ಶುಕ್ರವಾರ, ಜುಲೈ 1, 2022
27 °C
ಆನೆಗೊಂದಿ: ಐದು ದಿನಗಳ ಜಾತ್ರಾ ಮಹೋತ್ಸವಕ್ಕೆ ಚಾಲನೆ

ರಂಗನಾಥಸ್ವಾಮಿ ರಥೋತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾಮದ ಶ್ರೀರಂಗ ನಾಥಸ್ವಾಮಿ ದೇವರ ರಥೋತ್ಸವ ಶನಿವಾರ ಸಂಭ್ರಮದಿಂದ ಜರುಗಿತು.

ರಂಗನಾಥಸ್ವಾಮಿ ದೇವರ ಜಾತ್ರಾ ಮಹೋತ್ಸವ ಐದು ದಿನಗಳ ಕಾಲ ನಡೆಯಲಿದ್ದು, ಅದರಲ್ಲಿ ಮೊದಲ ದಿನ ಗುರುವಾರ ಆನೆಗೊಂದಿ ಕೃಷ್ಣ ದೇವರಾಯನ ಮನೆತನದಿಂದ ಅಂಕುರಾರ್ಪಣೆ, ಧ್ವಜಾರೋಹಣದ ಜೊತೆಗೆ ರಾತ್ರಿ ಕಲ್ಯಾಣೋತ್ಸವ ನಡೆಯಿತು.

ಶುಕ್ರವಾರ ಬೆಳಿಗ್ಗೆ ಮತ್ತು ಸಂಜೆ ಗ್ರಾಮದಲ್ಲಿ ಗರುಡೋತ್ಸವ ಮಾಡಲಾಯಿತು. ಶನಿವಾರ ಬೆಳಿಗ್ಗೆ ರಂಗನಾಥ ದೇವಸ್ಥಾನವನ್ನು ತೆಂಗಿನಗರಿ, ಬಾಳೆದಿಂಡು, ಚೆಂಡೂ, ಮಾವಿನ ತೋರಣಗಳಿಂದ ಅಲಂಕರಿಸಿ, ವಿವಿಧ ರೀತಿಯ ಧಾರ್ಮಿಕ ಪೂಜೆ ಕಾರ್ಯಕ್ರಮಗಳನ್ನು ನೆರವೇರಿಸಿ, ಬ್ರಹ್ಮರಥೋತ್ಸವ ನಡೆಸಲಾಯಿತು.

ರಥೋತ್ಸವಕ್ಕೆ ಆಗಮಿಸಿದ ಎಲ್ಲ ಭಕ್ತರಿಗೆ ಪ್ರಸಾದವಾಗಿ ಊಟ ನೀಡಲಾಯಿತು. ಸಂಜೆ ರಾಜ ಮನೆತನದವರ ಸಮ್ಮುಖದಲ್ಲಿ ದೇವಸ್ಥಾನ ಧ್ವಜಪಠ ಹರಾಜು ಮಾಡಿ, ಆ ಧ್ವಜ ರಥಕ್ಕೆ ಕಟ್ಟಿ ತೆರು ಎಳೆಯಲಾಯಿತು. ನಂತರ ರಂಗನಾಥ ದೇವರನ್ನು ಗ್ರಾಮದ ರಾಜಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಮಾಡಲಾಯಿತು.

ಈ ವೇಳೆಯಲ್ಲಿ ಸಾಣಾಪುರ, ಹನುಮನಹಳ್ಳಿ, ರಂಗಾಪುರ, ಚಿಕ್ಕರಾಂಪುರ, ಆನೆಗೊಂದಿ, ಕಡೆಬಾಗಿಲು, ಬಸವನ ದುರ್ಗಾ, ಬಂಡಿಬಸಪ್ಪ ಕ್ಯಾಂಪ್, ಸಂಗಾಪುರ ಗ್ರಾಮಗಳ ಭಕ್ತರು ತೇರಿಗೆ ಬಾಳೆಹಣ್ಣು, ಉತ್ತತ್ತಿ ಎಸೆದರು.

ಜಾತ್ರೆಯಲ್ಲಿ ಮಹಿಳೆಯರು ತರಹೇವಾರಿ ಬಳೆ, ಓಲೆ, ಸರ ಖರೀದಿಸಿದರು. ಇನ್ನೂ ಕೆಲ ಮಕ್ಕಳು ಬಲೂನು, ಬೊಂಬೆ, ಆಟದ ಸಾಮಗ್ರಿ ಖರೀದಿಸಿ, ಖುಷಿಪಟ್ಟರೆ, ಇನ್ನೂ ಕೆಲ ಮಕ್ಕಳು ಜಪಿಂಗ್ ಆಟ, ಜೈಯಿಂಟ್ ವೀಲ್ ಆಡಿ ಖುಷಿಪಟ್ಟರು.

ಜಾತ್ರೆಯಲ್ಲಿ ಹುಲಿ, ಅನೆ, ಮೊಲ ಜೊತೆಗೆ 1ರ ಸಂಖ್ಯೆಯನ್ನು ಕಂಡು ಹಿಡಿಯುವ ಮನೋರಂಜನೆಯ ಆಟಗಳು ಕಂಡು ಬಂದವು. ಯುವಕರಿಂದ ರಂಗನಾಥ ಜಾತ್ರೆ ಹಬ್ಬದಂತೆ ಭಾಸವಾಗಿತ್ತು. ಸಂಜೆ ಸಾಮಾಜಿಕ ನಾಟಕ ನಡೆಯಿತು.

ರಂಗನಾಥ ಜಾತ್ರೆ ಅಂಗವಾಗಿ ಕಳೆದ 10 ದಿನಗಳ ಹಿಂದೆ ಆನೆಗೊಂದಿ ಗ್ರಾಮಸ್ಥರಿಂದ ಕ್ರಿಕೆಟ್ ಮತ್ತು ಕಬಡ್ಡಿ ಪಂದ್ಯಾವಳಿ ಆಯೋಜಿಸಿ ಪ್ರಶಸ್ತಿಗಳನ್ನು ವಿತರಣೆ ಮಾಡಿದರು.

ಗಣ್ಯರಿಂದ ದರ್ಶನ: ಬಿಜೆಪಿ ಮುಖಂಡ ವಿರುಪಾಕ್ಷಪ್ಪ ಸಿಂಗನಾಳ, ಸಮಾಜ ಸೇವಕ ಸಂಗಮೇಶ್ ಸುಗ್ರೀವಾ, ಮಾಜಿ ಜಿ.ಪಂ ಸದಸ್ಯೆ ಲಲಿತಾರಾಣಿ ಶ್ರೀರಂಗ ದೇವರಾಯಲು ಸೇರಿದಂತೆ ಹಲವು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಈ ವೇಳೆಯಲ್ಲಿ ರಂಗನಾಥ ದೇವಸ್ಥಾನ ಕಮಿಟಿ ಅಧ್ಯಕ್ಷ ಹರಿಹರ ದೇವರಾಯಲು, ಡಿ.ಪಿ ಕುಪ್ಪರಾಜ್, ರಾಮಕೃಷ್ಣ ಇಲ್ಲೂರು, ಗ್ರಾಮಲೆಕ್ಕಾಧಿಕಾರಿ ಮಹಾಲಕ್ಷ್ಮಿ ಪಿ.ಆರ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು