ಶುಕ್ರವಾರ, ಫೆಬ್ರವರಿ 26, 2021
20 °C
ವಿವಿಧ ಪ್ರಕಾರಗಳಲ್ಲಿ 100ಕ್ಕೂ ಹೆಚ್ಚು ಕಲಾಕೃತಿ ರಚನೆ, ಹಲವು ಪ್ರಶಸ್ತಿಗಳ ಗೌರವ

ಅಪರೂಪದ ಕಲಾವಿದ ಭಯ್ಯಾಪುರ

ಶಿವಕುಮಾರ್.ಕೆ Updated:

ಅಕ್ಷರ ಗಾತ್ರ : | |

prajavani

ಗಂಗಾವತಿ: ಮನಸ್ಸಿನಲ್ಲಿ ಮೂಡುವ ವಿಷಯಕ್ಕೆ ಕುಂಚದ ಮೂಲಕ ಚಿತ್ರರೂಪ ನೀಡಿ  ಮನಸೂರೆಗೊಳ್ಳುವ ಕಲಾಕೃತಿಗಳನ್ನು ರಚಿಸುವ ಕೆಲಸವವನ್ನು ಕಳೆದ 25 ವರ್ಷಗಳಿಂದ ಮಾಡುತ್ತಿರುವ  ಎಲೆಮರೆಯ ಕಾಯಿಯಂತಿರುವ ಚಿತ್ರ ಕಲಾವಿದ ರಾಘವೇಂದ್ರ ಭಯ್ಯಾಪೂರ.

ನೋಡಿದನ್ನೇ ಚಿತ್ರಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಇವರು, ಚಿತ್ರಕಲೆಯ ಹಲವು ವಿಭಾಗಗಳಲ್ಲಿ ಪರಿಣತಿ ಹೊಂದಿದ್ದಾರೆ.

ಗದಗಿನ ವಿಜಯ ಕಲಾಮಂದಿರದಲ್ಲಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಸದ್ಯ ನಗರದ ವಿವೇಕ ಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಕಳೆದ 15 ವರ್ಷಗಳಿಂದ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಾಲ್ಯದಲ್ಲೇ ಆಸಕ್ತಿ: ನನ್ನ ತಂದೆ ಪೌರೋಹಿತ್ಯ  ಮಾಡುತ್ತಿದ್ದರಿಂದ, ಹಬ್ಬಹರಿದಿನಗಳಲ್ಲಿ ಅವರು ದೇವರ ಚಿತ್ರಗಳನ್ನು ಗೋಡೆಯ ಮೇಲೆ ಬಿಡಿಸುತ್ತಿದ್ದರು. ಅದನ್ನು ನೋಡಿ ನನಗೂ ಚಿತ್ರಕಲೆಯಲ್ಲಿ ಅಭಿರುಚಿ ಹುಟ್ಟಿಕೊಂಡಿತು.   ಗೋಡೆ ಕಂಡರೂ  ಅದರ ಮೇಲೆ  ಚಿತ್ರಗಳನ್ನು ಬಿಡಿಸುತ್ತಿದ್ದೆ.   ನನ್ನ ಕಲೆಗೆ  ತಂದೆಯೆ ಸ್ಫೂರ್ತಿ ಎನ್ನುತ್ತಾರೆ ರಾಘವೇಂದ್ರ.

ಪೆನ್ಸಿಲ್‌ ಚಿತ್ರ, ತೈಲವರ್ಣ, ವರ್ಲಿ ಕಲೆ, ಜಲವರ್ಣ ಚಿತ್ರ, ಲ್ಯಾಂಡ್‌ ಸ್ಕೇಪ್‌, ವ್ಯಕ್ತಿ ಚಿತ್ರ, ಸಾಂಪ್ರದಾಯಿಕ ಚಿತ್ರ ಸೇರಿ ಎಲ್ಲಾ ಪ್ರಕಾರಗಳಲ್ಲೂ ನೈಪುಣ್ಯತೆ  ಹೊಂದಿದ್ದಾರೆ. ಈವರೆಗೂ 100ಕ್ಕೂ ಹೆಚ್ಚು ಕಲಾಕೃತಿಗಳನ್ನು ರಚನೆ ಮಾಡಿದ್ದಾರೆ.

ಈಗಾಗಲೆ ಚಿತ್ರಕಲಾ ಪರಿಷತ್ತು ಬೆಂಗಳೂರು, ಶ್ರುತಿ ಸಾಹಿತ್ಯ ಮೇಳ ರಾಯಚೂರು, ಸಾಂಸ್ಕೃತಿ ಕಲಾಮೇಳ ಗಂಗಾವತಿ, ಧಾರವಾಡ, ಪುಣೆ, ಹಂಪಿ ಉತ್ಸವ, ಆನೆಗೊಂದಿ ಉತ್ಸವದಲ್ಲಿ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ.

ಹಂಪಿ ವಿವಿಯಲ್ಲಿ ಸಂಸ್ಕಾರ ಭಾರತಿ ಸಂಸ್ಥೆ ಆಯೋಜಿಸಿದ್ದ ಆಖಿಲ ಭಾರತ ರಾಷ್ಟ್ರೀಯ ಚಿತ್ರಕಲಾ ಶಿಬಿರಕ್ಕೆ ಆಯ್ಕೆಯಾದ  ಕಲಾವಿದರಲ್ಲಿ ರಾಘವೇಂದ್ರ ಭಯ್ಯಾಪುರ ಕೂಡ ಒಬ್ಬರು.

ಹಿಂದಿ ಸಿನಿಮಾಗೆ ಕಲಾವಿದನಾಗಿ ಕೆಲಸ:  ಹಿಂದಿ ಸಿನಿಮಾ ಚೈನಾಗೇಟ್‌ ಚಿತ್ರಕ್ಕೂ ಕಲಾವಿದನಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಚಿತ್ರದ ಕಲಾ ನಿರ್ದೇಶಕರಾಗಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ.  

ಇವರ ಕಲಾಕೃತಿಗಳು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ, ವಿದೇಶದಲ್ಲೂ ಜನಪ್ರಿಯವಾಗಿವೆ.  ಇಂಗ್ಲೆಂಡ್‌ನ ಪ್ರವಾಸಿಗರೋಬ್ಬರು  ಪ್ರತಿವರ್ಷ ಗಂಗಾವತಿಗೆ ಬಂದು ಇವರ ಬಳಿ ಕಲಾಕೃತಿಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಾರೆ.   ‌

ಇವರ ಕಲಾಕೃತಿಗಳಲ್ಲಿ ವಿಜಯನಗರ ಶೈಲಿಯ ಹೋಲಿಕೆಯನ್ನು ಹೆಚ್ಚಾಗಿ ಕಾಣಬಹುದು. ರಾಘವೇಂದ್ರ ಸ್ವಾಮೀಜಿ ಅವರ ಚಿತ್ರ, ಪಂಪಾ ವಿರುಪಾಕ್ಷ ಕಲ್ಯಾಣ ಮತ್ತು ರಾಧಾಕೃಷ್ಣರ ಚಿತ್ರಗಳು, ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಸ್ಥಳಗಳ ಪೇಂಟಿಂಗ್ಸ್‌, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರು ಮಂತ್ರಾಲಯಕ್ಕೆ ಬಂದಾಗಿನ ಚಿತ್ರಗಳು ಅಂತ್ಯಂತ ಹೆಚ್ಚು ಜನಮನ್ನಣೆ ಗಳಿಸಿವೆ.

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಿಂದ ವಿಜಯ ವಿಠ್ಠಲ ಪ್ರಶಸ್ತಿ, ಜಾನಪದ ಆಕಾಡೆಮಿ ವತಿಯಿಂದ ಕನಕಗಿರಿ ಉತ್ಸವದಲ್ಲಿ ಸನ್ಮಾನ, 2005ನೇ ಸಾಲಿನಲ್ಲಿ ವಿಶ್ವೇಶ್ವರಯ್ಯ ಪ್ರಶಸ್ತಿ ಸೇರಿ  ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು