ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಶಾಲೆಗೆ ಬಂದ ದಿನವೇ ಸಿಗಲಿದೆ ಸಮವಸ್ತ್ರ

ಮಕ್ಕಳ ಸ್ವಾಗತಕ್ಕೆ ಸಜ್ಜಾದ ಜಿಲ್ಲೆಯ ಶಿಕ್ಷಣ ಇಲಾಖೆ, 131 ಎಲ್‌ಕೆಜಿ, ಯುಕೆಜಿ ಮಂಜೂರು
Published 31 ಮೇ 2024, 5:44 IST
Last Updated 31 ಮೇ 2024, 5:44 IST
ಅಕ್ಷರ ಗಾತ್ರ

ಕೊಪ್ಪಳ: ರಜೆಯ ಸಮಯದಲ್ಲಿ ಬಿರು ಬೇಸಿಗೆಯ ದಿನಗಳನ್ನು ಕಳೆದು ಮರಳಿ ಶಾಲೆಗೆ ಬರಲು ಸಜ್ಜಾಗಿರುವ ವಿದ್ಯಾರ್ಥಿಗಳ ಸ್ವಾಗತಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಿದ್ಧತೆ ಮಾಡಿಕೊಂಡಿವೆ. ಮಕ್ಕಳು ಶಾಲೆಗೆ ಬಂದ ದಿನವೇ ಮೊದಲ ಜೊತೆಯ ಸಮವಸ್ತ್ರ ಸಿಗಲಿದೆ.

ಹಲವು ವರ್ಷಗಳ ಹಿಂದೆ ಪ್ರತಿ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಶಾಲಾ ಸಮವಸ್ತ್ರಗಳನ್ನು ಹಂಚಿಕೆ ಮಾಡುವುದು ವಿಳಂಬವಾಗುತ್ತಿತ್ತು. ಆದರೆ ಈ ಸಲ ಜಿಲ್ಲೆಯಲ್ಲಿರುವ 1128 ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಈ ಸೌಲಭ್ಯಗಳನ್ನು ಒದಗಿಸಲು ಇಲಾಖೆ ಎಲ್ಲ ತಯಾರಿಗಳನ್ನು ಮಾಡಿಕೊಂಡಿದೆ. ಈಗಾಗಲೇ ಸಂಬಂಧಪಟ್ಟ ಬಿಇಒಗಳ ಮೂಲಕ ಶಾಲೆಗಳಿಗೆ ತಲುಪಿಸಲಾಗಿದೆ.

ಈಗಾಗಲೇ ಶಾಲೆಗಳು ಆರಂಭಗೊಂಡಿದ್ದು ಶಿಕ್ಷಕರು ಹಾಜರಾಗಿದ್ದಾರೆ. ಶಾಲಾ ಸ್ವಚ್ಛತೆ, ಹೊಸ ಡೆಸ್ಕ್‌ಗಳ ಅಳವಡಿಕೆ, ತರಗತಿಗಳ ವ್ಯವಸ್ಥೆ ಸೇರಿದಂತೆ ಹಲವು ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಶುಕ್ರವಾರ (ಮೇ 31) ಮಕ್ಕಳಿಗೆ ಶಾಲೆ ಆರಂಭವಾಗಲಿದೆ. ಶಾಲೆ ಆರಂಭವಾಗಿ ಎರಡು ದಿನಕ್ಕೆ ಮರಳಿ ಒಂದು ದಿನ ರಜೆಯಿದ್ದು ಬಹುತೇಕ ಕಡೆ ಸೋಮವಾರದಿಂದಲೇ ಮಕ್ಕಳು ನಿಯಮಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಬರುತ್ತಾರೆ ಎನ್ನುವ ನಿರೀಕ್ಷೆ ಶಿಕ್ಷಕರದ್ದು.   

ಈಗಾಗಲೇ ಎರಡು ಜೊತೆ ಸಮವಸ್ತ್ರ ಬಂದಿದ್ದರೂ ಕೆಲವು ವಿದ್ಯಾರ್ಥಿಗಳು ಆರಂಭದಲ್ಲಿ ಶಾಲೆಗೆ ಬಂದು ಮರಳಿ ಬರುವುದಿಲ್ಲ. ಇಂಥ ಪ್ರಕರಣಗಳು ಪ್ರತಿವರ್ಷವೂ ನಡೆಯುವ ಕಾರಣ ಶಾಲೆಗೆ ಬಂದ ಮೊದಲ ದಿನ ಒಂದು ಜೊತೆ, 15ರಿಂದ 20 ದಿನಗಳು ಕಳೆದ ಬಳಿಕ ಇನ್ನೊಂದು ಜೊತೆಯ ಸಮವಸ್ತ್ರ ನೀಡಲು ಇಲಾಖೆ ಯೋಜನೆ ರೂಪಿಸಿಕೊಂಡಿದೆ. ರಾಜ್ಯ ಸರ್ಕಾರ ಈಗಾಗಲೆ ಶೂ ಹಾಗೂ ಸಾಕ್ಸ್‌ ಖರೀದಿಗೂ ಆಯಾ ಜಿಲ್ಲೆಗಳಿಗೆ ಹಣ ಪಾವತಿ ಮಾಡಿದ್ದು ಇವು ಕೂಡ ಸಕಾಲದಲ್ಲಿಯೇ ವಿದ್ಯಾರ್ಥಿಗಳಿಗೆ ತಲುಪಲಿದೆ.

131 ತರಗತಿ ಮಂಜೂರು: ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದ ಶಿಕ್ಷಣ ಕಲಿಕೆ ಪ್ರಭಾವ ವ್ಯಾಪಕವಾಗಿರುವ ಕಾರಣ ಬಹಳಷ್ಟು ಜನ ಖಾಸಗಿಯತ್ತ ವಾಲುತ್ತಿದ್ದಾರೆ. ಇದನ್ನು ತಪ್ಪಿಸಿ ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಸರ್ಕಾರ ಮೊದಲಿನಿಂದಲೂ ಎಲ್‌ಕೆಜಿ ಹಾಗೂ ಯುಕೆಜಿಗಳನ್ನು ನಡೆಸಿಕೊಂಡು ಬರುತ್ತಿದೆ. ಈ ವರ್ಷ ಹೊಸದಾಗಿ ಜಿಲ್ಲೆಗೆ 131 ತರಗತಿಗಳನ್ನು ಮಂಜೂರು ಮಾಡಿದೆ.

ಈ ಶಾಲೆಗಳು ಮೊದಲು ಹೋಬಳಿಗೆ ಕಡಿಮೆ ಪ್ರಮಾಣದಲ್ಲಿದ್ದವು. ಈಗ ಇನ್ನಷ್ಟು ಶಾಲೆಗಳು ಮಂಜೂರಾಗಿದ್ದು, ಗ್ರಾಮೀಣ ಪ್ರದೇಶಗಳ ಪೋಷಕರು ತಮ್ಮ ಮಕ್ಕಳಿಗೆ ಸ್ಥಳೀಯವಾಗಿಯೇ ಇಂಗ್ಲಿಷ್‌ ಮಾಧ್ಯಮದಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿಸಲು ಅವಕಾಶ ಲಭಿಸಲಿದೆ. ಪೂರ್ವಪ್ರಾಥಮಿಕ ಶಿಕ್ಷಣವನ್ನು ಇಲಾಖೆ ಆರಂಭಿಸಿದ್ದರೂ ಈ ಹೊಸ ತರಗತಿಗಳ ಮಕ್ಕಳಿಗೆ ಪಾಠ ಮಾಡಲು ಇಲಾಖೆ ಅತಿಥಿ ಶಿಕ್ಷಕರ ಮೇಲೆಯೇ ಅವಲಂಬನೆಯಾಗಿದೆ.

ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಶೂಗಳ ಖರೀದಿಗೆ ಹಣ ಹೀಗೆ ಎಲ್ಲ ವ್ಯವಸ್ಥೆಯೂ ಆಗಿದೆ. ಶಾಲೆಗೆ ಬರುವ ಮಕ್ಕಳಿಗೆ ಅದ್ದೂರಿ ಸ್ವಾಗತವೂ ಸಿಗಲಿದೆ.
ಶ್ರೀಶೈಲ ಬಿರಾದಾರ, ಡಿಡಿಪಿಐ, ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT