ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಎಸ್‌ಟಿ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

Published 19 ಆಗಸ್ಟ್ 2023, 7:04 IST
Last Updated 19 ಆಗಸ್ಟ್ 2023, 7:04 IST
ಅಕ್ಷರ ಗಾತ್ರ

ಕೊಪ್ಪಳ: ಕೋಲಿ, ಕಬ್ಬಲಿಗ ಹಾಗೂ ಅಂಬಿಗ ಸಮದಾಯಗಳನ್ನು ಪರಿಶಿಷ್ಟ ಪಂಗಡ (ಎಸ್‌.ಟಿ) ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಶುಕ್ರವಾರ ಕೊಪ್ಪಳ ತಾಲ್ಲೂಕು ಗಂಗಾಮತಸ್ಥರ ಸಂಘದ ವತಿಯಿಂದ ಬೃಹತ್‌ ಪ್ರತಿಭಟನೆ ನಡೆಯಿತು.

ವಿಜಯಪುರ, ಬಾಗಲಕೋಟೆ, ಸಿಂದಗಿ, ರಾಯಚೂರು, ಹೊಸಪೇಟೆ ಹಾಗೂ ಹರಪನಹಳ್ಳಿ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಸಮುದಾಯಗಳ ಜನ ಇಲ್ಲಿನ ಶಿರಸಪ್ಪಯ್ಯನ ಮಠದಿಂದ ಜಿಲ್ಲಾಡಳಿತ ಭವನದ ತನಕ ಮೆರವಣಿಗೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಅವರಿಗೆ ಮನವಿ ಸಲ್ಲಿಸಿದರು.

ನಮ್ಮ ಸಮುದಾಯಗಳನ್ನು ಎಸ್‌.ಟಿ. ಪಟ್ಟಿಯಲ್ಲಿ ಸೇರಿಸಲು ಬೇಕಾದ ದಾಖಲೆಗಳು ಮತ್ತು ಕುಲಶಾಸ್ತ್ರೀಯ ಅಧ್ಯಯನ ವರದಿಯೊಂದಿಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಹಿಂದುಳಿದ ವರ್ಗದಲ್ಲಿಯೇ ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿಯೂ ನಮ್ಮ ಸಮುದಾಯ ಬಹಳಷ್ಟು ಹಿಂದುಳಿದಿವೆ. ಹಿಂದಿನ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಕಲಬುರಗಿಗೆ ಬಂದಾಗ ನಮ್ಮ ಸಮುದಾಯಕ್ಕೆ ಎಸ್‌.ಟಿ. ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಇನ್ನೂ ಈಡೇರಿಲ್ಲ ಎಂದು ಹೇಳಿದರು.

ಹಿಂದಿನ ಲೋಕಸಭಾ ಚುನಾವಣೆ ಮುಗಿದು ನಾಲ್ಕು ವರ್ಷಗಳಾದರೂ ನಮ್ಮ ಬೇಡಿಕೆ ಈಡೇರಿಲ್ಲ. ಮುಂಬರುವ ಲೋಕಸಭಾ ಚುನಾವಣೆ ವೇಳೆಗೆ ನಮ್ಮ ಬೇಡಿಕೆ ಈಡೇರಿಸಬೇಕು. ರಾಜ್ಯದ 17 ಲೋಕಸಭಾ ಮತ್ತು 170 ವಿಧಾನಸಭಾ ಕ್ಷೇತ್ರಗಳಲ್ಲಿ  ನಮ್ಮ ಸಮುದಾಯದ ಜನ ನಿರ್ಣಾಯಕ ಪಾತ್ರ ವಹಿಸುವರು ಎಂದು ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಮಟ್ಟದಲ್ಲಿ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಕೋಳಿದೋರ್‌, ಠೋಕ್ರೆ, ಕೋಳಿ, ಕೋಯಾ, ಕೊಲ್ಜಾ, ಕೊಲ್ಗಾ ಪದಗಳನ್ನು ಬಳಸಲಾಗುತ್ತಿದ್ದು, ಇದರ ಪರ್ಯಾಯ ಪದಗಳಾಗಿ ಕೋಲಿ, ಕಬ್ಬಲಿಗ, ಅಂಬಿಗರಿಗೆ ಎಸ್‌.ಟಿ. ಪ್ರಮಾಣ ಪತ್ರ ನೀಡದೆ ಅನ್ಯಾಯ ಮಾಡಲಾಗುತ್ತಿದೆ. ಆದ್ದರಿಂದ  ತುರ್ತಾಗಿ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಇನ್ನಷ್ಟು ದೊಡ್ಡ ಸಂಖ್ಯೆಯಲ್ಲಿ ಮತ್ತೆ ಹೋರಾಟ ನಡೆಸಲಾಗುವುದು ಎಂದು ಸಮುದಾಯಗಳ ನಾಯಕರು ಹೇಳಿದರು.

ಶಹಬಾದ್‌ನ ತೊನಸನಹಳ್ಳಿ ಅಲ್ಲಮಪ್ರಭು ಸಂಸ್ಥಾನ ಮಠದ ಮಲ್ಲಣ್ಣಪ್ಪ ಸ್ವಾಮೀಜಿ, ಕಬ್ಬಲಿಗ ಯುವ ವೇದಿಕೆ ರಾಜ್ಯಾಧ್ಯಕ್ಷ ಶಿವಾಜಿ ಮೇಟೆಗಾರ, ರಾಮಣ್ಣ ಕೌದಿ, ವಸಂತ ಕುಮಾರ, ಬುಡ್ಡಪ್ಪ ಬಾರಕೇರ, ಗಾಳೆಪ್ಪ ಸುಣಕಾರ, ಮಲ್ಲಪ್ಪ ಬಾರಕೇರ, ಶಿವಪುತ್ರಪ್ಪ ಕುಕನೂರು, ಲೋಕೇಶ ಬಾರಕೇರ, ಮಲ್ಲಿನಾಥ ಸ್ವಾಮಿ, ರಾಮಣ್ಣ ಚೌಡಿ, ಪ್ರಜ್ವಲ್ ಬಾರಕೇರ, ಗೋಣಿಬಸವ ಕರಿಕೆಹಳ್ಳಿ, ಗಂಗಾಮತಸ್ಥರ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಕಂಪಸಾಗರ, ಕೋಲಿ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಸಮುದಾಯಕ್ಕೆ ನ್ಯಾಯ ಒದಗಿಸಲು ಪ್ರಯತ್ನ

ಸಂಸದ ಸಂಗಣ್ಣ ಕರಡಿ ಮಾತನಾಡಿ ’ಈ ಸಮುದಾಯಕ್ಕೆ ಎಸ್‌.ಟಿ. ಮೀಸಲಾತಿ ನೀಡುವಂತೆ ನಡೆಯುತ್ತಿರುವ ಹೋರಾಟಕ್ಕೆ ನನ್ನ ಬೆಂಬಲವಿದೆ. ಸಮುದಾಯವ ಶೈಕ್ಷಣಿಕ ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ಬಿ.ಆರ್‌. ಅಂಬೇಡ್ಕರ್‌ ಅವರ ಆಶಯದಂತೆ ಎಲ್ಲ ಸಮುದಾಯಗಳಿಗೆ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಅಧಿಕಾರವಿದೆ’ ಎಂದರು. ‘ರಾಮಾಯಣ ಮಹಾಭಾರತ ಕಾಲದಿಂದಲೂ ಗಂಗಾಮತಸ್ಥ ಸಮುದಾಯವಿತ್ತು ಎನ್ನುವುದಕ್ಕೆ ಅನೇಕ ದಾಖಲೆಗಳು ಇವೆ. ಈ ಭಾಗದ ಸಂಸದರೆಲ್ಲರೂ ಸೇರಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಬಳಿ ನಿಮ್ಮ ಬೇಡಿಕೆಯನ್ನು ಪ್ರಸ್ತಾಪ ಮಾಡುತ್ತೇವೆ. ಪ್ರಧಾನಿಯನ್ನು ಭೇಟಿಯಾಗುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT