ಭಾನುವಾರ, ಮಾರ್ಚ್ 29, 2020
19 °C
ಆಪರೇಟರ್‌ಗಳನ್ನು ಕೆಲಸದಿಂದ ತೆಗೆಯಿರಿ: ಸರ್ಕಾರಕ್ಕೆ ಮುದ್ರಾಂಕ ಇಲಾಖೆ ಆಯುಕ್ತರ ಪತ್ರ

ಐಜಿಆರ್‌ ವಿರುದ್ಧ ಆಪರೇಟರ್‌ಗಳ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಡಾಟಾ ಎಂಟ್ರಿ ಆಪರೇಟರ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ಕೆಲಸದಿಂದ ತೆಗೆಯಬೇಕು ಎಂದು ನೋಂದಣಿ ಮಹಾಪರಿವೀಕ್ಷಕ ಮತ್ತು ಆಯುಕ್ತರು (ಐಜಿಆರ್‌) ಸರ್ಕಾರಕ್ಕೆ ಪತ್ರ ಬರೆದಿರುವುದಕ್ಕೆ ಈ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

‘ನಾವು ಸರ್ಕಾರಿ ನೌಕರರಲ್ಲ. ಅವರ ಕೆಳಗೆ ಕೆಲಸ ಮಾಡುವ ಗುತ್ತಿಗೆ ನೌಕರರು. ನಮಗೆ ಸೇವಾ ಭದ್ರತೆ ಇಲ್ಲ. ಸರ್ಕಾರಿ ನೌಕರರಿಗಿರುವ ಯಾವ ಸೌಲಭ್ಯವೂ ಇಲ್ಲ. ಸಂಬಳ ಕೂಡ ನಾಲ್ಕು–ಐದು ತಿಂಗಳಿಗೊಮ್ಮೆ ಬರುತ್ತದೆ. ನಮ್ಮ ಮೇಲೆ ನಿಮಗೇಕಿಷ್ಟು ಕೋಪ’ ಎಂದು ಹಲವು ಆಪರೇಟರ್‌ಗಳು ಪ್ರಶ್ನಿಸಿದ್ದಾರೆ. 

‘ಸ್ಕ್ಯಾನಿಂಗ್‌ ಮಾಡುವುದು, ಪತ್ರಗಳನ್ನು ಟೈಪಿಸುವ ಕೆಲಸಕ್ಕೆ ಮಾತ್ರ ನಾವು ಸೀಮಿತವಾಗಿಲ್ಲ. ಕಚೇರಿಯಿಂದ ಕಚೇರಿಗೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಸಕಾಲ ಕೆಲಸಗಳು, ಆಸ್ತಿ ಮೌಲ್ಯ ಪಟ್ಟಿ ಹಾಗೂ ಸರ್ಕಾರಿ ಅಧಿಕಾರಿಗಳು ಹೇಳುವ ಎಲ್ಲ ಕೆಲಸ ಮಾಡುತ್ತಿದ್ದೇವೆ. ಕೆಲಸದಿಂದ ತೆಗೆದರೆ ನಮ್ಮನ್ನೇ ನಂಬಿರುವ ಕುಟುಂಬದ ಗತಿಯೇನು’ ಎಂದು ಹಲವು ಆಪರೇಟರ್‌ಗಳು ಅಳಲು ತೋಡಿಕೊಂಡಿದ್ದಾರೆ. 

‘ಇಲಾಖೆಯಲ್ಲಿ ಬಹಳಷ್ಟು ಸೇವೆಗಳು ಕಾವೇರಿ ತಂತ್ರಾಂಶದ ಮೂಲಕ ಗಣಕೀಕೃತಗೊಂಡಿದ್ದು, ಈ ಕಾರ್ಯಕ್ಕೆ 970 ಆಪರೇಟರ್‌ಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲಾಗಿರುತ್ತದೆ. ಇವರನ್ನು ನಿಯಂತ್ರಿಸುವುದು ಮತ್ತು ಹೊಣೆಗಾರಿಕೆಯನ್ನು ನಿಭಾಯಿಸಲು ಸಾಧ್ಯವಿಲ್ಲ. ಅಲ್ಲದೆ ಇವರು ಪದೇ ಪದೇ ಮುಷ್ಕರ ಮಾಡುತ್ತಾರೆ. ಈ ಆಪರೇಟರ್‌ಗಳ ಬದಲಿಗೆ, ಕಂಪ್ಯೂಟರ್‌ ಜ್ಞಾನ ಇರುವ ದ್ವಿತೀಯ ದರ್ಜೆ ಸಹಾಯಕರನ್ನು ನೇಮಿಸುವುದು ಅವಶ್ಯಕವಾಗಿರುವುದರಿಂದ ಹೊಸದಾಗಿ ಈ ಹುದ್ದೆಗಳನ್ನು ಸೃಜಿಸಬೇಕು’ ಎಂದು ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

‘ಪ್ರಸ್ತಾವದ ಹಂತದಲ್ಲಿದೆ’
‘ಇಲಾಖೆಯಲ್ಲಿ ಬಹುತೇಕ ಕೆಲಸವನ್ನು ಹೊರಗುತ್ತಿಗೆ ನೌಕರರಿಂದಲೇ ಮಾಡಿಸಲಾಗುತ್ತಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ. ಸೂಕ್ಷ್ಮವಾದ ಕೆಲಸವನ್ನು ಇಲಾಖೆಯ ಕಾಯಂ ನೌಕರರಿಂದಲೇ ಮಾಡಿಸಬೇಕು ಎಂಬ ಸಲಹೆ ನೀಡಲಾಗಿದೆ. ಹೀಗಾಗಿ, ತಾಂತ್ರಿಕ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಸೃಜಿಸುವಂತೆ ಪತ್ರ ಬರೆಯಲಾಗಿದೆ’ ಎಂದು ಆಯುಕ್ತ ಕೆ.ವಿ. ತ್ರಿಲೋಕ್‌ ಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರತಿಭಟನೆ ಮುಂದೂಡಿಕೆ
‘ಆಯುಕ್ತರ ನಿರ್ಧಾರದ ವಿರುದ್ಧ ಬುಧವಾರ ಪ್ರತಿಭಟಿಸಲು ನಿರ್ಧರಿಸಿದ್ದೆವು. ಆದರೆ, ಕೊರೊನಾ ವೈರಸ್‌ ಭೀತಿ ಇರುವುದರಿಂದ 200ಕ್ಕೂ ಹೆಚ್ಚು ಜನ ಒಂದೆಡೆ ಸೇರುವಂತಿಲ್ಲ ಎಂದು ಪೊಲೀಸ್‌ ಕಮಿಷನರ್‌ ಹೇಳಿದ್ದಾರೆ. ಹೀಗಾಗಿ, ಪ್ರತಿಭಟನೆ ಮುಂದೂಡಲಾಗಿದೆ’ ಎಂದು ಆಪರೇಟರ್‌ ಒಬ್ಬರು ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು