ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ: ಪಾಳು ಬಿದ್ದ ಪೊಲೀಸ್ ಠಾಣೆ ಕಟ್ಟಡ

Published 2 ಜನವರಿ 2024, 4:59 IST
Last Updated 2 ಜನವರಿ 2024, 4:59 IST
ಅಕ್ಷರ ಗಾತ್ರ

ಕನಕಗಿರಿ: ‘ಪಟ್ಟಣದ ರಾಜಬೀದಿಯಲ್ಲಿರುವ ಹಳೆಯ ಪೊಲೀಸ್ ಠಾಣೆಯ ಕಟ್ಟಡ ಪಾಳು ಬಿದ್ದಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದೆ’ ಎಂದು ಸ್ಥಳೀಯರು ದೂರಿದ್ದಾರೆ.

ಪಟ್ಟಣ ಪಂಚಾಯಿತಿ ಮೂಲಗಳ ಪ್ರಕಾರ ಈ ಕಟ್ಟಡ ಮುಜರಾಯಿ ಇಲಾಖೆಗೆ ಸಂಬಂಧಿಸಿದ್ದು ಎನ್ನಲಾಗುತ್ತಿದೆ. ‘ಪೊಲೀಸ್ ಇಲಾಖೆಯವರು ಬಹಳ ವರ್ಷಗಳ ಕಾಲ ಪೊಲೀಸ್ ಠಾಣೆಯನ್ನಾಗಿ ಉಪಯೋಗಿಸಿದ್ದಾರೆ. ದಶಕದ ಹಿಂದೆ ಲಿಂಗಸಗೂರು-ಗಂಗಾವತಿ ರಸ್ತೆಯಲ್ಲಿ ಹೊಸ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಕಟ್ಟಡ ಖಾಲಿ ಬಿದ್ದಿತ್ತು. ಕಂದಾಯ ಇಲಾಖೆಯವರು ಉಪ ತಹಶೀಲ್ದಾರ್ ಕಚೇರಿಯನ್ನಾಗಿ ಬಳಸಿಕೊಂಡರು. ಕಟ್ಟಡವು ಪಟ್ಟಣದ ಹೃದಯ ಭಾಗದಲ್ಲಿರುವ ಕಾರಣ ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ವಿವಿಧ ಗ್ರಾಮಗಳ ಗ್ರಾಮ ಆಡಳಿತ ಅಧಿಕಾರಿಗಳು ಇಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷದ ಹಿಂದೆ ಕಲಕೇರಿ ಗ್ರಾಮದ ರಸ್ತೆಯಲ್ಲಿ ಹೊಸ ಉಪ ತಹಶೀಲ್ದಾರ್ ಕಚೇರಿ ಆರಂಭಗೊಂಡ ಪರಿಣಾಮ ಪೊಲೀಸ್ ಠಾಣೆ ಕಟ್ಟಡ ಪಾಳು ಬಿದ್ದಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಯಾಗಿದೆ’ ಎಂದು ಪ್ರಮುಖರಾದ ದೊಡ್ಡಬಸಪ್ಪ ಭತ್ತದ, ಪಾಮಣ್ಣ ಅರಳಿಗನೂರು, ಕೊಟ್ರೇಶ ಮಡಿವಾಳರ ದೂರಿದರು.

‘ರಾಜಬೀದಿ, ವಾಲ್ಮೀಕಿ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಪರಿಸರದಲ್ಲಿ ಒಂದು ಸಾರ್ವಜನಿಕ ಶೌಚಾಲಯ ಇಲ್ಲದ ಪರಿಣಾಮ ಸಾರ್ವಜನಿಕರು ಹಳೆಯ ಪೊಲೀಸ್ ಠಾಣೆಯ ಕಟ್ಟಡದ ಆವರಣವನ್ನು ಶೌಚಾಲಯವಾಗಿ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ. ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ವೇಳೆ ಮದ್ಯ ಸೇವನೆ ಸೇರಿದಂತೆ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ, ಹಗಲು ಯುವಕರು ಬೇವಿನ ಗಿಡಗಳ ಕಟ್ಟೆಯ ಮೇಲೆ ಕುಳಿತು ಜೂಜಾಟವಾಡುತ್ತಿದ್ದಾರೆ. ಸರ್ಕಾರ ತಾಲ್ಲೂಕು ಕಚೇರಿ ಸ್ಥಾಪನೆ ಮಾಡಲು ಈ ಕಟ್ಟಡವನ್ನು ಬಳಕೆ ಮಾಡಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ತಾಲ್ಲೂಕು ರಚನೆಯಾಗಿ ಆರು ವರ್ಷಗಳು ಕಳೆದರೂ ಕೃಷಿ, ಕ್ಷೇತ್ರ ಶಿಕ್ಷಣಾಧಿಕಾರಿ, ಉಪನೋಂದಣಿ, ಲೋಕೋಪಯೋಗಿ, ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ, ಖಜಾನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗಳು ಮಾತ್ರ ಬಾಡಿಗೆ ಕಟ್ಟಡದಲ್ಲಿ ಕೆಲಸ ಮಾಡುತ್ತಿವೆ, ಸರ್ಕಾರ ಪಾಳು ಬಿದ್ದಿರುವ ಕಟ್ಟಡವನ್ನು ನವೀಕರಿಸಿ ತಾಲ್ಲೂಕು ಕಚೇರಿಯನ್ನು ತೆರೆಯಬೇಕು ಎಂದು ದೊಡ್ಡಬಸಪ್ಪ ಭತ್ತದ, ಸುಭಾನ ಸೈಯದ್, ಕೊಟ್ರೇಶ ಇತರರು ತಹಶೀಲ್ದಾರ್ ವಿಶ್ವನಾಥ ಮುರುಡಿ ಅವರಿಗೆ ಈಚೆಗೆ ಮನವಿ ಸಲ್ಲಿಸಿದ್ದಾರೆ.

ತಾಲ್ಲೂಕು ಕಚೇರಿ ಸ್ಥಾಪನೆಗೆ ಜಾಗದ ಕೊರತೆಯ ನೆಪವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆಯ ಕಟ್ಟಡ, ಪೊಲೀಸ್ ಠಾಣೆ , ಚಿದಾನಂದಮಠದಲ್ಲಿರುವ ವಿವಿಧ ಕಟ್ಟಡಗಳಲ್ಲಿ ತಾತ್ಕಾಲಿಕವಾಗಿ ತಾಲ್ಲೂಕು ಕಚೇರಿಗಳನ್ನು ಆರಂಭಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪೊಲೀಸ್ ಠಾಣೆಯ ಹಳೆಯ ಕಟ್ಟಡ ಮುಜರಾಯಿ ಇಲಾಖೆಗೆ ಸಂಬಂಧಿಸಿದೆ ಪಟ್ಟಣ ಪಂಚಾಯಿತಿಯ ನೂತನ ಕಚೇರಿ ಸ್ಥಾಪಿಸಲು ಹೊಸ ಜಾಗವನ್ನು ಹುಡುಕಲಾಗುತ್ತಿದೆ
- ದತ್ತಾತ್ರೇಯ ಹೆಗಡೆ,, ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಕನಕಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT