ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ | ಮಾವು ಮೇಳ: ₹1.90 ಕೋಟಿಗೂ ಹೆಚ್ಚಿನ ವಹಿವಾಟು

Published 24 ಮೇ 2024, 3:09 IST
Last Updated 24 ಮೇ 2024, 3:09 IST
ಅಕ್ಷರ ಗಾತ್ರ

ಕೊಪ್ಪಳ: ತೋಟಗಾರಿಕೆ ಇಲಾಖೆಯು ಮಾವು ಬೆಳೆಯುವ ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ನಗರದಲ್ಲಿ ಹನ್ನೊಂದು ದಿನ ಆಯೋಜಿಸಿದ್ದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಗುರುವಾರ ತೆರೆ ಬಿದ್ದಿತು.

ಈ ಅವಧಿಯಲ್ಲಿ 230 ಟನ್‌ಗಿಂತಲೂ ಹೆಚ್ಚು ವಿವಿಧ ಮಾವಿನ ಹಣ್ಣುಗಳು ಮಾರಾಟವಾಗಿದ್ದು, ₹1.90 ಕೋಟಿಗೂ ಅಧಿಕ ವಹಿವಾಟು ನಡೆದಿದೆ. ಹಿಂದಿನ ಎಲ್ಲ ಮೇಳಕ್ಕಿಂತಲೂ ಈ ಬಾರಿ ಹೆಚ್ಚಿನ ವಹಿವಾಟು ನಡೆದಿದೆ.  

‘60ಕ್ಕೂ ಹೆಚ್ಚಿನ ರೈತರು ಮೇಳದಲ್ಲಿ ಹೆಸರು ನೋಂದಾಯಿಸಿದ್ದರು. ರೈತರು ಹಾಗೂ ರೈತ ಉತ್ಪಾದಕ ಸಂಘಗಳು, ಹಾಪ್‌ಕಾಮ್ಸ್, ಇಲಾಖಾ ತೋಟಗಾರಿಕೆ ಕ್ಷೇತ್ರಗಳಿಗೆ ನೇರ ಮಾರುಕಟ್ಟೆಯೂ ಮೇಳದಿಂದಾಗಿ ಲಭಿಸಿತು. ರೈತರು ನೈಸರ್ಗಿಕವಾಗಿ ಮತ್ತು ವೈಜ್ಞಾನಿಕವಾಗಿ ಮಾಗಿಸಿದ 15 ಕ್ಕೂ ಹೆಚ್ಚಿನ ವಿವಿಧ ಮಾವಿನ ತಳಿಯ ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿದ್ದಾರೆ’ ಎಂದು ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ.

‘ಮೇಳದಲ್ಲಿ ಕೇಸರ್ ಮತ್ತು ದಶಹರಿ ತಳಿಯ ಮಾವು ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು 150ಟನ್‌ಗೂ ಹೆಚ್ಚು ಮಾರಾಟವಾಗಿದೆ. ಬೆನೆಶಾನ್, ಕೇಸರ್, ದಶಹರಿ, ರಸಪುರಿ, ಸ್ವರ್ಣರೇಖಾ, ಇಮಾಮ ಪಸಂಧ, ಆಪೋಸು, ಮಲ್ಲಿಕಾ ತಳಿಗಳನ್ನು ಜನ ಖರೀದಿಸಿದ್ದಾರೆ. ವಿವಿಧ ತಳಿಯ ಮಾವಿನ ಹಣ್ಣುಗಳು 80 ಟನ್‌ಗೂ ಹೆಚ್ಚು ಮಾರಾಟವಾಗಿದೆ’ ಎಂದು ಹೇಳಿದ್ದಾರೆ.

ಮೇಳದಲ್ಲಿ ಭಾಗವಹಿಸಿದ್ದ ರೈತರು ಹಾಗೂ ಮಾರಾಟಗಾರರಿಗೆ ತೋಟಗಾರಿಕೆ ಇಲಾಖೆ ವತಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT