13 ವರ್ಷದಿಂದ ತೆರಿಗೆ ಕಟ್ಟದ ರೈಸ್ ಮಿಲ್ ಮಾಲೀಕರು: ಬಾಕಿ ವಸೂಲಿಗೆ ಡಿಸಿ ಆದೇಶ

7

13 ವರ್ಷದಿಂದ ತೆರಿಗೆ ಕಟ್ಟದ ರೈಸ್ ಮಿಲ್ ಮಾಲೀಕರು: ಬಾಕಿ ವಸೂಲಿಗೆ ಡಿಸಿ ಆದೇಶ

Published:
Updated:
Deccan Herald

ಕೊಪ್ಪಳ:  13 ವರ್ಷಗಳಿಂದ ಜಿಲ್ಲೆಯ ಗಂಗಾವತಿ ನಗರಸಭೆಗೆ ಆಸ್ತಿ ತೆರಿಗೆ ಕಟ್ಟದ 18 ಮಾಲೀಕರ ಆಸ್ತಿ ಜಪ್ತಿಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ 18 ಅಕ್ಕಿ ಗಿರಣಿ ಮಾಲೀಕರು ನಗರಸಭೆಗೆ ₹ 55.56 ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿದ್ದು, ತಕ್ಷಣ ಹಣ ಪಾವತಿಸದೇ ಇದ್ದರೆ ಬಂದ್ ಮಾಡಿ ಆಸ್ತಿ ಜಪ್ತಿ ಮಾಡಲಾಗುವುದು ಎಂದು ನೋಟೀಸ್ ಜಾರಿಗೊಳಿಸಿದ್ದಾರೆ.

ನಗರಸಭೆ ಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕರಿಂದ ಬರಬೇಕಿರುವ ಎಲ್ಲ ತೆರಿಗೆ ಹಣವನ್ನು ಸಂಗ್ರಹಿಸಿ ವಿವಿಧ ಕಾಮಗಾರಿ ಹಮ್ಮಿಕೊಳ್ಳಬೇಕು ಎಂದು ಈಚೆಗೆ ಗಂಗಾವತಿಗೆ ಭೇಟಿ ನೀಡಿದ್ದಾಗ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ, ಆಸ್ತಿ ತೆರಿಗೆ ವಸೂಲಿಯಲ್ಲಿ ಆಗುತ್ತಿರುವ ಸಮಸ್ಯೆ ಕುರಿತು ನಗರಸಭೆ ಮುಖ್ಯಾಧಿಕಾರಿ ಶ್ರುತಿ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು.

ಈ ಕುರಿತು ಜಿಲ್ಲಾಧಿಕಾರಿಗಳು ಸ್ಪಷ್ಟವಾದ ನಿರ್ಧಾರ ತೆಗೆದುಕೊಂಡಿದ್ದು, ಆಸ್ತಿ ಕರ ಪಾವತಿಸದ ರೈಸ್ ಮಿಲ್ ಮಾಲೀಕರು ಮತ್ತು ಇತರ ಉದ್ದಿಮೆದಾರರ ಆಸ್ತಿ ಜಪ್ತಿಗೆ ಸೂಚನೆ ನೀಡಿರುವುದು ತಾಲ್ಲೂಕಿನ ರಾಜಕೀಯದಲ್ಲಿ ತಲ್ಲಣ ಮೂಡಿಸಲಿದೆ ಎಂಬ ವಿಶ್ಲೇಷಣೆಯೂ ಕೇಳಿ ಬರುತ್ತಿದೆ.

ವಸೂಲಿಗೆ ಮುಂದಾಗದ ನಗರಸಭೆ: ನಗರಸಭೆಗೆ ಬರಬೇಕಿರುವ ಆಸ್ತಿ ಕರ ಸೇರಿದಂತೆ ಅನೇಕ ತೆರಿಗೆಗಳನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಲು ಇಲ್ಲಿನ ಸಿಬ್ಬಂದಿ ಮುಂದಾಗುತ್ತಿಲ್ಲ ಎಂಬ ಆರೋಪ ಮೇಲಿಂದ ಮೇಲೆ ಕೇಳಿ ಬರುತ್ತಿವೆ. ಬಡಪಾಯಿಗಳ ಮೇಲೆ ಹೆದರಿಸಿಯಾದರೂ ತೆರಿಗೆ ಕಟ್ಟಿಸಿಕೊಳ್ಳುವ ಸಿಬ್ಬಂದಿ, ಪ್ರಭಾವಿಗಳಿಗೆ ನೋಟಿಸ್ ನೀಡುವ ನಾಟಕವಾಡಿ ಕೈ ತೊಳೆದುಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ.

ಈ ಎಲ್ಲ ಕಾರಣಗಳಿಂದ ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ನೀಡಿ ತೆರಿಗೆ ಸಂಗ್ರಹಣೆಗೆ ಮುಂದಾಗಿದ್ದು, ಅವರಿಗೆ  ಪ್ರೊಬೇಷನರಿ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್ ಜೊತೆಯಾಗಲಿದ್ದಾರೆ. 

ಪ್ರಭಾವಿಗಳ ಕೈವಾಡ: ಕಳೆದ ಅವಧಿಯಲ್ಲಿ ಪ್ರಭಾವಿಗಳ ಕೈವಾಡದಿಂದ ಬಾಕಿ ಹಣವನ್ನು ನಗರಸಭೆಗೆ ತುಂಬಲು ಹಿಂದೇಟು ಹಾಕಿದ್ದು, ವಸೂಲಿಗೂ ಕೂಡಾ ಕ್ರಮ ಕೈಗೊಳ್ಳಲು ಸಿಬ್ಬಂದಿಗೆ ಸಾಧ್ಯವಾಗಿಲ್ಲ. ಬಾಕಿ ವಸೂಲಿಗೆ ನೋಟಿಸ್ ಹಾಗೂ ಮಾಹಿತಿ ನೀಡಿದರೂ ಅದಕ್ಕೆ ಉತ್ತರ ಬರುತ್ತಿರಲಿಲ್ಲ. ಕನಿಷ್ಠ ಯಾವುದೇ ಕ್ರಮವನ್ನು ಕೈಗೊಂಡಿಲ್ಲ.

ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಅಕ್ಕಿ ಗಿರಣಿ ಮಾಲೀಕ ಅಥವಾ ಉದ್ದಿಮೆಗಳ ಜೊತೆ ಉತ್ತಮ ಸ್ನೇಹ ಇರುವುದರಿಂದ ತೆರಿಗೆ ತುಂಬುವಲ್ಲಿ, ತುಂಬಿಸುವಲ್ಲಿ ಅಷ್ಟೊಂದು ಆಸಕ್ತಿ ಜನಪ್ರತಿನಿಧಿಗಳಲ್ಲಿ ಕಂಡು ಬರುತ್ತಿಲ್ಲ. ಈಗ ಜಿಲ್ಲಾಧಿಕಾರಿಗಳು ಆದೇಶ ನೀಡಿರುವುದು ಬಿಸಿತುಪ್ಪವಾಗಿ ಪರಿಣಿಮಿಸಿದೆ. ಅವರ ಆದೇಶವನ್ನು ಪಾಲಿಸಬೇಕಾದ ಸಿಬ್ಬಂದಿ ಹೇಗೆ ಸಹಕಾರ ನೀಡುತ್ತಾರೆ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ.

ರೈಸ್ ಮಿಲ್ ಮಾಲೀಕರ ವಾದವೇನು?: ಸತತ ಬರಗಾಲ, ಗುಣಮಟ್ಟದ ವಿದ್ಯುತ್ ಸಮಸ್ಯೆ, ಕಾರ್ಮಿಕರ ಕೊರತೆಯಿಂದ ಬಾಕಿ ಹಣ ತುಂಬಲು ಆಗುತ್ತಿಲ್ಲ ಎಂದು ರೈಸ್ ಮಿಲ್ ಮಾಲೀಕರು ಹೇಳುತ್ತಾರೆ.

ಈ ಕುರಿತು ತಾಲ್ಲೂಕಿನ ರೈಸ್ ಮಿಲ್ ಮಾಲೀಕರ ಸಂಘದ ಅಧ್ಯಕ್ಷ ಸೂರಿ ಬಾಬು ಅವರು ಸಂಪರ್ಕಕ್ಕೆ ಸಿಗಲಿಲ್ಲ.

ನಗರಸಭೆ ರಾಜಕೀಯ

ಗಂಗಾವತಿ ನಗರಸಭೆಯಲ್ಲಿನ ರಾಜಕೀಯ ಅಭಿವೃದ್ಧಿ ಕೆಲಸಕ್ಕೂ ಅಡ್ಡಿಯಾಗಿದೆ. ಕಳೆದ 9 ತಿಂಗಳಿಂದ ಪೌರಕಾರ್ಮಿಕರ ವೇತನ  ಪಾವತಿ ಮಾಡಿಲ್ಲ. ಆದರೆ, ಅಧಿಕಾರಿಗಳಿಗೆ ಈ ಸಮಸ್ಯೆ ಇಲ್ಲ. ಅವರ ವೇತನ ನಿಯಮಿತವಾಗಿ ಬರುತ್ತದೆ.

ಆರ್ಥಿಕ ಶಕ್ತಿ ಕ್ರೂಢೀಕರಿಸಿ ಕನಿಷ್ಠ ವೇತನ ಪಡೆಯುವ ಸ್ವಚ್ಛತಾ ಕೆಲಸದವರಿಗೆ ಸಂಬಳ ನೀಡುವುದಿಲ್ಲ ಎಂದರೆ ಯಾವ ನ್ಯಾಯ ಎಂದು ಪೌರಕಾರ್ಮಿಕರು ಪ್ರಶ್ನಿಸುತ್ತಾರೆ.

ಈಗ ಹೊಸ ನಗರಸಭೆ ಆಡಳಿತ ಅಸ್ತಿತ್ವಕ್ಕೆ ಬರಲಿದ್ದು, ಅಧಿಕಾರ ಹೇಗೆ ನಡೆಯಲಿದೆ ಎಂಬ ಕುತೂಹಲ ನಾಗರಿಕರಲ್ಲಿ ಇದೆ.

 * ಗಂಗಾವತಿ ನಗರದ ಅಭಿವೃದ್ಧಿ ದೃಷ್ಟಿಯಿಂದ ಬಾಕಿ ಉಳಿಸಿಕೊಂಡಿರುವ ತೆರಿಗೆ ಹಣವನ್ನು ಎಲ್ಲರೂ ಪ್ರಾಮಾಣಿಕವಾಗಿ ಪಾವತಿಸಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು
-ಪಿ.ಸುನೀಲ್ ಕುಮಾರ್, ಜಿಲ್ಲಾಧಿಕಾರಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !