ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳವಂಡಿ: ಹದಗೆಟ್ಟ ರಸ್ತೆಗಳು, ಗುಂಡಿಗಳದ್ದೇ ಕಾರುಬಾರು

ಭಾರಿ ವಾಹನಗಳಿಂದ ರಸ್ತೆ ಸ್ಥಿತಿ ಅಯೋಮಯ; ರಸ್ತೆ ದುರಸ್ತಿಗೊಳಿಸಲು ಒತ್ತಾಯ
Published 12 ಡಿಸೆಂಬರ್ 2023, 6:54 IST
Last Updated 12 ಡಿಸೆಂಬರ್ 2023, 6:54 IST
ಅಕ್ಷರ ಗಾತ್ರ

ಅಳವಂಡಿ: ಹೋಬಳಿ ವ್ಯಾಪ್ತಿಯ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಬಹುತೇಕ ರಸ್ತೆಗಳಲ್ಲಿ ಗುಂಡಿಗಳೇ ಕಾಣುತ್ತವೆ. ಜತೆಗೆ ಅನುಮತಿಯಿಲ್ಲದೇ ಮರಳು ಸಾಗಾಣಿಕೆ ಅಥವಾ ಭಾರದ ವಾಹನಗಳ ಸಂಚಾರದಿಂದ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ. ಡಾಂಬರು ಕಿತ್ತು ಹೋಗಿರುವುದರಿಂದ ವಾಹನ ಸವಾರರಿಗೆ ಧೂಳಿನ ಮಜ್ಜನವಾಗುತ್ತಿದೆ.

ಜಿಲ್ಲೆಯ ದೊಡ್ಡ ಹೋಬಳಿ ಕೇಂದ್ರವಾಗಿರುವ ಅಳವಂಡಿ ವ್ಯಾಪ್ತಿಯಲ್ಲಿ ಅನೇಕ ಗ್ರಾಮೀಣ ರಸ್ತೆಗಳಲ್ಲಿ ಸಂಚಾರ ಸುಗಮವಾಗಿಲ್ಲ. ಇದರಿಂದ ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡುವ ಸ್ಥಿತಿ ಉಂಟಾಗಿದೆ. ಹೀಗಾಗಿ ಹೋಬಳಿ ವ್ಯಾಪ್ತಿಯಲ್ಲಿರುವ ರಸ್ತೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. 

ಘಟ್ಟಿರಡ್ಡಿಹಾಳ-ಕವಲೂರು-ಬನ್ನಿಕೊಪ್ಪ ರಸ್ತೆ, ಮುರ್ಲಾಪುರ-ಮುಂಡರಗಿ ರಸ್ತೆ, ಬೆಟಗೇರಿ-ಬಿಸರಳ್ಳಿ-ಹಿರೇಸಿಂದೋಗಿ ರಸ್ತೆ, ಹೈದರನಗರ-ಹಲವಾಗಲಿ, ಕವಲೂರು-ಗುಡಗೇರಿ ರಸ್ತೆ ಸೇರಿದಂತೆ ಅನೇಕ ರಸ್ತೆಗಳು ತಗ್ಗು-ದಿಣ್ಣೆಗಳಿಂದ ಕೂಡಿದ್ದು, ಸಂಪೂರ್ಣ ಹದೆಗೆಟ್ಟಿವೆ. ಇದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ವಾಹನ ಚಲಾಯಿಸುವಂತಹ ಪರಿಸ್ಥಿತಿ ಎದುರಾಗಿದೆ.

ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ನಿರ್ಲಕ್ಷ್ಯ:

ಅಳವಂಡಿಯಿಂದ ಬೆಳಗಟ್ಟಿವರೆಗಿನ ರಸ್ತೆ ಸಂಪೂರ್ಣ ಹದೆಗೆಟ್ಟಿದೆ. ರಸ್ತೆ ತುಂಬಾ ಹೊಂಡಗಳು ನಿರ್ಮಾಣವಾಗಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿವೆ. ಕಳೆದ ವಾರವಷ್ಟೇ ತಗ್ಗು–ಗುಂಡಿಗಳನ್ನು ಮುಚ್ಚಿದ್ದಾರೆ. ಈ ರಸ್ತೆ ಮೂಲಕ ಶಿಗ್ಗಾಂವಿ-ಕಲ್ಮಾಲ ರಾಜ್ಯ ಹೆದ್ದಾರಿ ಹಾದುಹೋಗಿವೆ. ಆದರೆ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿತ್ಯ ರಸ್ತೆಯ ಮೂಲಕ ಭಾರ ವಾಹನಗಳ ಸಂಚಾರ ಸಾಮಾನ್ಯವಾಗಿದೆ. ಸೋಲಾರ್ ಹಾಗೂ ಫ್ಯಾನ್ ಕಂಪನಿ ಲಾರಿಗಳ, ಮರಳು ಹಾಗೂ ಮಣ್ಣು ಸಾಗಾಣಿಕೆ ಲಾರಿಗಳ ಓಡಾಟದಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ನಿತ್ಯ ಪ್ರಯಾಣಿಕರಿಗೆ ಧೂಳಿನ ಮಜ್ಜನವಾಗುತ್ತಿದೆ. ಹೋಬಳಿ ವ್ಯಾಪ್ತಿಯಲ್ಲಿ ಅನೇಕ ಗ್ರಾಮಗಳ ರಸ್ತೆ ಹಾಳಾಗಿವೆ. ಅದರ ನಿರ್ವಹಣೆಗೆ ದಿಕ್ಕು ತೋಚದಂತಾಗಿದೆ. ಗ್ರಾಮೀಣ ಭಾಗದ ರಸ್ತೆ ದುರಸ್ತಿಗೆ ಯಾವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ವಾಗ್ದಾನ ನೀಡಿದ್ದರೂ ದುರಸ್ತಿಯಾಗಿಲ್ಲ...

ಘಟ್ಟಿರಡ್ಡಿಹಾಳ-ಮುಂಡರಗಿ ರಸ್ತೆಗಳು, ಹಲವು ವರ್ಷಗಳ ಹಿಂದೆ ಡಾಂಬರೀಕರಣ ಮಾಡಲಾಗಿತ್ತು. ಬಳಿಕ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಕೆಲವೆಡೆ ಡಾಂಬರು ಕಿತ್ತುಹೋಗಿದೆ. ಆದರೆ ಈವರೆಗೂ ಸಂಬಂಧಿಸಿದ ಅಧಿಕಾರಿಗಳಾಗಲಿ ಅಥವಾ ರಾಜಕಾರಣಿಗಳಾಗಲಿ ಗಮನಹರಿಸಿಲ್ಲ. ಕಳೆದ ಹಲವು ದಶಕಗಳಿಂದ ಸಂಸದರಿಗೆ, ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಿಂದೆ ಲೋಕಸಭಾ ಚುನಾವಣೆಯಲ್ಲಿ ರಸ್ತೆ ಸಂಬಂಧ ಚುನಾವಣೆ ಬಹಿಷ್ಕರಿಸಲು ಘಟ್ಟಿರಡ್ಡಿಹಾಳ ಗ್ರಾಮಸ್ಥರು ನಿರ್ಧರಿಸಿದ್ದರು. ಆದರೆ ಜಿಲ್ಲಾಧಿಕಾರಿಗಳು ರಸ್ತೆ ದುರಸ್ತಿ ಬಗ್ಗೆ ವಾಗ್ದಾನ ಮಾಡಿದ್ದರು. ಈಗ ಮತ್ತೊಂದು ಲೋಕಸಭೆ ಚುನಾವಣೆ ಬಂದಿದೆ. ಆದರೆ ಈವರೆಗೂ ರಸ್ತೆ ದುರಸ್ತಿಯಾಗಿಲ್ಲ. ಕೂಡಲೇ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಬೇಕು ಎಂಬುದು ಘಟ್ಟಿರಡ್ಡಿಹಾಳ ಗ್ರಾಮಸ್ಥರ ಒತ್ತಾಯವಾಗಿದೆ.

ಬಸ್‌ಗಳ ಸಂಖ್ಯೆ ಹೆಚ್ಚಿಸಲು ಒತ್ತಾಯ
ಅಳವಂಡಿ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಬಸ್‌ಗಳ ಕೊರತೆಯಿದೆ. ಇದರಿಂದಾಗಿ ವೈಯಕ್ತಿಕ ಕೆಲಸ, ಶಾಲೆಗಳಿಗೆ ಪಟ್ಟಣ, ನಗರಗಳಿಗೆ ತೆರಳಲು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಶಕ್ತಿಯೋಜನೆ ಜಾರಿಯಾದ ಬಳಿಕ ಬಹುತೇಕ ಸಾರಿಗೆ ಬಸ್‌ಗಳು ನಿಗದಿತ ಸಂಖ್ಯೆಗಿಂತ ದುಪ್ಪಟ್ಟು ಪ್ರಯಾಣಿಕರಿಂದ ತುಂಬುತ್ತಿವೆ. ‌ಇದರಿಂದಾಗಿ ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜು, ಕಚೇರಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಜತೆಗೆ ಕೊಪ್ಪಳ-ಮುಂಡರಗಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೇಟಗೇರಿ ರಸ್ತೆಯ ದುಸ್ಥಿತಿ.
ಬೇಟಗೇರಿ ರಸ್ತೆಯ ದುಸ್ಥಿತಿ.

ಗಡಿಗ್ರಾಮಗಳಿಗಿಲ್ಲ ರಸ್ತೆ ಅಭಿವೃದ್ಧಿ ಭಾಗ್ಯ

ಕೊಪ್ಪಳ ಜಿಲ್ಲೆಯ ಗಡಿಗ್ರಾಮಗಳಾದ ಘಟ್ಟಿರಡ್ಡಿಹಾಳ, ಮುರ್ಲಾಪುರ, ಗುಡಗೇರಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳಿಗೆ ಅಭಿವೃದ್ಧಿ ಭಾಗ್ಯ ದೊರೆತಿಲ್ಲ. ರಸ್ತೆಗಳಿಗೆ ಹಾಕಲಾಗಿದ್ದ ಡಾಂಬರು ಕಿತ್ತುಹೋಗಿದೆ. ರಸ್ತೆಯಲ್ಲಿ ಹಾಕಲಾಗಿದ್ದ ಜಲ್ಲಿಕಲ್ಲು ರಸ್ತೆ ತುಂಬ ಹರಡಿಕೊಂಡಿದ್ದು, ಸಂಚಾರ ದುಸ್ತರವಾಗಿದೆ. ಹೀಗಾಗಿ ಗಡಿಗ್ರಾಮಗಳ ರಸ್ತೆ ದುರಸ್ತಿಗೆ ಈ ಭಾಗದ ಶಾಸಕರು, ಸಂಸದರು ಹಾಗೂ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೊಳಿಸಲು ಇಚ್ಛಾಶಕ್ತಿ ತೋರಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶಗಳ ರಸ್ತೆಗಳ ಹದಗೆಟ್ಟಿದ್ದು, ಅವುಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಲೋಕೋಪಯೋಗಿ ಇಲಾಖೆ ಸಚಿವರಿಗೆ ಮನವಿ ಮಾಡಿದ್ದೇನೆ
-ರಾಘವೇಂದ್ರ ಹಿಟ್ನಾಳ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT