ಗುರುವಾರ , ಡಿಸೆಂಬರ್ 3, 2020
23 °C
ಕೋವಿಡ್‌ ಲೆಕ್ಕಕ್ಕಿಲ್ಲ: ಹಬ್ಬದ ಸಂಭ್ರಮದಲ್ಲಿ ಮಾಸ್ಕ್, ಪರಸ್ಪರ ಅಂತರವಿಲ್ಲದೆ ವ್ಯಾಪಾರ

ಹೂವು-–ಹಣ್ಣು ದುಬಾರಿ: ಕಿಕ್ಕಿರಿದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ದೀಪಾವಳಿ ಅಮಾವಾಸ್ಯೆ ಭಾನುವಾರ ನಡೆಯಲಿದೆ.

ಬಹುತೇಕರು ಲಕ್ಷ್ಮಿಪೂಜೆಗೆ ಸಿದ್ಧತೆ ಮಾಡಿಕೊಂಡು ಹೂವು–ಹಣ್ಣು, ಇತರ ಸಾಮಗ್ರಿ ಖರೀದಿಗೆ ಮಾರುಕಟ್ಟೆಗೆ ಧಾವಿಸಿದ ಪರಿಣಾಮ ಕಿಕ್ಕಿರಿದು ತುಂಬಿತ್ತು.

ಸಾವಿರಾರು ಜನರು ನಗರದ ಕೇಂದ್ರ ಬಸ್‌ ನಿಲ್ದಾಣದ ಎದುರು, ತಾಲ್ಲೂಕು ಕ್ರೀಡಾಂಗಣ, ಜೆ.ಪಿ.ಮಾರುಕಟ್ಟೆ ವಿವಿಧ ರಸ್ತೆ ಬದಿಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯಿತು.

ಪೂಜೆಗೆ ಅಗತ್ಯವಾಗಿರುವ ಚೆಂಡು ಹೂವು, ಬಾಳೆದಿಂಡು, ಕಬ್ಬು, ಕುಂಬಳಕಾಯಿ, ತಳಿರುತೋರಣ, ವಿವಿಧ ತರಹದ ಹಣ್ಣುಗಳು ಕಳೆದ ಬಾರಿಗಿಂತ ದುಬಾರಿಯಾಗಿದ್ದರೂ ಜನರ ಕೊಳ್ಳುವ ಉತ್ಸಾಹ ಕಡಿಮೆಯಾಗಿದ್ದಿಲ್ಲ. ಶುಕ್ರವಾರ ನೀರು ತುಂಬುವ ಹಬ್ಬದೊಂದಿಗೆ ದೀಪಾವಳಿ ಆರಂಭವಾಯಿತು. ಶನಿವಾರ ಹಿರಿಯರ ಪೂಜೆ ನಡೆಯಿತು.

ನಗರದ ಎಲ್ಲ ಶೋ ರೂಂಗಳಲ್ಲಿ ಹೊಸ ವಾಹನ ಖರೀದಿ, ಮುಂಗಡ ಬುಕ್ಕಿಂಗ್‌ಗೆ ಸಾವಿರಾರು ಜನರು ಬಂದಿದ್ದರು. ಭಾನುವಾರ ಅಮಾವಾಸ್ಯೆ ಆಚರಣೆಗೆ ಪ್ರಶಸ್ತ ದಿನವಾಗಿದ್ದು, ಶೇ 90ರಷ್ಟು ಜನರು ಲಕ್ಷ್ಮಿ ಪೂಜೆ ಅಂದೇ ಮಾಡುತ್ತಿದ್ದಾರೆ. 

ಚೆಂಡು ಹೂವು ಒಂದು ಮಾರಿಗೆ ₹ 80 ರಿಂದ ₹ 100, ಕೆಜಿಗೆ ₹ 150ರಿಂದ ₹ 200ವರೆಗೆ ಮಾರಾಟವಾಗುತ್ತಿರುವುದು ಕಂಡು ಬಂತು. ಸೇಬುಹಣ್ಣು 80ಕ್ಕೆ ಮಾರಾಟವಾದವು. ಪೂಜೆಗೆ ಅವಶ್ಯವಿರುವ ಐದು ರೀತಿಯ ವಿವಿಧ ಹಣ್ಣುಗಳ ಪ್ಯಾಕೆಟ್‌ಗೆ ₹ 250ರಂತೆ ಖರೀದಿಸುತ್ತಿರುವುದು ಕಂಡು ಬಂತು.

ಕೊರೊನಾದಿಂದ ಉಂಟಾಗಿದ್ದ ಲಾಕ್‌ಡೌನ್‌ ನಂತರ ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ್ದ ಹೂವಿನ ವ್ಯಾಪಾರಿಗಳು ಮಾರುಕಟ್ಟೆಗೆ ವ್ಯಾಪಕ ಪ್ರಮಾಣದಲ್ಲಿ ಲಗ್ಗೆ ಇಟ್ಟಿದ್ದಾರೆ. ಕುಷ್ಟಗಿ, ಯಲಬುರ್ಗಾ ಭಾಗದಿಂದ ಚೆಂಡು ಹೂವುಗಳು, ಗಂಗಾವತಿ, ಹೊಸಪೇಟೆ, ಬೆಂಗಳೂರಿನಿಂದ ಗುಲಾಬಿ, ಸೇವಂತಿಗೆ, ಮಲ್ಲಿಗೆ ಹೂವುಗಳ ಮಾರಾಟಕ್ಕೆ ವ್ಯಾಪಾರಸ್ಥರು ಬಂದಿದ್ದರು. ಮೂರು ದಿನಗಳವರೆಗೆ ವ್ಯಾಪಾರ ವಹಿವಾಟು ನಡೆಯಲಿದ್ದು, ರೈತರು ತಮ್ಮ ಹೊಲದಲ್ಲಿ ಬೆಳೆದ ತರಕಾರಿ, ಬಾಳೆ, ಕಬ್ಬುಗಳನ್ನು ತಂದಿದ್ದರು.

ತರೇಹವಾರಿ ದೀಪ: ತೂಗುದೀಪ, ದೀಪಾಲೆ ಕಂಬ ಸಹಿತ ವಿವಿಧ ಮಾದರಿಯ ಮಣ್ಣಿನ ಹಣತೆಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಚಿಮಣಿ ದೀಪ, ಆಕಾಶ ಬುಟ್ಟಿಗಳು ಜನರನ್ನು ಆಕರ್ಷಿಸಿದವು. ಸಂತೆ ಮೈದಾನ, ಜವಾಹರ ರಸ್ತೆ, ಮಾರುಕಟ್ಟೆ ರಸ್ತೆಗಳಲ್ಲಿ ಹೂ, ಹಣ್ಣು, ತರಕಾರಿ ಖರೀದಿಗೆ ಜನರು ಮುಗಿಬಿದ್ದಿದ್ದರು. ದಿನಸಿ, ಬಟ್ಟೆ ಅಂಗಡಿ, ಚಿನ್ನಾಭರಣ ಮಳಿಗೆಗಳು ಗ್ರಾಹಕರಿಂದ ತುಂಬಿದ್ದವು.

ಸೇವಂತಿಗೆ ಒಂದು ಮಾರಿಗೆ ₹100, ಕಾಕಡ ₹ 100, ಬಾಳೆಹಣ್ಣು ಕೆ.ಜಿ.ಗೆ ₹ 70, ಕಿತ್ತಳೆ ₹ 60, ದ್ರಾಕ್ಷಿ ₹ 100, ದಾಳಿಂಬೆ ₹100, ಸೀತಾಫಲ ₹ 100, ಬಾಳೆಗಿಡ ಜತೆಗೆ ₹ 50, ಮಾವಿನ ಸೊಪ್ಪು ಒಂದು ಕಟ್ಟಿಗೆ ₹ 10, ಪಟಾಕಿ ಒಂದು ಬಾಕ್ಸಿಗೆ ₹ 150ರಿಂದ 100ರದವರೆಗೆ ಮಾರಾಟವಾದವು. 

ದೇಗುಲದಲ್ಲಿ ಸಂಭ್ರಮ: ಕೊರೊನಾ ನಂತರ ಬಂದ್ ಆಗಿದ್ದ ಹುಲಿಗಿಯ ಹುಲಿಗೆಮ್ಮದೇವಿ, ಕನಕಗಿರಿಯ ಕನಕಾಚಲಪತಿ, ಆನೆಗೊಂದಿ ನವವೃಂದಾವನ, ಗವಿಮಠದ ಗವಿಸಿದ್ಧೇಶ್ವರ ದರ್ಶನಕ್ಕೆ ನೂರಾರು ಭಕ್ತರು ಬಂದಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು