ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ: ಅಂಗನವಾಡಿಗಳಿಗೆ ಕಳಪೆ ಬೆಲ್ಲ ಪೂರೈಕೆ

ಕಳಪೆ ಬೆಲ್ಲ ಮುಚ್ಚಿಡಲು ಅಧಿಕಾರಿಗಳ ತಾಕೀತು: ಆರೋಪ
Published : 7 ಆಗಸ್ಟ್ 2024, 5:52 IST
Last Updated : 7 ಆಗಸ್ಟ್ 2024, 5:52 IST
ಫಾಲೋ ಮಾಡಿ
Comments

ಕುಷ್ಟಗಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಅಂಗನವಾಡಿಗಳಿಗೆ ಪೂರೈಸಿರುವ ಬೆಲ್ಲ ತೀರಾ ಕಳಪೆ ಮಟ್ಟದಿಂದ ಕೂಡಿದೆ.

ತಿಂಗಳ ಹಿಂದೆ ತಾಲ್ಲೂಕಿನ 300ಕ್ಕೂ ಹೆಚ್ಚಿನ ಅಂಗನವಾಡಿಗಳಿಗೆ ಪಟ್ಟಣದಲ್ಲಿರುವ ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರ (ಎಂಎಸ್‌ಪಿಸಿ)ದ ಮೂಲಕ ಈ ಬೆಲ್ಲ ಸರಬರಾಜು ಮಾಡಲಾಗಿದೆ. ಸಾವಯವ ಬೆಲ್ಲ ಎಂದು ಹೇಳಲಾಗುತ್ತಿದ್ದರೂ ಬೆಲ್ಲ ಮಾತ್ರ ತೀರಾ ಕಳಪೆಯಾಗಿದೆ.

ಕಡುಕಪ್ಪು ಮತ್ತು ದುರ್ವಾಸನೆಯುಕ್ತವಾಗಿರುವ ಬೆಲ್ಲವನ್ನು ಕಂಡ ಅಂಗನವಾಡಿ ಕಾರ್ಯಕರ್ತೆಯರು ಗಾಬರಿಯಾಗಿದ್ದಾರೆ. ಮಕ್ಕಳಿಗೆ ಅದರಿಂದ ತಯಾರಿಸಿದ ಆಹಾರ ನೀಡಿದರೆ ಆರೋಗ್ಯ ಸಮಸ್ಯೆ ಉಂಟಾಗುವ ಆತಂಕ ಅವರಲ್ಲಿ ಮನೆ ಮಾಡಿದೆ. ಕಳಪೆ ಮಟ್ಟದಿಂದ ಕೂಡಿರುವುದರಿಂದ ಬೆಲ್ಲವನ್ನು ಯಾವ ಅಂಗನವಾಡಿಗಳಲ್ಲೂ ಬಳಕೆ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.

ಬೆಲ್ಲ ಕಳಪೆಯಾಗಿರುವ ಕುರಿತು ದೂರು ಬಂದ ನಂತರ ಪೂರೈಕೆ ನಿಲ್ಲಿಸಿ ಬೇರೆ ಬೆಲ್ಲ ಕಳುಹಿಸಲು ಎಂಎಸ್‌ಪಿಸಿಗೆ ಸೂಚಿಸಲಾಗಿದೆ. ದೂರು ಬಂದ ಕಡೆ ಬೆಲ್ಲವನ್ನು ಹಿಂದಕ್ಕೆ ಪಡೆಯಲಾಗಿದೆ.
ಯಲ್ಲಮ್ಮ ಹಂಡಿ, ಸಿಡಿಪಿಒ

ಕಳಪೆ ಬೆಲ್ಲದ ಬಗ್ಗೆ ಯಾರಿಗೂ ಮಾಹಿತಿ ನೀಡದಂತೆ ಮೇಲಧಿಕಾರಿಗಳು ಮೌಖಿಕವಾಗಿ ಸೂಚಿಸಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಂಗನವಾಡಿ ಕಾರ್ಯಕರ್ತೆಯರು ತಿಳಿಸಿದ್ದಾರೆ.

ಕಳಪೆ ಬೆಲ್ಲ ವಿತರಣೆಯಾಗಿರುವ ಕುರಿತು ಮಾಹಿತಿ ನೀಡಿದ ತಾಲ್ಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಕಲಾವತಿ ಮೆಣೆದಾಳ, ‘ಬೆಲ್ಲದ ವಿಚಾರ ದೊಡ್ಡ ಸಮಸ್ಯೆಯಾಗಿದೆ. ಅದನ್ನು ತಿಂದರೆ ಮಕ್ಕಳ ಆರೋಗ್ಯ ಹದಗೆಡುವುದು ಖಾತರಿ. ಪೂರೈಕೆಯಾಗಿರುವ ಬೆಲ್ಲವನ್ನು ಮರಳಿ ಪಡೆದಿಲ್ಲ. ಬೇರೆ ಬೆಲ್ಲವನ್ನೂ ನೀಡಿಲ್ಲ. ಆ ತಿಂಗಳಿನ ಕಂತಿನ ಬೆಲ್ಲದಿಂದ ಮಕ್ಕಳು ವಂಚಿತರಾಗುವಂತಾಗಿದೆ’ ಎಂದರು.

‘ಬೆಲ್ಲ ಡಾಂಬರಿನಂತೆ ಕಾಣಿಸುತ್ತಿದೆ. ಈ ಬೆಲ್ಲ ಕಬ್ಬಿನಿಂದ ತಯಾರಿಸಿದ್ದು ಅಲ್ಲವೇ ಅಲ್ಲ. ಕಳಪೆ ಸಕ್ಕರೆಗೆ ರಾಸಾಯನಿಕಗಳನ್ನು ಮಿಶ್ರಣಮಾಡಿ ಬೆಲ್ಲ ತಯಾರಿಸಿ ಕಳಿಸಲಾಗುತ್ತಿದೆ. ಕಳಪೆ ಬೆಲ್ಲ ಸರಬರಾಜು ಮಾಡುವುದರ ಹಿಂದೆ ದೊಡ್ಡ ಅಕ್ರಮ ಜಾಲವೇ ಇದ್ದಂತಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT