ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಕಾಮಗಾರಿ: ತಿಂಗಳಲ್ಲೇ ಕಿತ್ತು ಬಂದ ರಸ್ತೆ ಡಾಂಬರ್

Published 11 ಜನವರಿ 2024, 16:37 IST
Last Updated 11 ಜನವರಿ 2024, 16:37 IST
ಅಕ್ಷರ ಗಾತ್ರ

ಕುಷ್ಟಗಿ: ಕಳೆದ ಡಿಸೆಂಬರ್‌ ತಿಂಗಳಲ್ಲಿ ಕೈಗೊಳ್ಳಲಾಗಿದ್ದ ತಾಲ್ಲೂಕಿನ ಯಲಬುರ್ತಿ ಶಾಖಾಪುರ, ನೆರೆಬೆಂಚಿ. ಯಲಬುರ್ತಿಯಿಂದ ಕೊರಡಕೇರಾ, ತಳುವಗೇರಾ, ತೋಪಲಕಟ್ಟಿ, ಬಿಜಕಲ್‌ ಮಧ್ಯೆದ ಜಿಲ್ಲಾ ರಸ್ತೆ ದುರಸ್ತಿ ಕಾಮಗಾರಿ ಕಳಪೆಯಿಂದ ಕೂಡಿದ್ದು,ರಸ್ತೆ ಡಾಂಬರ್‌ ಕಿತ್ತು ಬಂದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪ್ರಸಕ್ತ ವರ್ಷ ಲೋಕೋಪಯೋಗಿ ಇಲಾಖೆಗೆ ಸೇರಿದ ಎಂಟು ರಸ್ತೆಗಳಲ್ಲಿ ₹ 50 ಲಕ್ಷ ಮೊತ್ತದ ಪ್ಯಾಕೇಜ್‌ ಅಡಿ ಕೆಲಸ ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ ಕುರುಬನಾಳ-ಹಿರೇಬನ್ನಿಗೋಳ ಕ್ರಾಸ್‌ವರೆಗಿನ ರಸ್ತೆ ಕೆಲಸಕ್ಕೆ ಸಂಗಮೇಶ, ಯಲಬುರ್ತಿಯಿಂದ ಬಿಜಕಲ್‌ ವರೆಗಿನ ರಸ್ತೆ ಕಾಮಗಾರಿ ಟೆಂಡರ್‌ ಅನ್ನು ಮುದುಕಪ್ಪ ಬಂಡೇರ್‌ ಎಂಬುವರು ಪಡೆದಿದ್ದರು.

ಕೆಲವೆಡೆ ಕಾಟಾಚಾರಕ್ಕೆ ಕೆಲಸ ಮುಗಿಸಿ ಕೈತೊಳೆದುಕೊಂಡಿದ್ದರೆ ಇನ್ನೂ ಕೆಲವೆಡೆ ಕೆಲಸವೇ ಆರಂಭಗೊಂಡಿಲ್ಲ. ಅಲ್ಲಲ್ಲಿ ಒಂದಷ್ಟು ಡಾಂಬರ್‌ ಹಾಕಿದ್ದನ್ನು ಬಿಟ್ಟರೆ ಬೇರೆ ಯಾವ ಕೆಲಸವೂ ನಡೆದಿಲ್ಲ. ಅಲ್ಲದೇ ಕೆಲಸ ಮುಗಿಸಿದ ವಾರದ ಒಳಗೆ ಡಾಂಬರ್ ಕಿತ್ತು ರಸ್ತೆ ಯಥಾಸ್ಥಿತಿಗೆ ಬಂದಿದೆ. ಕಳಪೆ ಕಾಮಗಾರಿ ನಡೆಸಿದರೂ ಇಲಾಖೆ ಮೌನಕ್ಕೆ ಶರಣಾಗಿದೆ ಎಂದು ಶಾಖಾಪುರ, ಯಲಬುರ್ತಿ ಗ್ರಾಮಸ್ಥರಾದ ಹನುಮಗೌಡ, ಫಕೀರಪ್ಪ ಆರೋಪಿಸಿದರು.

ಗುತ್ತಿಗೆದಾರನಿಗೆ ನೋಟಿಸ್‌: ಯಲಬುರ್ತಿ-ಬಿಜಕಲ್‌ವರೆಗಿನ ರಸ್ತೆ ಕಾಮಗಾರಿ ಟೆಂಡರ್‌ ಪಡೆದಿರುವ ಗುತ್ತಿಗೆದಾರ ಮುದುಕಪ್ಪ ಬಂಡೇರ್ ಅವರು ಈವರೆಗೂ ಗುಂಡಿಮುಚ್ಚುವ ಕಾಮಗಾರಿ ಆರಂಭಿಸಿಲ್ಲ. ಈ ಬಗ್ಗೆ ಗುತ್ತಿಗೆದಾರರಿಗೆ ತಾಕೀತು ಮಾಡಲಾಗಿತ್ತು. ಆದರೂ ಇಲಾಖೆಯ ಸೂಚನೆಯನ್ನು ಕಡೆಗಣಿಸಿದ್ದು, ಈಗಾಗಲೇ ಎರಡು ಬಾರಿ ನೋಟಿಸ್‌ ನೀಡಲಾಗಿದೆ. ಕೆಲಸ ಆರಂಭಿಸುವಂತೆ ತಾಕೀತು ಮಾಡಲಾಗಿದೆ ಎಂದು ಲೋಕೋಯೋಗಿ ಇಲಾಖೆ ಅಧಿಕಾರಿಗಳು 'ಪ್ರಜಾವಾಣಿ'ಗೆ ಸ್ಪಷ್ಟಪಡಿಸಿದರು. ಈವರೆಗೂ ಯಾರಿಗೂ ಬಿಲ್‌ ಪಾವತಿಸಿಲ್ಲ. ಸಮರ್ಪಕ ಕಾಮಗಾರಿ ನಡೆದಿರುವುದನ್ನು ಖಾತರಿಪಡಿಸಿಕೊಂಡ ನಂತರವಷ್ಟೇ ಗುತ್ತಿಗೆದಾರರಿಗೆ ಹಣ ಪಾವತಿಸುವುದಾಗಿಯೂ ಹೇಳಿದರು.

ಅಸಮರ್ಪಕ ಕಾಮಗಾರಿ ನಡೆದಿದ್ದರೆ ಪರಿಶೀಲಿಸಲಾಗುವುದು. ರಸ್ತೆ ಸರಿಪಡಿಸುವವರೆಗೂ ಬಿಲ್‌ ಪಾವತಿಸುವುದಿಲ್ಲ.
ಗುರುರಾಜ್ ಎಇ ಲೋಕೋಪಯೋಗಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT