ತಂಡಗಳಿಗೆ ಮಹತ್ವದ್ದಾಗಿವೆ.

ಇದೇ ಹೊತ್ತಿನಲ್ಲಿ ಬೆಂಗಳೂರು ಕೂಡ ಮಹಿಳೆಯರ ಮೂರು ಏಕದಿನ ಪಂದ್ಯಗಳನ್ನು ಆಯೋಜಿಸಲಿದೆ. ಈ ಸರಣಿಯ ಮೊದಲ ಪಂದ್ಯವು ಭಾನುವಾರ ನಡೆಯಲಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.

ಜೆಮಿಮಾ ರಾಡ್ರಿಗಸ್ ಮತ್ತು ಪೂಜಾ ವಸ್ತ್ರಕರ್ ಅವರು ಫಿಟ್ ಆಗಿರುವುದರಿಂದ  ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡದ ಬಲ ವೃದ್ಧಿಸಿದೆ.

ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಿಮಿಮಾ ಮತ್ತು ಪೂಜಾ ಲವಲವಿಕೆಯಿಂದ ಅಭ್ಯಾಸ ಮಾಡಿದರು. 

‘ಜಿಮಿಮಾ ಅವರು ಅನುಭವಿ ಆಟಗಾರ್ತಿ. ದಕ್ಷಿಣ ಆಫ್ರಿಕಾದಂತಹ ಉತ್ತಮ ತಂಡದ ಎದುರಿನ ಸರಣಿಯಲ್ಲಿ ಜಿಮಿಮಾ ಅವರು ಫಿಟ್ ಆಗಿ ಮರಳಿರುವುದು ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ’ ಎಂದು ಭಾರತ ತಂಡದ ನಾಯಕಿ ಹರ್ಮಪ್ರೀತ್ ಸುದ್ದಿಗಾರರಿಗೆ ತಿಳಿಸಿದರು. ‌

ಕಳೆದ ಜನವರಿಯಲ್ಲಿ ಆಸ್ಟ್ರೇಲಿಯಾ ಎದುರು ಭಾರತ ತಂಡವು ಏಕದಿನ ಮತ್ತು ಟಿ20 ಸರಣಿಗಳಲ್ಲಿ ಸೋತಿತ್ತು. ಈಚೆಗೆ ನಡೆದಿದ್ದ ಸರಣಿಯಲ್ಲಿ ಭಾರತ ತಂಡವು 5–0ಯಿಂದ ಬಾಂಗ್ಲಾದೇಶ ವಿರುದ್ಧ ಜಯಿಸಿತು. 

11ರ ಬಳಗದಲ್ಲಿ ಕರ್ನಾಟಕದ ಹುಡುಗಿ ಶ್ರೇಯಾಂಕ ಪಾಟೀಲ ಅವರಿಗೆ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ವಿಕೆಟ್‌ಕೀಪರ್‌ ಸ್ಥಾನಕ್ಕಾಗಿ ಯಷ್ಟಿಕಾ ಭಾಟಿಯಾ ಮತ್ತು ರಿಚಾ ಘೋಷ್ ನಡುವೆ ಪೈಪೋಟಿ ಇದೆ. 

ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಚಾಂಪಿಯನ್ ಆಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂದಾನ ಅವರು ಉತ್ತಮ ಲಯದಲ್ಲಿದ್ದಾರೆ. ಹರ್ಮನ್ ತಮ್ಮ ಬ್ಯಾಟಿಂಗ್ ಲಯಕ್ಕೆ ಮರಳಿದರೆ, ದೊಡ್ಡ ಮೊತ್ತ ಗಳಿಸುವುದು ಸುಲಭವಾಗಲಿದೆ. 

ಲಾರಾ ವೊಲ್ವಾರ್ಡ್ತ್ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡದಲ್ಲಿ ಉತ್ತಮ ಆಲ್‌ರೌಂಡರ್‌ಗಳಿದ್ದಾರೆ. ಕಳೆದ ನಾಲ್ಕು ದಿನಗಳಿಂದ ತಂಡದ ಆಟಗಾರ್ತಿಯರು ಅಭ್ಯಾಸ ನಡೆಸಿದ್ದು.  ಆತಿಥೇಯ ತಂಡಕ್ಕೆ ಸವಾಲೊಡ್ಡಲು ಸಿದ್ಧವಾಗಿದೆ. 

ಮಳೆ ಸಾಧ್ಯತೆ: ಪಂದ್ಯದ ಸಮಯದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಎರಡು ದಿನಗಳ ಹಿಂದೆ ಮಂಡಳಿ ಅಧ್ಯಕ್ಷರ ಇಲೆವನ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಅಭ್ಯಾಸ ಪಂದ್ಯವು ಮಳೆಯಿಂದಾಗಿ ಅರ್ಧಕ್ಕೆ ಮೊಟಕಾಗಿತ್ತು. 

ಪಂದ್ಯ ಆರಂಭ: ಮಧ್ಯಾಹ್ನ 1.30

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಅಭ್ಯಾಸ ನಡೆಸಿದ ಭಾರತ ತಂಡದ ಆಟಗಾರ್ತಿಯರು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಅಭ್ಯಾಸ ನಡೆಸಿದ ಭಾರತ ತಂಡದ ಆಟಗಾರ್ತಿಯರು  

–ಪ್ರಜಾವಾಣಿ ಚಿತ್ರ/ಎಸ್.ಕೆ.ದಿನೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT