ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಏಡ್ಸ್‌ ಪ್ರಮಾಣ: ಕೊಪ್ಪಳದಲ್ಲಿ ಗಣನೀಯ ಇಳಿಕೆ

ವಿಶ್ವ ಏಡ್ಸ್‌ ದಿನಾಚರಣೆ ಇಂದು; ತಳಮಟ್ಟದಲ್ಲಿ ಹೆಚ್ಚಿದ ಜಾಗೃತಿ, ಕಾಂಡೋಮ್‌ ಬಳಕೆಗೆ ಉತ್ತೇಜನ
Published 1 ಡಿಸೆಂಬರ್ 2023, 4:37 IST
Last Updated 1 ಡಿಸೆಂಬರ್ 2023, 4:37 IST
ಅಕ್ಷರ ಗಾತ್ರ

ಕೊಪ್ಪಳ: ಹಲವು ದಶಕಗಳ ಹಿಂದೆ ಮಹಾಮಾರಿಯಾಗಿ ವ್ಯಾಪಕ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಏಡ್ಸ್‌ ಪೀಡಿತರ ಪ್ರಕರಣಗಳು ಈಗ ಗ್ರಾಮೀಣ ಮಟ್ಟದಲ್ಲಿ ಜನಜಾಗೃತಿ ಮತ್ತು ಕಾಂಡೋಮ್‌ ಬಳಕೆಗೆ ಉತ್ತೇಜನ ನೀಡಿದ ಪರಿಣಾಮ ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿವೆ.

2017–18ರಲ್ಲಿ 48,551 ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 49 ಪ್ರಕರಣಗಳು ಪತ್ತೆಯಾಗಿದ್ದವು. 2023ರಲ್ಲಿ ಸೆಪ್ಟೆಂಬರ್‌ ತನಕ 20,890 ಗರ್ಭಿಣಿಯರನ್ನು ಪರೀಕ್ಷೆ ಮಾಡಲಾಗಿದ್ದು ಹತ್ತು ಜನರಲ್ಲಿ ಮಾತ್ರ ಪಾಸಿಟಿವ್‌ ಕಂಡು ಬಂದಿದೆ.

ಸಾಮಾನ್ಯ ಜನರ ಪಟ್ಟಿಯಲ್ಲಿ 2017–18ರಲ್ಲಿ ಶೇ 1.08ರಷ್ಟು ಇದ್ದ ಏಡ್ಸ್‌ ಪೀಡಿತರ ಸಂಖ್ಯೆ ಹಿಂದಿನ ಐದು ವರ್ಷಗಳ ಅವಧಿಯಲ್ಲಿ ಶೇ 1ರ ಗಡಿ ದಾಟಿಲ್ಲ. ಈ ವರ್ಷದ ಸೆಪ್ಟೆಂಬರ್‌ತನಕ 41,303 ಜನರನ್ನು ಪರೀಕ್ಷೆ ಒಳಪಡಿಸಲಾಗಿದ್ದು, 160 ಜನರಲ್ಲಿ ಪಾಸಿಟಿವ್‌ ಕಂಡು ಬಂದಿದೆ. 2022–23ರಲ್ಲಿ ಸಾಮಾನ್ಯ ಜನರ ಏಡ್ಸ್‌ ಪರೀಕ್ಷಾ ವರದಿಯಲ್ಲಿ ಕೊಪ್ಪಳ ಜಿಲ್ಲೆ ರಾಜ್ಯದಲ್ಲಿ ಐದನೇ ಸ್ಥಾನ ಹೊಂದಿದೆ. ಜಿಲ್ಲೆಯಲ್ಲಿ 2010ರಲ್ಲಿ ಶೇ.8.69ರಷ್ಟು ಇದ್ದ ಏಡ್ಸ್ ಪೀಡಿತರ ಪ್ರಮಾಣ ಕಳೆದ ವರ್ಷದ ಅಂತ್ಯಕ್ಕೆ ಶೇ 0.52ಗೆ ಇಳಿಕೆಯಾಗಿದೆ.

ಗ್ರಾಮೀಣ ಅಭಿವೃದ್ಧಿ ಇಲಾಖೆಯ ಎಲ್ಲ ತರಬೇತಿ ಕಾರ್ಯಕ್ರಮಗಳಲ್ಲಿ ಎಚ್‌ಐವಿ ಜಾಗೃತಿ ಸೇರ್ಪಡೆ, ಮಹಿಳೆಯರಲ್ಲಿ ಎಚ್‌ಐವಿ ತಡೆ, ಚಿಕಿತ್ಸೆ ಮತ್ತು ಬೆಂಬಲ ನೀಡುವ ಸಲುವಾಗಿ ಸ್ವಸಹಾಯ ಗುಂಪುಗಳು ರೆಡ್‌ ರಿಬ್ಬನ್‌ ಕ್ಲಬ್‌ ಜೊತೆ ಕೆಲಸ ಮಾಡುವುದು, ಪ್ರವಾಸೋದ್ಯಮ ಇಲಾಖೆಯಿಂದ ಕಾಂಡೋಮ್‌ ಬಳಕೆಗೆ ಉತ್ತೇಜನ, ಮಾಹಿತಿ, ಶಿಕ್ಷಣ ಮತ್ತು ಸಂವಹನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಇಎಸ್‌ಐ ಆಸ್ಪತ್ರೆಗಳಲ್ಲಿ ಎಚ್‌ಐವಿ ತಡೆಗಟ್ಟುವಿಕೆ, ಚಿಕಿತ್ಸೆ ಸೇರಿದಂತೆ ಸೇವೆಗಳ ಪ್ಯಾಕೇಜ್‌ ಒದಗಿಸುವುದು, ಸೋಂಕು ಹೊಂದಿರುವ ಕಾರ್ಮಿಕರು ಮತ್ತು ಅವರ ಕುಟುಂಬದವರು ಎದುರಿಸುತ್ತಿರುವ ಕಳಂಕ ಹಾಗೂ ಸಮಾಜದಲ್ಲಿನ ತಾರತಮ್ಯ ನಿವಾರಿಸಲು ಕ್ರಮ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವತಿಯಿಂದ ಎಚ್‌ಐವಿ ಹಾಗೂ ಏಡ್ಸ್‌ನೊಂದಿಗೆ ಬದುಕು ಸಾಗಿಸುತ್ತಿರುವವರಿಗೆ ಅಂತ್ಯೋದಯ ಕಾರ್ಡ್‌ಗಳ ವಿತರಣೆಗೆ ಕ್ರಮ ವಹಿಸಲಾಗುತ್ತಿದೆ. ಈ ಮೂಲಕ ಸುರಕ್ಷಿತ ಜೀವನಕ್ಕೆ ಆಸರೆಯಾಗುವ ಕೆಲಸ ನಡೆಯುತ್ತಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕಾರ್ಯಕರ್ತೆಯರು ಏಡ್ಸ್‌ ಪೀಡಿತ ಗರ್ಭಿಣಿಯರಿಗೆ ಆಪ್ತ ಸಮಾಲೋಚನೆ ಒದಗಿಸುವುದು, ಹದಿಹರೆಯದ ಕಾಲೇಜು ವಿದ್ಯಾರ್ಥಿಗಳಿಗೆ ರೆಡ್‌ ರಿಬ್ಬನ್‌ ಕ್ಲಬ್‌ಗಳ ಸ್ಥಾಪನೆ ಮತ್ತು ಗ್ರಾಮೀಣ ಮಟ್ಟದಲ್ಲಿ ಎಚ್‌ಐವಿ ಸಂಬಂಧಿತ ತಾರತಮ್ಯ ಗುರುತಿಸಿ ವರದಿ ನೀಡಲು ಇಲಾಖೆಯ ತಂಡವೇ ಕಾರ್ಯನಿರ್ವಹಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT