ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಳ ಬೆಳೆ ರಕ್ಷಣೆಗೆ ಪೀಪಿಯ ಮೊರೆ

ಹಕ್ಕಿಗಳ ಕಾಟಕ್ಕೆ ಬೇಸತ್ತ ಕಡೆಕೊಪ್ಪ ಗ್ರಾಮದ ರೈತ ನಿಂಗಪ್ಪ ಜೀಗೇರಿ
Last Updated 13 ಜನವರಿ 2023, 23:45 IST
ಅಕ್ಷರ ಗಾತ್ರ

ಹನುಮಸಾಗರ: ಈ ಬಾರಿ ಅತಿಯಾದ ಮಳೆಯ ಕಾರಣವಾಗಿ ಹಿಂಗಾರು ಹಂಗಾಮಿನಲ್ಲಿ ಬಿತ್ತನೆಯಾಗುವ ಬಿಳಿ ಜೋಳದ ಬಿತ್ತನೆ ಅವಧಿ ಮುಗಿದಿದ್ದ ಕಾರಣ ಬಹುತೇಕ ಭಾಗದಲ್ಲಿ ಬಿಳಿ ಜೋಳ ಬಿತ್ತನೆಯಾಗಲಿಲ್ಲ. ಕೆಲವೊಂದಿಷ್ಟು ರೈತರು ತರಾತುರಿಯಲ್ಲಿ ಜೋಳ ಬಿತ್ತನೆ ನಡೆಸಿದ್ದ ಕಾರಣ ಸದ್ಯ ಬಿಳಿ ಜೋಳ ಉತ್ತಮವಾಗಿ ತೆರೆ ಹಿರಿದು ಹಾಲುಗಾಳು ತುಂಬಿಕೊಂಡು ನಿಂತಿದೆ.

ಹಕ್ಕಿಗಳಿಗೆ ಬಿಳಿ ಜೋಳದ ಹಾಲುಗಾಳು ಎಂದರೆ ಎಲ್ಲಿಲ್ಲದ ಪ್ರೀತಿ, ಈ ಸಮಯದಲ್ಲಿ ಹಕ್ಕಿಗಳು ಹುಳುಹುಪ್ಪಡಿಗಳನ್ನು ತಿನ್ನುವುದನ್ನು ಬಿಟ್ಟು ಹಾಲುಗಾಳು ಜೋಳಕ್ಕೆ ಆಸೆ ‍ಪ‍ಡುತ್ತವೆ. ಆದರೆ ಈ ಬಾರಿ ಜೋಳದ ಬೆಳೆ ಬಹುತೇಕ ಕಡೆ ಕಾಣದಿರುವ ಕಾರಣ ಹಕ್ಕಿಗಳ ದಂಡು ಅಲ್ಲಲ್ಲಿ ಕಾಣುವ ಜೋಳದ ಪೈರಿಗೆ ಲಗ್ಗೆ ಇಟ್ಟಿರುವ ಕಾರಣವಾಗಿ ಜೋಳ ಬೆಳೆದ ರೈತ ಸುಸ್ತಾಗಿದ್ದಾನೆ.

‘ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಹಕ್ಕಿ ಹಿಂಡುಗಳು ಬರುತ್ತಿವೆ. ಹೀಗೆ ಮುಂದುವರೆದರೆ ನಮಗೆ ಕಾಳಿನ ಬದಲು ಕಂಕಿ ಮಾತ್ರ ಸಿಗತೈತಿ ನೋಡ್ರಿ' ಎಂದು ಬೇಸರ ವ್ಯಕ್ತಪಡಿಸಿದ ಕಡೆಕೊಪ್ಪ ಗ್ರಾಮದ ರೈತ ನಿಂಗಪ್ಪ ಜೀಗೇರಿ, ಹಕ್ಕಿಗಳು ಕಾಳು ತಿಂದು ಖಾಲಿ ತೆನೆ ಉಳಿಸಿದ್ದನ್ನು ತೋರಿಸಿದರು.

ಆರಂಭದಲ್ಲಿ ಹಕ್ಕಿಗಳನ್ನು ಓಡಿಸುವು ದಕ್ಕಾಗಿ ಕವಣೆ ಬೀಸುವುದು ಆಯಿತು. ಡಬ್ಬಗಳಿಂದ ಸಪ್ಪಳ ಮಾಡಿದ್ದು ಆಯಿತು. ಹುಯ್ಯಿ... ಹುಯ್ಯಿ... ಹೊಲದ ಸುತ್ತ ತಿರುಗಿ ಕೂಗು ಹಾಕಿದ್ದು ಆಯಿತು. ಏನೇ ಮಾಡಿದರು ಜಪ್ಪಯ್ಯ ಎನ್ನದ ಹಕ್ಕಿ ದಂಡುಗಳನ್ನು ಓಡಿಸಲು ಈಗ ಪೀಪಿ ಮೊರೆ ಹೋಗಿದ್ದಾರೆ.

‘ಗವಿಮಠದ ಜಾತ್ರೆಯಲ್ಲಿ ನಮ್ಮ ಹುಡುಗರು ಪೀಪಿ ತಂದಿದ್ರು, ಹುಡುಗರು ಪೀಪಿ ಊದಿಕೊಂತ ಹೊಲದಲ್ಲಿ ಅಡ್ಡಾಡಿದಾಗ ಹಕ್ಕಿಗಳ ದಂಡು ಹಾರಿ ಹೋಗುತ್ತಿತ್ತು. ಇದನ್ನೇ ಅನುಸರಿಸಿದರೆ ಹೇಗೆ ಎಂದು ಯೋಚಿಸಿ ಸರತಿಯಂತೆ ಕುಟುಂಬದ ಸದಸ್ಯರು ಜಮೀನಿನ ಮಂಚಿಗೆಯೆ ಮೇಲೆ ನಿಂತು ಜೋರಾಗಿ ಪೀಪಿ ಊದುತ್ತಿದ್ದೇವೆ' ಎಂದು ಹೇಳಿದರು.

ಒಂದೆರಡೆ ದಿನ ಹೀಗೆ ಹಾರಿ ಹೋಗುವ ಹಕ್ಕಿಗಳು ಎಲ್ಲೂ ಜೊಳದ ಬೆಳೆ ಸಿಗದಂತಾಗಿ ಮತ್ತೆ ಈ ಜೋಳದ ಹೊಲಕ್ಕೆ ಹಾಜರಾಗುವುದು ಗ್ಯಾರಂಟಿ. ಆಗ ಪೀಪಿ ಓದಿದವರೆ ಉಸ್ಸಪಾ ಅನ್ನಬೇಕಾಗುತ್ತದೆ ಎಂದು ನಿಂಗಪ್ಪ ಸ್ನೇಹಿತ ಬಸವರಾಜ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT